ಕಿಕ್ಕೇರಿ ಹೋಬಳಿಯ ಮಾದಾಪುರಕೊಪ್ಪಲು ಗ್ರಾಮದಲ್ಲಿ ಮುನೇಶ್ವರಸ್ವಾಮಿ ದೇಗುಲ ಲೋಕಾರ್ಪಣೆ ಭಾನುವಾರ ಜರುಗಿತು.  
ಮಂಡ್ಯ

ಮುನೇಶ್ವರ ಸ್ವಾಮಿ ದೇಗುಲ ಉದ್ಘಾಟನೆ

ಎ. ಆರ್. ರಘುರಾಮ
ಕಿಕ್ಕೇರಿ: ಹೋಬಳಿಯ ಗಡಿಭಾಗದ ಮಾದಾಪುರ ಕೊಪ್ಪಲು ಗ್ರಾಮದಲ್ಲಿ ಭಾನುವಾರ ಮುನೇಶ್ವರಸ್ವಾಮಿ ದೇಗುಲ ಉದ್ಘಾಟನೆಯಾಯಿತು.
ದೇಗುಲ ಉದ್ಘಾಟನೆ ಹಿನ್ನೆಲೆಯಲ್ಲಿ ಶನಿವಾರ ಗಣಪತಿ ಹೋಮ, ನವಗ್ರಹ ಹೋಮ, ಪಂಚಾಮೃತ ಅಭಿಷೇಕ, ಅಷ್ಟದ್ರವ್ಯಗಳ ಪೂಜೆಗಳು ಜರುಗಿದವು.
ಭಾನುವಾರ ಬ್ರಾಹ್ಮಿ ಮುಹೂರ್ತದಲ್ಲಿ ಗ್ರಾಮದ ಮಹಿಳೆಯರು ಮುಖಂಡರೊಂದಿಗೆ ವೇದಘೋಷ, ಮಂಗಳವಾದ್ಯದೊಂದಿಗೆ ಸಮೀಪದಲ್ಲಿರುವ ಹೇಮಾವತಿ ನದಿಯಿಂದ ಪವಿತ್ರ ಗಂಗೆಯನ್ನು ಪೂರ್ಣಕುಂಭದೊಂದಿಗೆ ಮೆರವಣಿಗೆ ಮೂಲಕ ತಂದರು.
ಪುಣ್ಯಾಹ್ನ ವಾಚನ, ದೇವನಂದಿ ಕಂಕಣಧಾರೆ, ಮಹಾಸಂಕಲ್ಪ, ಗ್ರಾಮ, ಸಭಾ ಪೂಜೆ, ಕಳಸಪೂಜೆ, ರಾಕ್ಷೋಘ್ನ, ದೀಕ್ಷಕಾಲ ಬಲಿ, ಪರಿವಾರ, ವಾಸ್ತು, ರುದ್ರ, ಕಲಾ, ಪ್ರಸಾದ ವಾಸ್ತು ಪೂಜೆ, ಮಹಾ ಪೂರ್ಣಾಹುತಿ, ರಾಜಾಶೀರ್ವಾದ ನೆರವೇರಿತು.
ಭಾನುವಾರ ವಿಮಾನ ಗೋಪುರ ಕಳಸ ಪ್ರತಿಷ್ಠಾಪನೆ, ಕಲಾಕರ್ಷಣೆ, ಕಲಶಾಭಿಷೇಕ, ಬಿಂಬ ಪೂಜೆ, ಮುನೇಶ್ವರ ದೇವರ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಅಂತಿಮವಾಗಿ ನೆರವೇರಿತು. ಪರಿಮಳ ಪುಷ್ಪಗಳಿಂದ ದೇವರಿಗೆ ಅಲಂಕಾರ ಮಾಡಲಾಗಿತ್ತು. ಭಕ್ತಾದಿಗಳು ಸರತಿಯಲ್ಲಿ ನಿಂತು ಮಹಾ ಮಂಗಳಾರತಿ, ತೀರ್ಥ ಪ್ರಸಾದ ಸ್ವೀಕರಿಸಿದರು. ಅನ್ನದಾಸೋಹ ಏರ್ಪಡಿಸಲಾಗಿತ್ತು.
ಮಾದಾಪುರ, ಮಾದಾಪುರ ಕೊಪ್ಪಲು, ಗಾಣದಹಳ್ಳಿ, ಹಳೇಮಾದಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.