ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಶನಿವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ತಹಸೀಲ್ದಾರ್ ವಿ.ಎಸ್.ಲೋಕೇಶ್, ತಾಪಂ ಇಒ ಶ್ರೀನಿವಾಸ್, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ, ತಾಲೂಕು ಅಧ್ಯಕ್ಷ ಮಹದೇವ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ, ಜಿಲ್ಲಾ ನಿರ್ದೇಶಕಿ ಮಾಲತಿ ಇದ್ದರು.
- ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಭರವಸೆ
- ಅಭಿವೃದ್ಧಿ ಕಾಮಗಾರಿಗಳಿಗೆ ವಿಶೇಷ ಅನುದಾನ ಬಿಡುಗಡೆ
ಮಳವಳ್ಳಿ: ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಜಾರಿಗೆ ತರಲಾಗಿದೆ. ಕಿರುಗಾವಲು ಹೋಬಳಿಯ ಸಂಪೂರ್ಣ ನಾಲೆ ಆಧುನೀಕರಣ ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ತಾಲೂಕಿನ ಕಿರುಗಾವಲು ಹೋಬಳಿ ಕೇಂದ್ರದಲ್ಲಿ ತಾಲೂಕು ಆಡಳಿತ ವತಿಯಿಂದ ಶನಿವಾರ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಡಳಿತದ ಜವಾಬ್ದಾರಿ ಹಾಗೂ ಸಂವಿಧಾನದ ಅರಿವು ಮೂಡಿಸಲು ಸರ್ಕಾರ ಭಾರತ್ ಜೋಡೋ ಮೂಲಕ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯುವ ಸಂಘಟನೆ ಕಟ್ಟಲು 5 ಲಕ್ಷ ರೂ. ಅನುದಾನ ನೀಡುತ್ತಿದೆ.
ಪ್ರಸ್ತುತ ತೀವ್ರ ಬರದ ಪರಿಸ್ಥಿತಿ ಎದುರಾಗಿದ್ದು, ಸಂಕಷ್ಟ ನಿರ್ವಹಣೆಗೆ ಸರ್ಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಗ್ರಾಮೀಣ ಜನರು ಆತಂಕಪಡುವ ಅಗತ್ಯವಿಲ್ಲ. ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅಂತರ್ಜಲ ಸಂರಕ್ಷಣೆ ಹಾಗೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೀರು ತುಂಬಿಸಲಾಗುತ್ತಿದೆ. ರೈತರು ಕೆರೆಗಳಿಗೆ ತುಂಬಿಸುವ ನೀರನ್ನು ಜಮೀನುಗಳಿಗೆ ಬಳಸಬಾರದು ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದರು.
ಅಧಿಕಾರಿಗಳಿಗೆ ತರಾಟೆ: ಗೃಹಲಕ್ಷ್ಮಿ ಹಣ ಮೂರು ವರ್ಷದಿಂದ ಬಂದಿಲ್ಲ ಎಂದು ವೃದ್ಧ ದಂಪತಿ ಮನವಿ ಸಲ್ಲಿಸಿದಾಗ ವಿಎ, ಆರ್‌ಐ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಸಮಸ್ಯೆ ಇತ್ಯರ್ಥಕ್ಕೆ ತಹಸೀಲ್ದಾರ್ ಮತ್ತು ಸಿಡಿಪಿಒಗೆ ಸೂಚಿಸಿದರು. ಮತ್ತೊಬ್ಬ ವೃದ್ಧರು, ಕಂದಾಯ ಇಲಾಖೆ ಕೆಲಸಕ್ಕೆ ಆರ್‌ಐ ಅಲೆಸುತ್ತಿದ್ದಾರೆ ಎಂದು ದೂರಿದಾಗ, ಆರ್‌ಐ ಅಕ್ಬರ್ ಅವರನ್ನು ಕರೆಸಿದ ಸಚಿವರು, ಲಂಚ ಬೇಕಿದ್ದರೆ ನನ್ನನ್ನೇ ಕೇಳು, ನಾನು ಕೊಡುತ್ತೇನೆ. ಸಾರ್ವಜನಿಕರ ಕೆಲಸ ಮಾಡಿಕೊಡಬೇಕು. ಮತ್ತೆ ಸಬೂಬು ಹೇಳಿದರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ವಿ.ಎಸ್.ಲೋಕೇಶ್, ತಾಪಂ ಇಒ ಶ್ರೀನಿವಾಸ್, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ, ತಾಲೂಕು ಅಧ್ಯಕ್ಷ ಮಹದೇವ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ, ಜಿಲ್ಲಾ ನಿರ್ದೇಶಕಿ ಮಾಲತಿ ಇತರರು ಇದ್ದರು.