ಭಾರತೀ ಉತ್ಸವದಲ್ಲಿ ಕೆ.ಎಂ.ದೊಡ್ಡಿಯ ಪ್ರಾರ್ಥನಾ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರು.
ಕೆ.ಎಂ.ದೊಡ್ಡಿ: ಭಾರತೀ ಉತ್ಸವದ ಸಾಂಸ್ಕೃತಿಕ ಸಂಭ್ರಮ ಮೈಸೂರು ಪ್ರಾಂತ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತಮ ವೇದಿಕೆಯಾಗಿ ರೂಪುಗೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ, ಭಾರತೀ ವಿದ್ಯಾಸಂಸ್ಥೆಯ ಚೇರ‌್ಮನ್ ಮಧು ಜಿ.ಮಾದೇಗೌಡ ಅಭಿಪ್ರಾಯಪಟ್ಟರು.
ಭಾರತೀ ವಿದ್ಯಾಸಂಸ್ಥೆ ವತಿಯಿಂದ ಭಾರತೀ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಭಾರತೀ ಉತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಒಂದೂವರೆ ದಶಕಗಳ ಹಿಂದೆ ಆರಂಭವಾದ ಭಾರತೀ ಉತ್ಸವ ವ್ಯಾಪಕ ಜನಪ್ರಿಯಗೊಂಡು ಭಾರತೀ ಉತ್ಸವ ವಿದ್ಯಾರ್ಥಿಗಳಿಗಷ್ಟೇ ಮನರಂಜನೆಯಾಗದೆ, ಈ ವ್ಯಾಪ್ತಿಯ ಜನತೆಗೆ ಉತ್ತಮ ಮನರಂಜನೆ ನೀಡಿ ದಿನೇದಿನೆ ಜನಪ್ರಿಯಗೊಳ್ಳುತ್ತಿದೆ ಎಂದರು.
ಭಾರತೀ ಉತ್ಸವ ಆರಂಭವಾಯಿತು ಎಂದರೆ ಕೆ.ಎಂ.ದೊಡ್ಡಿ ಸುತ್ತಮುತ್ತ ಜನತೆಗೆ ಒಂದು ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಮೂರು ದಿನಗಳು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಮಂದಿ ಆಗಮಿಸಿ ಸಾಂಸ್ಕೃತಿಕ ರಸದೌತಣ ಸವಿಯುತ್ತಾರೆ ಎಂದರು.
ನನ್ನ ತಂದೆ ಮಾಜಿ ಸಂಸದ ದಿವಂಗತ ಜಿ.ಮಾದೇಗೌಡ ಅವರು ಹಳ್ಳಿಗಾಡಿನ ಮಕ್ಕಳ ಭವಿಷ್ಯ ರೂಪಿಸಲು ಸ್ಥಾಪಿಸಿದ ಸಂಸ್ಥೆಯ ಜವಾಬ್ದಾರಿ ನನಗೆ ವಹಿಸಿದ ನಂತರ ಹಲವು ಹೊಸ ಕೋರ್ಸ್‌ಗಳನ್ನು ತಂದು ನಗರ ಪ್ರದೇಶದಲ್ಲಿ ಸಿಗುವ ಸವಲತ್ತುಗಳನ್ನು ನೀಡುತ್ತ ರಾಜ್ಯದಲ್ಲಿರುವ ನಂಬರ್ ಒನ್ ಸಂಸ್ಥೆಗಳ ಪಟ್ಟಿಯಲ್ಲಿ ಭಾರತೀ ವಿದ್ಯಾಸಂಸ್ಥೆ ಸೇರ್ಪಡೆಗೊಂಡಿರುವುದು ಸಂಸ್ಥೆಯ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ ಎಂದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶಯ್ ಮಧು, ಭಾರತೀ ಉತ್ಸವದ ಪ್ರಧಾನ ಸಂಚಾಲಕರಾದ ಡಾ.ಎಂ.ಎಸ್.ಮಹದೇವಸ್ವಾಮಿ, ಪ್ರೊ.ಎಸ್.ನಾಗರಾಜು, ಡಾ.ತಮೀಜ್‌ಮಣಿ, ಸಂಚಾಲಕ ಕೆ.ಸಿ.ಸುಂದ್ರೇಶ್, ಸಹ ಸಂಚಾಲಕ ಬಿ.ಕೆ.ಕೃಷ್ಣ, ಅರ್ಚನಾ ಹಾಗೂ ಸಂಸ್ಥೆಯ ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.
ಅದ್ದೂರಿ ಕಾರ್ಯಕ್ರಮಕ್ಕೆ ತೆರೆ: ಮೂರು ದಿನಗಳಿಂದ ಯುವ ಮನಸ್ಸುಗಳನ್ನು ಹುಚ್ಚೆದ್ದು ಕುಣಿಸಿದ್ದ, ಪ್ರೇಕ್ಷಕರನ್ನು ಸಂಭ್ರಮದಲ್ಲಿ ತೇಲಿಸಿದ್ದ ಭಾರತೀ ಉತ್ಸವ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಕ್ಕೆ ಅದ್ದೂರಿ ತೆರೆ ಬಿದ್ದಿದೆ.
ನೂರಾರು ವಿದ್ಯಾರ್ಥಿಗಳು, ಕಲಾವಿದರಿಗೆ ಭಾರತೀ ವಿದ್ಯಾಸಂಸ್ಥೆ ವೇದಿಕೆ ಕಲ್ಪಿಸಿ, ಮನರಂಜನೆಯ ರಸದೌತಣ ನೀಡಿದ ಭಾರತೀ ಉತ್ಸವದ ಸಾಂಸ್ಕೃತಿಕ ಸಂಭ್ರಮದಲ್ಲಿ ನೃತ್ಯಲೋಕದ ವೈಭವವನ್ನೇ ಸೃಷ್ಟಿಸಿತು.
ಭಾರತೀ ಸ್ಕೂಲ್ ಅಫ್ ಎಕ್ಸಲೆನ್ಸ್ ವಿದ್ಯಾರ್ಥಿಗಳು, ಪುಟಾಣಿ ಮಕ್ಕಳ ಭರತನಾಟ್ಯ ಎಲ್ಲರ ಗಮನ ಸೆಳೆಯಿತು. ರಂಗೀತರಂಗ ಮತ್ತು ಕಾಂತಾರ ಚಿತ್ರದ ಭೂತಾರಾಧನೆ ಸೇರಿದಂತೆ ಹತ್ತಾರು ಸುಂದರ ವೈವಿಧ್ಯಮಯ ಹಾಡಿಗೆ ಭರತನಾಟ್ಯದ ಮೂಲಕ ಎಲ್ಲರನ್ನೂ ಮನರಂಜಿಸಿತು.
ಕರ್ನಾಟಕ ಜನಪದ ವೈವಿಧ್ಯತೆ ಮತ್ತು ಪರಂಪರೆ , ರಾಜ್ಯದ ಪ್ರತಿ ಜಿಲ್ಲೆಯ ಪ್ರಚಲಿತ ನೃತ್ಯ ಪ್ರಕಾರ, ಕನ್ನಡ ಸಿನಿಮಾಧಾರಿತ ಆಧುನಿಕ ನೃತ್ಯ ಪ್ರಕಾರಗಳು, ಕರ್ನಾಟಕ ವೈಭವ ಸಾರುವಂತ ನೃತ್ಯ ಪ್ರದರ್ಶನಗಳು ಜನಮನ ಸೂರೆಗೊಂಡವು.