ದೊಡ್ಡರಸಿನಕರೆ ಗ್ರಾಮದಲ್ಲಿ ಚಿತ್ರನಟ ಡಾ.ಅಂಬರೀಷ್ ಅವರ ಪುತ್ಥಳಿ ಮಂಟಪ ಅನಾವರಣ ಹಾಗೂ ಅಂಬಿ ರಂಗಮಂದಿರವನ್ನು ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದನಾಥಸ್ವಾಮೀಜಿ ಉದ್ಘಾಟಿಸಿದರು. ಸುಮಲತಾ ಅಂಬರೀಷ್, ಅಭಿಷೇಕ್ ಅಂಬರೀಷ್, ಸಮಾಜ ಸೇವಕ ಕದಲೂರು ರವಿ ಮತ್ತಿತರರಿದ್ದರು.
ಕೆ.ಎಂ.ದೊಡ್ಡಿ: ನಟ ಅಂಬರೀಷ್ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದು, ಮುಖ್ಯಮಂತ್ರಿಯಾಗುವ ಎಲ್ಲ ಅವಕಾಶಗಳಿದ್ದರೂ ಅವರು ಅಧಿಕಾರಕ್ಕೆ ಅಂಟಿ ಕೊಂಡಿರಲಿಲ್ಲ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಮೀಪದ ದೊಡ್ಡರಸಿನಕರೆ ಗ್ರಾಮದಲ್ಲಿ ಮಂಗಳವಾರ ಚಿತ್ರನಟ ಡಾ.ಅಂಬರೀಷ್ ಅವರ ಪುತ್ಥಳಿ ಮಂಟಪ ಅನಾವರಣ ಹಾಗೂ ಅಂಬಿ ರಂಗಮಂದಿರ ಉದ್ಘಾಟಿಸಿ ಮಾತನಾಡಿ, ಅಂಬರೀಶ್ ಅವರು ಕನ್ನಡದ ದೊಡ್ಡ ಆಸ್ತಿ, ಅವರ ನಿಸ್ವಾರ್ಥ ಸೇವಾಗುಣ ಇಂದಿಗೂ ಆದರ್ಶ ಹಾಗೂ ಅನುಕರಣೀಯ ಎಂದರು.
ಅಂಬರೀಷ್ ಅವರು ಕನ್ನಡ ಚಿತ್ರರಂಗ ಹಾಗೂ ರಾಜ್ಯಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಕಾವೇರಿ ನದಿ ನೀರಿನ ವಿಷಯವಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ನಾಡು-ನುಡಿ, ಜಲದ ವಿಷಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದರು. ಎಲ್ಲ ಪಕ್ಷದವರ ಜತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು ಎಂದು ಗುಣಗಾನ ಮಾಡಿದರು.
ನಟ ಅಭಿಷೇಕ ಅಂಬರೀಷ್ ಮಾತನಾಡಿ, ಅಂಬರೀಷ್ ಮಂಡ್ಯ ಜಿಲ್ಲೆಯಲ್ಲಿ ಹುಟ್ಟಿ ವಿಶ್ವ ಮಟ್ಟದಲ್ಲಿ ಜಿಲ್ಲೆಯ ಗರಿಮೆಯನ್ನು ಹೆಚ್ಚಿಸಿದವರು. ಚಿತ್ರರಂಗದಲ್ಲಿ ಹಾಗೂ ರಾಜಕಾರಣದಲ್ಲಿ ಅಗಾಧವಾದ ಸಾಧನೆಗೈದು ನಾಡಿನ ಜನರ ಹೃದಯದಲ್ಲಿ ಅರಾಜಮಾರಾಗಿದ್ದರೆ ಎಂದು ಭಾವುಕರಾದರು.
ನಮ್ಮ ತಂದೆಯವರ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರು ತೋರಿದ ಮಾರ್ಗದಲ್ಲಿ ಅವರ ಜನಪರವಾದ ಆಶಯಗಳನ್ನು ಈಡೇರಿಸುವ ಸಂಕಲ್ಪ ತೊಟ್ಟು ಸದಾ ಜನರೊಂದಿಗೆ ಸಕ್ರಿಯವಾಗಿ ಇದ್ದು ಸೇವೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಮಾಜಿ ಸಂಸದೆ ಸುಮಲತಾ ಅಂಬರೀಷ್ ಮಾತನಾಡಿದರು. ಸಮಾಜ ಸೇವಕ ಕದಲೂರು ರವಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಸವರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ಶರತ್, ಮುಖಂಡರಾದ ಬೇಲೂರು ಸೋಮಶೇಖರ್, ಸಿದ್ದಾಂತ್ ಸಾಗರ್, ರುದ್ರೇಗೌಡ ಮತ್ತಿತರರು ಹಾಜರಿದ್ದರು.