ಕಿಕ್ಕೇರಿಯ ಪ್ರವಾಸಿ ಮಂದಿರದ ಕೆ.ಎಸ್. ನರಸಿಂಹಸ್ವಾಮಿ ಗ್ರಂಥಾಲಯದ ಬಳಿ ಶಿಥಿಲಾವಸ್ಥೆಯಲ್ಲಿರುವ ಕುಡಿಯುವ ನೀರಿನ ಟ್ಯಾಂಕ್. 
ಮಂಡ್ಯ

ಶಿಥಿಲಾವಸ್ಥೆಯಲ್ಲಿದೆ ಕಿಕ್ಕೇರಿಯ ನೀರಿನ ಟ್ಯಾಂಕ್

ಎ. ಆರ್. ರಘುರಾಮ
ಕಿಕ್ಕೇರಿ : ಇಲ್ಲಿನ ಪ್ರವಾಸಿಮಂದಿರದಲ್ಲಿರುವ ಕೆ.ಎಸ್. ನರಸಿಂಹಸ್ವಾಮಿ ಗ್ರಂಥಾಲಯದ ಬಳಿ ಇರುವ ಕುಡಿಯುವ ನೀರಿನ ಟ್ಯಾಂಕ್ ಶಿಥಿಲವಾಗಿದ್ದು, ಅಪಾಯದ ಕರೆಗಂಟೆ ಬಾರಿಸುತ್ತಿದೆ.
ಈ ನೀರಿನ ಟ್ಯಾಂಕ್ ದಶಕಗಳ ಕಾಲ ಇಡೀ ಗ್ರಾಮಕ್ಕೆ ನೀರು ಒದಗಿಸುವ ಸೌಲಭ್ಯ ಹೊಂದಿತ್ತು. ಶಿಥಿಲಾವಸ್ಥೆಯಲ್ಲಿರುವ ನೀರಿನ ಟ್ಯಾಂಕ್‌ನಲ್ಲಿ ಸಣ್ಣದಾಗಿ ಸಿಮೆಂಟು, ಗಾರೆ ಉದುರುವಂತಾಗಿದೆ. ಕಬ್ಬಿಣದ ಸರಳುಗಳು ತುಕ್ಕು ಹಿಡಿದು ಸಂಪೂರ್ಣ ಹಾಳಾಗಿದೆ. ಪರಿಣಾಮ ಟ್ಯಾಂಕ್‌ನಿಂದ ಗ್ರಾಮಕ್ಕೆ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು 4 ನೀರಿನ ಟ್ಯಾಂಕ್‌ಗಳಿವೆ. ಇದರಲ್ಲಿ ಒಂದಾಗಿರುವ ಈ ಟ್ಯಾಂಕ್ ಆಗಲೋ, ಈಗಲೋ ಬೀಳುವ ಹಂತದಲ್ಲಿರುವುದು ಆತಂಕ ಮೂಡಿಸಿದೆ.
ಸದ್ಯಕ್ಕೆ ಗ್ರಾಮದಲ್ಲಿ ಎರಡು ದಿನಕ್ಕೊಮ್ಮೆ ಕುಡಿಯುವ ನೀರು ಬಿಡುವ ವ್ಯವಸ್ಥೆ ಇದೆ.
ಬೇಸಿಗೆ ಆರಂಭವಾದರೆ ನೀರಿನ ಸಮಸ್ಯೆ ಇನ್ನೂ ಅಧಿಕವಾಗಲಿದೆ. ಈ ಟ್ಯಾಂಕ್ ನೆಲಸಮ ಮಾಡಿ ಹೊಸ ಟ್ಯಾಂಕ್ ನಿರ್ಮಿಸಿದರೆ ಒಂದಿಷ್ಟು ಸಮಸ್ಯೆ ಬಗೆಹರಿಯಲಿದೆ. ಈ ಬಗ್ಗೆ ಗ್ರಾಪಂ ನಿರ್ಲಕ್ಷೃ ತೋರಿದಂತಿದೆ ಎಂದು
ಗ್ರಾಮಸ್ಥರು ದೂರಿದ್ದಾರೆ.
ಶಿಥಿಲಾವಸ್ಥೆಯಲ್ಲಿರುವ ನೀರಿನ ಟ್ಯಾಂಕ್ ಪಕ್ಕದಲ್ಲಿಯೇ ಶುದ್ಧ ಕುಡಿಯುವ ನೀರಿನ ಘಟಕ ಇದೆ. ನಿತ್ಯ ಈ ಸ್ಥಳಕ್ಕೆ ಗ್ರಾಮದ ಜನರು ನೀರು ಪಡೆಯಲು ಆಗಮಿಸುತ್ತಾರೆ. ಈ ನೀರಿನ ಟ್ಯಾಂಕ್ ಬಳಿಯೇ ಸಾಕಷ್ಟು ವೇಳೆ ಸಾಲು ಗಟ್ಟಿ ನಿಲ್ಲುವುದುಂಟು. ಟ್ಯಾಂಕ್ ಅಪಾಯಕ್ಕೆ ಆಹ್ವಾನ ನೀಡುವಂತಿದ್ದು, ಕುಸಿದು ಬಿದ್ದರೆ ದುರಂತ ಎದುರಾಗಲಿದೆ. ಅದಕ್ಕೆ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಈ ಶಿಥಿಲಾವಸ್ಥೆಯಲ್ಲಿರುವ ಟ್ಯಾಂಕ್ ತೆರವುಗೊಳಿಸಲು ತುರ್ತು ಕ್ರಮ ವಹಿಸಬೇಕಿದೆ.
ಹೇಳಿಕೆ:
ಕಿಕ್ಕೇರಿಯ ನೀರಿನ ಟ್ಯಾಂಕ್ ಹಳೆಯದಾಗಿದೆ. ಇದನ್ನು ಕೆಡವಲು ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಲಾಗಿದೆ. ಯಾವುದೇ ಅಪಾಯ ಸಂಭವಿಸಿದಂತೆ ಎಚ್ಚರಿಕೆ ವಹಿಸಲಾಗುವುದು.
ಚಲುವರಾಜು
ಪಿಡಿಒ, ಕಿಕ್ಕೇರಿ