ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪಿಡಿಒ ನಡೆ ಖಂಡಿಸಿ ಗ್ರಾಪಂ ಸದಸ್ಯರು ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
- malavalli, kirugavalu, -office-locked,
ಮಳವಳ್ಳಿ: ತಾಲೂಕಿನ ಕಿರುಗಾವಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷ, ಪಿಡಿಒ ಸೇರಿಕೊಂಡು ಅಕ್ರಮ ನಡೆಸುತ್ತಿದ್ದಾರೆಂದು ಆರೋಪಿಸಿ 15 ಗ್ರಾಪಂ ಸದಸ್ಯರು ಬುಧವಾರ ಗ್ರಾಪಂ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಇಲ್ಲಿನ ಗ್ರಾಪಂನಲ್ಲಿ ಬುಧವಾರ ಗ್ರಾಪಂ ಅಧ್ಯಕ್ಷೆ ಇನಾಯತ್ ಖಾತಂ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯನ್ನು ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿತ್ತು. ಸಭೆಗೆ ಅಧ್ಯಕ್ಷೆ, ಉಪಾಧ್ಯಕ್ಷ ಮಾದೇಗೌಡ ಸೇರಿದಂತೆ ಎಲ್ಲ ಸದಸ್ಯರು ಹಾಜರಿದ್ದರು. ಸಭೆ ಪ್ರಾರಂಭದಲ್ಲಿ ಹಿಂದಿನ ಸಭೆಯ ನಡಾವಳಿ ಅನುಮೋದನೆ ಪಡೆದುಕೊಳ್ಳುವ ಸಂಧರ್ಭದಲ್ಲಿ ಗ್ರಾಮದ ಕೆರೆಯಲ್ಲಿ ಮೀನುಗಾರಿಕೆ ನಡೆಸಲು ಹರಾಜು ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ. ಅದನ್ನು ರದ್ದುಪಡಿಸಬೇಕೆಂದು ಸಭೆಯಲ್ಲಿ ಹಾಜರಿದ್ದ ಬಹುಪಾಲು ಸದಸ್ಯರು ಆಗ್ರಹಿಸಿದರು.
ಇದನ್ನು ನಿರಾಕರಿಸಿದ ಅಧ್ಯಕ್ಷೆ, ಉಪಾಧ್ಯಕ್ಷ, ಪಿಡಿಒ ಸಭೆಯಿಂದ ಹೊರ ನಡೆದರು. ಕೆಲ ಸಮಯದ ನಂತರ ಪಿಡಿಒ ಹರಿಶಂಕರ್ ಸಭಾಂಗಣಕ್ಕೆ ಆಗಮಿಸಿ ಸಭೆ ಮುಂದೂಡಿರುವುದಾಗಿ ತಿಳಿಸಿದರು. ಇದನ್ನು ವಿರೋಧಿಸಿ ಏಕಾಏಕಿ ಸಭೆ ಮುಂದೂಡಲು ಕಾರಣ ಕೇಳಿ 15 ಸದಸ್ಯರು ಪ್ರಶ್ನಿಸಿದರು. ಈ ವೇಳೆ ಪಿಡಿಒ ಮತ್ತು ಉಪಾಧ್ಯಕ್ಷರ ನಡುವೆ ಮಾತಿನ ಚಕಮಕಿ ನಡೆಯುವುದರ ಜತೆಗೆ ತಳ್ಳಾಟ ನೂಕಾಟ ನಡೆಯಿತು.
ಆಡಳಿತ ವಿರೋಧಿ ನಡೆಯನ್ನು ಖಂಡಿಸಿ 15 ಜನ ಸದಸ್ಯರು ಪಿಡಿಒ ಮತ್ತು ಉಪಾಧ್ಯಕ್ಷರಿದ್ದ ಕಾರ್ಯಾಲಯದ ಕೊಠಡಿಗೆ ಬೀಗ ಜಡಿದು ಘೋಷಣೆ ಕೂಗಲಾರಂಭಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಕಿರುಗಾವಲು ಪೊಲೀಸರು ಆಗಮಿಸಿ ಸದಸ್ಯರ ಮನವೊಲಿಸಿ ಕೊಠಡಿ ಬೀಗ ತೆರೆಸಿದರು. ನಂತರ ಪಿಡಿಒ ಮತ್ತು ಉಪಾಧ್ಯಕ್ಷ ರ ಸಮ್ಮುಖದಲ್ಲಿ ಪಿಎಸ್‌ಐ ಸಿದ್ದರಾಜು ನಡೆಸಿದ ಸಂಧಾನ ಮಾತುಕತೆ ಸಂಜೆ 7 ಗಂಟೆಯಾರೂ ಬಗೆಹರಿಯಿಲ್ಲ. ನಂತರ ಪ್ರತಿಭಟನಾನಿರತ ಸದಸ್ಯರು ಪಿಡಿಒ ಹೊರ ಹೋಗದಂತೆ ಕೊಠಡಿಯೊಳಗೆ ತಾವುಗಳು ಕುಳಿತು ಸ್ಥಳಕ್ಕೆ ಜಿಪಂ ಸಿಇಒ ಹಾಗೂ ತಾಪಂ ಇಒ ಬರಬೇಕೆಂದು ಪಟ್ಟು ಹಿಡಿದು ಹೋರಾಟ ಮುಂದುವರಿಸಿದರು.
ಗ್ರಾಪಂ ಸದಸ್ಯ ಪ್ರಕಾಶ್ ಮಾತನಾಡಿ, ಕಳೆದ ಮೂರು ತಿಂಗಳ ಹಿಂದೆ ನಡೆದಿದ್ದ ಸಭೆಯಲ್ಲಿ ಕೆರೆ ಟೆಂಡರ್ ಹೊರತುಪಡಿಸಿ ಹಲವು ಚರ್ಚಿತ ವಿಷಯಗಳ ಬಗ್ಗೆ ನಿರ್ಣಯ ಬರೆಯಲಾಗಿತ್ತು. ಆದರೆ ಇಂದಿನ ಸಭೆಯಲ್ಲಿ ಸಭಾ ನಡಾವಳಿ ಪುಸ್ತಕದಲ್ಲಿ ಕೆರೆಯ ಮೀನುಗಾರಿಕೆ ನಡೆಸಲು ಐದು ವರ್ಷದ ಅವಧಿಗೆ 10 ಸಾವಿರ ರೂ.ಗೆ ಕೊಡಲಾಗಿದೆ ಎಂದು ನಿರ್ಣಯ ಸದಸ್ಯರ ಗಮನಕ್ಕೆ ಬಾರದಂತೆ ಬರೆದುಕೊಂಡು ಸಹಿ ಪಡೆಯಲು ಮುಂದಾಗಿದ್ದರು. ಇದನ್ನು 15 ಸದಸ್ಯರು ವಿರೋಧಿಸಿ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು, ನಿಯಮ ಬಾಹಿರವಾಗಿ ಗ್ರಾಪಂ ಬೊಕ್ಕಸಕ್ಕೆ ಲಕ್ಕಾಂತರ ರೂ. ನಷ್ಟವಾಗುವಂತೆ ಮಾಡಲಾಗಿದೆ. ಇದನ್ನು ರದ್ದುಪಡಿಸಬೇಕೆಂದು ಆಗ್ರಹಿಸಲಾಯಿತು.
ಈ ಪ್ರಸ್ತಾಪವಾಗುತ್ತಿದ್ದಂತೆ ಸಭೆಯಲ್ಲಿದ್ದ ಅಧ್ಯಕ್ಷೆ, ಉಪಾಧ್ಯಕ್ಷ ಮತ್ತು ಪಿಡಿಒ ಸಭೆಯಿಂದ ಹೊರ ನಡೆದು. ದಿಢೀರ್ ಸಭೆ ಮುಂದೂಡಿರುವುದಾಗಿ ತಿಳಿಸಿದರು. ನಡೆದಿರುವ ಅಕ್ರಮ ಪ್ರಶ್ನಿಸಲಾಗಿ ಪಿಡಿಒ ಹಾಗೂ ಉಪಾಧ್ಯಕ್ಷ ನಮ್ಮಗಳ ಮೇಲೆ ಹಲ್ಲೆಗೆ ಮುಂದಾದರು ಎಂದು ಆರೋಪಿಸಿದರು.
ಇಲ್ಲಿನ ಗ್ರಾಪಂನಲ್ಲಿ ಕಳೆದ ನಾಲ್ಕು ತಿಂಗಳಿಂದ ಇ- ಸ್ವತ್ತು ಹಾಗೂ ಸಾರ್ವಜನಿಕರ ಕೆಲಸಗಳಿಗೆ ಅನುಮತಿ ದೊರೆಯುತ್ತಿಲ್ಲ. ಬಡಾವಣೆಗಳಲ್ಲಿ ಚರಂಡಿಗಳ ಸ್ವಚ್ಛತೆ ಮಾಡಿಸುತ್ತಿಲ್ಲ. ಗ್ರಾಪಂ ಕಾರ್ಯಾಲಯದಲ್ಲೇ ಶೌಚಗೃಹವಿಲ್ಲದೆ ಮಹಿಳಾ ಸದಸ್ಯರು ಬಯಲು ಶೌಚ ಮಾಡುವ ದುಸ್ಥಿತಿ ಇದ್ದು, ಹಲವಾರು ಅಕ್ರಮಗಳು ನಡೆದಿದ್ದರೂ ಅದನ್ನು ಪ್ರಶ್ನಿಸಿದರೆ ಸರಿಯಾದ ಉತ್ತರ ಕೊಡುತ್ತಿಲ್ಲ. ಇದರಿಂದ ನಮಗೆ ಮತ ನೀಡಿ ಆಯ್ಕೆ ಮಾಡಿರುವ ಮತದಾರರು ನಮಗೆ ಛೀಮಾರಿ ಹಾಕುತ್ತಿದ್ದಾರೆ. ಸದಸ್ಯರಿಗೆ ಗೌರವ ಸಿಗುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಜಿಪಂ ಸಿಇಒ ಆಗಮಿಸಿ ಅಕ್ರಮವಾಗಿ ನಡೆದಿರುವ ಕೆರೆ ಟೆಂಡರ್ ರದ್ದುಪಡಿಸುವುದರ ಜತೆಗೆ ಗ್ರಾಪಂನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಆದೇಶ ನೀಡುವವರೆಗೂ ಅಹೋರಾತ್ರಿ ಧರಣಿ ನಡೆಸುವುದಾಗಿ ತಿಳಿಸಿದರು.
ಸ್ಥಳದಲ್ಲಿ ಬಿಗುವಿನ ವಾತಾವರಣ ಮುಂದುವರಿಯಿತು. ಬಳಿಕ ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀಧರ್ ಸಮ್ಮುಖದಲ್ಲಿ ಸದಸ್ಯರ ಬೇಡಿಕೆಗಳಿಗೆ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಯಿತು.