ಯುವ ಸಾಹಿತಿ ಮೊಹಮ್ಮದ್ ಅಜರುದ್ದೀನ್
- 6ನೇ ವರ್ಷದ ರಾಜ್ಯ ಮಟ್ಟದ ಖಿದ್ಮಾ ಪ್ರಶಸ್ತಿ
ಕೆ.ಆರ್.ಪೇಟೆ: ಖಿದ್ಮಾ ಫೌಂಡೇಷನ್ ಕರ್ನಾಟಕ, ಅನ್ನದಾತ ಪ್ರಕಾಶನ ಹಾಗೂ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತವಾಗಿ ನೀಡುವ 6ನೇ ವರ್ಷದ ರಾಜ್ಯ ಮಟ್ಟದ ಖಿದ್ಮಾ ಪ್ರಶಸ್ತಿಗೆ ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳಿನ ಯುವ ಸಾಹಿತಿ ಮೊಹಮ್ಮದ್ ಅಜರುದ್ದೀನ್ ಆಯ್ಕೆಯಾಗಿದ್ದಾರೆ.
ಮೈಸೂರಿನ ವಿಜಯನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಜ.25ರಂದು ನಡೆಯಲಿರುವ ಖಿದ್ಮಾ ಕನ್ನಡ ಸಂಗಮ ಕಾರ್ಯಕ್ರಮದ ಸಂಭ್ರಮಾಚರಣೆಯಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಫೌಂಡೇಷನ್ ಅಧ್ಯಕ್ಷ ಆಮಿರ್ ಅಶ್‌ಅರೀ ಬನ್ನೂರು ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಮೂಲದ ಅಜರುದ್ದೀನ್ ಅವರು ಹಾಸನದ ಮಲೆನಾಡು ತಾಂತ್ರಿಕ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿ, ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿ ಒತ್ತಡದ ನಡುವೆಯೂ ಕನ್ನಡ ಸಾಹಿತ್ಯದ ಮೇಲೆ ಅಪಾರ ಒಲವು ಹೊಂದಿರುವ ಇವರು, ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಅಜರುದ್ದೀನ್ ಅವರು ’ಅಕ್ಕಿಆಚುಕ್ಕಿ’, ’ನನ್ನ ವಿಳಾಸ’ (ಕವನ ಸಂಕಲನ), ’ಸಂಜೆ ವಿಹಾರ’, ’ಲೇಖನ ವಿಹಾರ’ (ಲೇಖನ ಸಂಕಲನ) ಹಾಗೂ ಅಕ್ಕಿಹೆಬ್ಬಾಳು ಗ್ರಾಮದ ಇತಿಹಾಸ ಸಾರುವ ’ಹೇಮಾವತಿ ತೀರ’ ಪರಿಚಯ ಕೃತಿಗಳು ಈಗಾಗಲೇ ಓದುಗರ ಮನಗೆದ್ದಿವೆ. ಇವರ ಚೊಚ್ಚಲ ಕಾದಂಬರಿ ’ಅವಳ ಹೆಜ್ಜೆ’ ಬಿಡುಗಡೆಗೆ ಸಿದ್ಧವಾಗಿದ್ದು, ಇನ್ನು ಐದು ಕೃತಿಗಳು ಮುದ್ರಣ ಹಂತದಲ್ಲಿವೆ. ಮೈಸೂರು ದಸರಾ ಚಿಗುರು ಕವಿಗೋಷ್ಠಿ ಸೇರಿದಂತೆ ರಾಜ್ಯದ ವಿವಿಧೆಡೆ 150ಕ್ಕೂ ಹೆಚ್ಚು ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಇವರ ಸಾಹಿತ್ಯ ಸೇವೆಗೆ ಈಗಾಗಲೇ ಕಾವ್ಯಶ್ರೀ ಪುರಸ್ಕಾರ, ಪ್ರೊ. ಎಸ್.ವಿ. ರಂಗಣ್ಣ ರಾಜ್ಯ ಪ್ರಶಸ್ತಿ ಹಾಗೂ ಕನ್ನಡ ವಿಕಾಸ ರತ್ನ ಪ್ರಶಸ್ತಿಗಳು ಸಂದಿವೆ.