ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ವಾರ್ಷಿಕ ಪ್ರಾಯೋಗಿಕ ಪರೀಕ್ಷಾ ಕಾರ್ಯಾಗಾರವನ್ನು ಭಾರತೀ ವಿದ್ಯಾಸಂಸ್ಥೆಯ ಚೇರ‌್ಮನ್, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಉದ್ಘಾಟಿಸಿದರು. ಬಿ.ಎಂ.ನಂಜೇಗೌಡ, ಸಿ.ವಿ ಮಲ್ಲಿಕಾರ್ಜುನ್, ಜಿ.ಬಿ.ಪಲ್ಲವಿ ಇತರರಿದ್ದರು. 
ಮಂಡ್ಯ

ಗುಣಮಟ್ಟದ ಶಿಕ್ಷಣ ನೀಡಲು ಆದ್ಯತೆ ನೀಡಿ

ಎ. ಆರ್. ರಘುರಾಮ
ಕೆ.ಎಂ.ದೊಡ್ಡಿ : ಕಾಲೇಜು ಉಪನ್ಯಾಸಕರು ರಾಜಕೀಯದಿಂದ ದೂರವಿದ್ದು, ಮಕ್ಕಳು ಗುಣಮಟ್ಟದ ಶಿಕ್ಷಣ ನೀಡುವ ಕಡೆ ಗಮನ ಹರಿಸಬೇಕು ಎಂದು ಭಾರತೀ ವಿದ್ಯಾಸಂಸ್ಥೆಯ ಚೇರ‌್ಮನ್, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಕಿವಿಮಾತು ಹೇಳಿದರು.
ಇಲ್ಲಿನ ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಡ್ಯ, ಭಾರತೀನಗರದ ಭಾರತೀ ಎಜುಕೇಷನ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಾರ್ಷಿಕ ಪ್ರಾಯೋಗಿಕ ಪರೀಕ್ಷಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕರ ಗುರಿ ಶೈಕ್ಷಣಿಕ ಪ್ರಗತಿಗಷ್ಟೇ ಸಿಮೀತವಾಗಿರಬೇಕು. ಅದು ಬಿಟ್ಟು ರಾಜಕೀಯ ಗುಂಗಿನಲ್ಲಿ ತೇಲದೆ ಗುಣಮಟ್ಟದ ಶಿಕ್ಷಣ ನೀಡದರೆ ಮಾತ್ರ ಶೈಕ್ಷಣಿಕ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಾಂಶುಪಾಲ, ಉಪನ್ಯಾಸಕರು ಕಾರ್ಯ ಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.
ಉಪನ್ಯಾಸಕರು ಕ್ರಿಯಾಶೀಲರಾಗಿರಬೇಕು. ಕೇವಲ ವಿದ್ಯಾರ್ಥಿಗಳ ಪಾಸಿಗಷ್ಟೇ ಸೀಮಿತವಾಗಿರದೆ, ಸ್ಪರ್ಧಾತ್ಮಕ ಪರೀಕ್ಷೆಗೆ ಅನುಗುಣವಾಗಿ ಭವಿಷ್ಯವನ್ನು ರೂಪಿಸಿಕೊಳ್ಳಲು ಗುಣಮಟ್ಟದ ಶಿಕ್ಷಣವನ್ನು ನೀಡಲು ಬೇಕಾದ ಕಾರ್ಯಕ್ರಮಗಳನ್ನು ರೂಪಿಸಬೇಕು. ಸಿಇಟಿ, ನೀಟ್‌ಗಳಲ್ಲಿ ರ‌್ಯಾಂಕ್ ಬರುವಂತೆ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಎಂದು ಕಿವಿಮಾತು ಹೇಳಿದರು.
ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸದನ್ನು ಕಲಿಯಲು ಶಿಕ್ಷಕರಿಗೆ ಮೂರ್ನಾಲ್ಕು ವರ್ಷಗಳ ಕಾಲ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರ ಆಯೋಜನೆ ಮಾಡುವ ಮೂಲಕ ಶಿಕ್ಷಕರ ನವೀನ ಬೋಧನೆಯಿಂದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಅವಕಾಶವಿದ್ದು, ಭಾರತೀ ವಿದ್ಯಾಸಂಸ್ಥೆಯ ಅಧ್ಯಾಪಕರಿಗೆ ಪ್ರತಿ ವರ್ಷ ಶಿಕ್ಷಕರ ತರಬೇತಿ ಆಯೋಜನೆ ಮಾಡಲಾಗುತ್ತಿದೆ. ಇಂತಹ ಕಾರ್ಯಕ್ರಮಗಳ ಆಯೋಜನೆಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.
ಜಿಲ್ಲೆಯ ಪರೀಕ್ಷಾ ಫಲಿತಾಂಶ ರಾಜ್ಯದಲ್ಲಿ 10 ಸ್ಥಾನದ ಒಳಗಡೆ ಬಂದರೆ ಮಂಡ್ಯ ಜಿಲ್ಲೆಗೆ ಕೀರ್ತಿ ಲಭಿಸಲಿದ್ದು, ಈ ನಿಟ್ಟಿನಲ್ಲಿ ಯಾವ ತಯಾರಿ ನಡೆಸಬೇಕು? ವಿದ್ಯಾರ್ಥಿಗಳ ಪ್ರಗತಿಗೆ ಯಾವ ಕಾರ್ಯಯೋಜನೆ ರೂಪಿಸಬೇಕು. ಆ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಎಂದರು.
ಭಾರತೀ ವಿದ್ಯಾಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಆಶಯ್ ಜಿ.ಮಧು ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಜತೆ ಸಂಸ್ಕಾರ ಕಲಿಸುವುದು ಅಗತ್ಯವಿದೆ. ಹಾಗಾಗಿ ಪಾಲಕರೊಂದಿಗೆ ಶಿಕ್ಷಕರ ಸಭೆಯನ್ನು ಆಯೋಜಿಸುವ ಮೂಲಕ ಮಕ್ಕಳ ಬೌದ್ಧಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಸಹಕರಿಸಿ ಎಂದು ಸಲಹೆ ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಚಲುವಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯನ್ನು ಶೈಕ್ಷಣಿಕವಾಗಿ ಮುಂದೆ ತರಲು ಪ್ರಾಮಾಣಿಕವಾಗಿ ಪ್ರಯತ್ನ ನಡೆಸಲಾಗುತ್ತಿದ್ದು, ಕಳೆದ ವರ್ಷ ದ್ವಿತೀಯ ಪಿಯುಸಿಯಲ್ಲಿ 14 ಸ್ಥಾನ ಲಭಿಸಿದ್ದು ಮುಂದಿನ ವರ್ಷ 10 ಸ್ಥಾನದ ಒಳಗೆ ತರಲು ನಮ್ಮ ಉಪನ್ಯಾಸಕರ ತಂಡ ಕಟ್ಟಿ ಕೊಂಡು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ಪ್ರಾಂಶುಪಾಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಯು.ಎಸ್.ನಟರಾಜು, ಕಾರ್ಯದರ್ಶಿ ಪಿ.ಕಾಂತರಾಜು, ಜಿಲ್ಲಾ ಸಂಯೋಜಕರಾದ ಮಹದೇಸ್ವಾಮಿ, ಗುರುಲಿಂಗೇಗೌಡ, ಗಣೇಶ್‌ಕುಮಾರ್, ಜವರಾಯಿ, ಕೆಂಪಯ್ಯ, ಲಕ್ಕಪ್ಪ, ಹುಚ್ಚಯ್ಯ, ಸಿ.ಎಂ.ಸುಧಾ, ಎಂ.ಎನ್.ಮಹೇಶ್‌ಚಂದ್ರ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಭಾರತೀ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಪ್ರಾಂಶುಪಾಲರಾದ ಸಿ.ವಿ ಮಲ್ಲಿಕಾರ್ಜುನ್, ಜಿ.ಬಿ.ಪಲ್ಲವಿ ಇತರರಿದ್ದರು.
=================