ದಹನ ಕ್ರಿಯೆ ನಡೆಸಲು ರುದ್ರಭೂಮಿಯ ಸಮಸ್ಯೆ ಕಿಕ್ಕೇರಿ ನಾಗರಿಕರಲ್ಲಿ ಕಾಡುತ್ತಿದೆ 
ಮಂಡ್ಯ

ಕಿಕ್ಕೇರಿಯಲ್ಲಿ ಅಂತ್ಯಕ್ರಿಯೆಗೆ ಸಮಸ್ಯೆ

ಎ. ಆರ್. ರಘುರಾಮ
ಕಿಕ್ಕೇರಿ : ಹುಟ್ಟಿನಿಂದ ಸಾಯುವವರಿಗೆ ಬದುಕು ಹಲವು ಚಿಂತೆಗಳ ಸಂತೆ. ಆದರೆ ಸತ್ತ ನಂತರವೂ ಅಂತ್ಯಕ್ರಿಯೆ ಮಾಡುವುದು ಹೇಗೆಂಬ ಚಿಂತೆ ಮೃತರ ಕುಟುಂಬದವರಿಗೆ ಕಾಡುತ್ತಿದೆ. ಏಕೆಂದರೆ ದಹನ ಕ್ರಿಯೆ ನಡೆಸಲು ರುದ್ರಭೂಮಿಯ ಸಮಸ್ಯೆ ಕಿಕ್ಕೇರಿ ನಾಗರಿಕರಲ್ಲಿ ಕಾಡುತ್ತಿದೆ. ತಾಲೂಕಿನ ದೊಡ್ಡ ಹೋಬಳಿ ಕೇಂದ್ರವಾಗಿರುವ ಕಿಕ್ಕೇರಿಯಲ್ಲಿ ದಶಕದ ಹಿಂದೆ ಸಾಕಷ್ಟು ವಿಶಾಲ ಜಾಗಗಳಿದ್ದವು. ಹತ್ತಿರದಲ್ಲೇ ಹೊಲ, ಗದ್ದೆಗಳು ಇದ್ದವು. ಹಾಗಾಗಿ ಯಾರೇ ಮೃತರಾದರೂ ಅವರ ಅಂತ್ಯಕ್ರಿಯೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಈಗ ಗ್ರಾಮ ದೊಡ್ಡದಾಗಿದೆ. ಹತ್ತಿರವೇ ಇದ್ದ ಹೊಲಗದ್ದೆಗಳು ಲೇಔಟ್‌ಗಳಾಗಿವೆ. ಜಮೀನುಗಳು ವಾಣಿಜ್ಯ ಮಳಿಗೆ, ವಸತಿಗೃಹಗಳಾಗಿ ಮಾರ್ಪಟ್ಟಿವೆ. ಪರಿಣಾಮ ಬಯಲು, ಖಾಲಿ ಸ್ಥಳವಿಲ್ಲದೆ ಅಂತ್ಯಸಂಸ್ಕಾರ ಮಾಡಲು ಪರದಾಡುವಂತಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಇನ್ನೂ ಮೌನವಾಗಿದ್ದಾರೆ. ಅಧಿಕಾರ ಮತ್ತು ಜವಾಬ್ದಾರಿ ಇರುವವರು ಸ್ಮಶಾನಕ್ಕೆ ಸೂಕ್ತ ಸ್ಥಳ ಗುರುತಿಸಿ ನೆಮ್ಮದಿಯಿಂದ ಅಂತ್ಯಸಂಸ್ಕಾರ ಮಾಡಲು ಅನುಕೂಲ ಮಾಡಿಕೊಡಬೇಕು ಎಂಬ ಕೂಗು ಕೇಳಿಬರುತ್ತಿದೆ.
ರಾಜ್ಯ ಹೆದ್ದಾರಿಯ ಎಪಿಎಂಸಿ ಮಾರುಕಟ್ಟೆ ಬಳಿ ವಿಪ್ರ ಸಮಾಜದ ರುದ್ರಭೂಮಿ ಇದೆ. ಇದು ಈ ಸಮುದಾಯಕ್ಕೆ ಮೀಸಲಾದ ರುದ್ರಭೂಮಿಯಾಗಿದೆ. ಗ್ರಾಮಸ್ಥರಿಗೆ ಸಮಸ್ಯೆ ಆಗಬಾರದು ಎಂದು ಮಾನವೀಯತೆಯಿಂದ ಅಂತ್ಯಸಂಸ್ಕಾರಕ್ಕೆ ಒಂದಿಷ್ಟು ಜಾಗ ಬಿಡಲಾಗಿದೆ. ಇದು ತಾತ್ಕಾಲಿಕ ವ್ಯವಸ್ಥೆ ಆಗಿದೆ. ವಿಪ್ರ ಸಮಾಜ ದವರು ತಮ್ಮ ಸಮುದಾಯದವರಿಗೆಂದೇ ಇರಿಸಿಕೊಂಡಿದ್ದ 22 ಗುಂಟೆಯಲ್ಲಿ ಸ್ವಲ್ಪ ಜಾಗಬಿಟ್ಟುಕೊಟ್ಟಿದ್ದಾರೆ. ಗ್ರಾಮದಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಖಬರ್‌ಸ್ತಾನ್ ಇದೆ. ಒಕ್ಕಲಿಗ, ಕುರುಹಿನಶೆಟ್ಟಿ, ಕುಂಬಾರ, ಮಡಿವಾಳ, ಮಾರ್ವಾಡಿ, ಕ್ರೈಸ್ತ, ಗಂಗಾಮತಸ್ಥ ಸೇರಿದಂತೆ ವಿವಿಧ ಸಮಾಜದವರೂ ಈ ಊರಿನಲ್ಲಿದ್ದಾರೆ.
ದಶಕದ ಹಿಂದೆ ಮಂದಗೆರೆ ರಸ್ತೆಯ ಸಿದ್ದಾಪುರ ತಿರುವಿನಲ್ಲಿ ಶವಸಂಸ್ಕಾರ ಸ್ಥಳವಿತ್ತು. ಈ ಸ್ಥಳದಲ್ಲಿ ಶವಸಂಸ್ಕಾರಕ್ಕೆ ಸಾಕಷ್ಟು ಅಡ್ಡಿಗಳು ಇದ್ದವು. ಅಂತಿಮವಾಗಿ ವಿಪ್ರವೃಂದದವರೇ ಮಾಡಿಕೊಂಡಿದ್ದ ರುದ್ರಭೂಮಿಯಲ್ಲಿ ಇತರರೂ ಅಂತ್ಯಕ್ರಿಯೆ ಮಾಡಲು ಗ್ರಾಮಸ್ಥರ ಮನವಿ ಮೇರೆಗೆ ಸ್ವಲ್ಪ ಜಾಗವನ್ನು ಬಿಟ್ಟುಕೊಟ್ಟರು. ಈ ಸ್ಥಳದಲ್ಲಿ ಇತರ ಸಮುದಾಯದವರು ದಹನ ಕ್ರಿಯೆ ಮಾಡುತ್ತಿದ್ದರು. ದೇಹವನ್ನು ಹೂಳುವುದಕ್ಕೆ ಅವಕಾಶವಿಲ್ಲ. ಆದರೂ ಈ ನಿಯಮವನ್ನು ಮೀರಿ ಹಲವರು ದೇಹವನ್ನು ಹೂಳಿದ್ದರಿಂದ ಸ್ಮಶಾನದ ಆವರಣದಲ್ಲಿ ಗುಂಡಿ, ಗಟಾರಗಳು ಬಿದ್ದವು. ನಂತರದಲ್ಲಿ ಮಾಲಿನ್ಯವೂ ಹೆಚ್ಚಾಯಿತು. ಕಿಕ್ಕೇರಿ ಬೆಳೆದಂತೆ ಪರಸ್ಥಳ ದಿಂದ ಸಾಕಷ್ಟು ಜನರು ಬಂದು ನೆಲೆಸಿದ್ದಾರೆ. ಇವರ ಕುಟುಂಬಸ್ಥರು ನಿಧನವಾದರೆ ಸಂಸ್ಕಾರ ಕ್ರಿಯೆಯೇ ಬಲುದೊಡ್ಡ ಸಮಸ್ಯೆ. ರೈತರ ಜಮೀನುಗಳಲ್ಲಿ ಸಂಸ್ಕಾರ ಕ್ರಿಯೆ ನಡೆಸಲು ಅವಕಾಶ ನೀಡುವುದಿಲ್ಲ. ವಿಪ್ರವೃಂದದ ರುದ್ರಭೂಮಿಯಲ್ಲಿ ಹೂಳುವಂತಿಲ್ಲ. ಮೃತ ದೇಹವನ್ನು ಎಲ್ಲಿ ಹಾಕುವುದು ಎಂಬುದೇ ಕುಟುಂಬದವರಿಗೆ ದೊಡ್ಡ ತಲೆನೋವು.
ತ್ಯಾಜ್ಯದ ರಾಶಿ: ವಿಪ್ರರ ರುದ್ರಭೂಮಿಗೆ ತ್ಯಾಜ್ಯ ಕಾಟ ಇತ್ತೀಚೆಗೆ ಹೆಚ್ಚಾಗಿದೆ. ಸುತ್ತಲೂ ಕಾಂಪೌಂಡ್ ವ್ಯವಸ್ಥೆಯಾಗಬೇಕಿದೆ. ಗಿಡಗಂಟಿಗಳು ಬೆಳೆಯುತ್ತಿದ್ದು, ಪೊದೆ ನಿರ್ಮಾಣವಾಗಿದೆ. ಹಗಲು ವೇಳೆಯೇ ಹಾವುಗಳ ಕಾಟ ಮಿತಿ ಮೀರಿದೆ. ಈ ಸ್ಥಳಕ್ಕೆ ಹೊಂದಿಕೊಂಡಂತೆ ಇರುವ ಕೆರೆ ಕಾಲುವೆ ಬಯಲು ಶೌಚಗೃಹವಾಗಿಬಿಟ್ಟಿದೆ.