ಕಿಕ್ಕೇರಿ ಹೋಬಳಿಯ ಮಂಡಲೀಕನಹಳ್ಳಿ ಹೆದ್ದಾರಿ ಬಳಿಯ(ಕಲ್ಲನ ಕಟ್ಟೆ) ಕಟ್ಟೆಗೆ ತಡೆಗೋಡೆ ಇಲ್ಲದೆ ಅಪಾಯಕ್ಕೆ ಆಹ್ವಾನ ನೀಡುವಂತಿರುವುದು.  
ಮಂಡ್ಯ

ಮಂಡಲೀಕನಹಳ್ಳಿ ಕಟ್ಟೆಗೆ ಬೇಕಿದೆ ತಡೆಗೋಡೆ

ಕಿಕ್ಕೇರಿ: ಹೋಬಳಿಯ ಗಡಿಯಂಚಿನ ಗ್ರಾಮವಾದ ಮಂಡಲೀಕನಹಳ್ಳಿ ಬಳಿ ಇರುವ ಕಟ್ಟೆ(ಕಲ್ಲನ ಕಟ್ಟೆ)ಯಂತಿರುವ ಕೆರೆಗೆ ತಡೆಗೋಡೆ ಇಲ್ಲದೆ ನಿತ್ಯ ದಾರಿಹೋಕರು, ವಾಹನ ಸವಾರರು ಆತಂಕದಲ್ಲಿ ಈ ಮಾರ್ಗವಾಗಿ ಪ್ರಯಾಣ ಬೆಳೆಸುವಂತಾಗಿದೆ.
ತಡೆಗೋಡೆ ಇಲ್ಲದೆ ರಾಜ್ಯದ ವಿವಿಧೆಡೆ ಸಾಕಷ್ಟು ಅವಘಡ, ಪ್ರಾಣಹಾನಿ ಸಂಭವಿಸಿದ್ದು ನಾಗರಿಕರು ಈ ಸ್ಥಳದಲ್ಲಿ ಆತಂಕದಲ್ಲಿ ಸಾಗಬೇಕಿದೆ.
ಮೈಸೂರು, ಶಿವಮೊಗ್ಗ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಈ ಸ್ಥಳದ ರಸ್ತೆಯ ಎರಡು ಬದಿಯಲ್ಲಿ ಕಟ್ಟೆಗಳುಂಟು. ಆನೆಗೊಳಕ್ಕೆ ಸಾಗುವಾಗ ಎಡಬದಿಯಲ್ಲಿ ದೊಡ್ಡ ಪ್ರಮಾಣದ ಕಟ್ಟೆ ಇದ್ದು, ಆನೆಗೊಳದಿಂದ ಕಿಕ್ಕೇರಿಗೆ ಸಾಗುವಾಗ ಚಿಕ್ಕ ಕಟ್ಟೆ ಇದೆ. ಎದುರು ಬದುರು ಎರಡು ವಾಹನಗಳು ಮುಖಾಮುಖಿಯಾದಾಗ ಈ ಸ್ಥಳದಲ್ಲಿ ರಸ್ತೆ ಬದಿಗೆ ಪಾದಚಾರಿಗಳು, ವಾಹನ ಸವಾರರು ರಸ್ತೆ ಬದಿಗೆ ಇಳಿಯುವುದು ಕಷ್ಟವಾಗಿದೆ. ನಾಮ್ ಕಿ ವಾಸ್ತೆಗೆ ಎನ್ನುವಂತೆ ಸ್ವಲ್ಪ ಪ್ರಮಾಣದಲ್ಲಿ ತಡೆಗೋಡೆಯಂತೆ ಕಬ್ಬಿಣದ ಸರಳು ಅಳವಡಿಸಲಾಗಿದ್ದು, ಮುಕ್ಕಾಲು ಭಾಗ ಕಟ್ಟೆಗೆ ತಡೆಗೋಡೆ ಇಲ್ಲವಾಗಿದ್ದು ಜೀವಭಯ ಕಟ್ಟಿಟ್ಟ ಬುತ್ತಿಯಂತಿದೆ. ಕಟ್ಟೆಯ ರಸ್ತೆ ಬದಿಯಲ್ಲಿ ಗಿಡಗಂಟಿ, ಲಾಂಟಾನಗಳು ದೊಡ್ಡದಾಗಿ ಪೊದೆಯಂತೆ ಬೆಳೆದು ರಸ್ತೆಗೆ ಚಾಚಿದಂತಿರುವುದು ಅಪಾಯಕ್ಕೆ ಮತ್ತಷ್ಟು ಆಹ್ವಾನ ನೀಡುವಂತಿದೆ. ತಡೆಗೋಡೆಯೂ ಇಲ್ಲದೆ ದಾರಿಹೋಕರಿಗೆ ರಸ್ತೆ ಬದಿಯಲ್ಲಿ ಗಿಡಗಂಡಿಯ ಪೊದೆಗೆ ಸಾಗಿ ರಸ್ತೆ ಕೆಳಗಿನ ಕಟ್ಟೆಗೆ ಉರುಳುವುದು ಸಹಜವಾಗಿದೆ. ಗಿಡಗಂಟಿಗಳ ನಡುವೆ ಹಗಲುವೇಳೆಯೇ ಹಾವು, ಚೇಳಿನಂತಹ ವಿಷಜಂತು ಎಗ್ಗಿಲ್ಲದೆ ಓಡಾಡುತ್ತಿವೆ. ಅಲ್ಲಲ್ಲಿ ಗೆದ್ದಲು ಹುತ್ತಗಳು ಬೆಳೆದಿದ್ದು, ಜೀವಭಯ ಕಾಡುವಂತಿದೆ. ದೊಡ್ಡ ವಾಹನಗಳು ಬಂದಾಗ ಹಲವು ದ್ವಿಚಕ್ರ ವಾಹನಗಳ ಸವಾರರು ಹೆದ್ದಾರಿಯ ರಸ್ತೆ ಬದಿಗೆ ವಾಹನ ಇಳಿಸಿದಾಗ ವಾಹನಗಳ ಚಕ್ರಗಳಿಗೆ ಮುಳ್ಳು ಚುಚ್ಚಿ ಸಾಕಷ್ಟು ಪ್ರಮಾದವಾಗುತ್ತಿದೆ.
ರೈತರು ತಮ್ಮ ಜಮೀನುಗಳಿಗೆ ಈ ಮಾರ್ಗವಾಗಿಯೇ ಸಾಗಬೇಕಿದ್ದು, ಎತ್ತಿನ ಗಾಡಿಗಳು ಸ್ವಲ್ಪ ಬದಿಗೆ ಸಾಗಿದರೂ ಕಟ್ಟೆ ಕೆಳೆಗೆ ಎನ್ನುವಂತಿದೆ. ಈ ಸ್ಥಳ ಇಳಿಜಾರು, ತಿರುವಿನ ಪ್ರದೇಶ ಕೂಡ ಆಗಿದ್ದು ನಾಮಫಲಕದ ಅವಶ್ಯವಿದೆ.
ತ್ವರಿತವಾಗಿ ರಾಜ್ಯ ಹೆದ್ದಾರಿಯಲ್ಲಿನ ಈ ಎರಡು ಬದಿಯಲ್ಲಿನ ಕಟ್ಟೆಗಳಿಗೆ ತಡೆಗೋಡೆ ನಿರ್ಮಿಸಿಕೊಡಲಿ ಎನ್ನುತ್ತಾರೆ ಈ ಮಾರ್ಗವಾಗಿ ಓಡಾಡುವ ರೈತರು, ನಾಗರೀಕರು.
ರಾಜ್ಯ ಹೆದ್ದಾರಿ ಬಳಿ ಇರುವ ಕಟ್ಟೆಗಳಿಗೆ ತಡೆಗೋಡೆ ನಿರ್ಮಿಸಲು ಅಗತ್ಯ ಕ್ರಮಗಳಿಗೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗುವುದು. ಪಾದಚಾರಿಗಳು ಸಾಗಲು ವ್ಯವಸ್ಥೆ ಮಾಡಲಾಗುವುದು.
ಬೋರಯ್ಯ, ಲೋಕೋಪಯೋಗಿ ಇಲಾಖೆ