ಮದ್ದೂರು ತಾಲೂಕು ಕೆಸ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಕೆ.ಎಂ.ಉದಯ್ ಭೇಟಿ ನೀಡಿ ಅಧಿಕಾರಿಗಳ ಜತೆಗೆ ಪರಿಶೀಲನೆ ನಡೆಸಿದರು. ಕದಲೂರು ರಾಮಕೃಷ್ಣ, ಕೆ.ದಾಸೇಗೌಡ, ಚಲುವರಾಜು, ಹರೀಶ್‌ಬಾಬು ಇದ್ದರು. 
ಮಂಡ್ಯ

ಕೆಸ್ತೂರು, ಕೆ.ಹೊನ್ನಲಗೆರೆ ಪಿಎಚ್‌ಸಿ ಮೇಲ್ದರ್ಜೆಗೆ

ಲಲಾಟಾಕ್ಷ ಎಸ್
ಮದ್ದೂರು: ತಾಲೂಕಿನ ಕೆಸ್ತೂರು ಮತ್ತು ಕೆ.ಹೊನ್ನಲಗೆರೆ ಗ್ರಾಮಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮವಹಿಸಲಾಗಿದೆ ಶಾಸಕ ಕೆ.ಎಂ.ಉದಯ್ ಹೇಳಿದರು.
ತಾಲೂಕಿನ ಕೆಸ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ದಿಢೀರ್ ಭೇಟಿ ನೀಡಿ ಅಧಿಕಾರಿಗಳ ಜತೆಗೆ ಪರಿಶೀಲನೆ ನಡೆಸಿ, ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ನಂತರ ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಸ್ಥಳೀಯರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.
ಮದ್ದೂರು-ತುಮಕೂರು ರಾಜ್ಯ ಹೆದ್ದಾರಿ ಮೇಲ್ದರ್ಜೆಗೊಂಡ ಬಳಿಕ ಸಾಕಷ್ಟು ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ಕೆಸ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿದರೆ ಈ ಭಾಗದ 40ಕ್ಕೂ ಹೆಚ್ಚು ಗ್ರಾಮಗಳ ಜನತೆಗೆ ಗುಣಮಟ್ಟದ ಚಿಕಿತ್ಸೆ ಸಿಗಲಿದೆ. ಇದರ ಜತೆಗೆ ಕೆ.ಹೊನ್ನಲಗೆರೆ ಭಾಗದ ಜನರು ತಾಲೂಕು ಆಸ್ಪತ್ರೆಯನ್ನೇ ಅವಲಂಬಿಸಿರುವುದರಿಂದ ಹೆಚ್ಚಿನ ಒತ್ತಡ ಉಂಟಾಗುತ್ತಿದೆ. ಹೀಗಾಗಿ ಎರಡೂ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಸಂಬಂಧ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಚರ್ಚಿಸಿ ಅನುಮೋದನೆ ಪಡೆಯಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆ.ಎಂ.ದೊಡ್ಡಿ, ಬೆಸಗರಹಳ್ಳಿಯಲ್ಲಿರುವ ಆಸ್ಪತ್ರೆಗಳಿಗೂ ಮೂಲಸೌಕರ್ಯ, ವೈದ್ಯರು ಹಾಗೂ ಸಿಬ್ಬಂದಿ ನೇಮಿಸಿ ರೋಗಿಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ಮುನ್‌ಮುಲ್ ನಿರ್ದೇಶಕ ಹರೀಶ್ ಬಾಬು, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಮುಖಂಡರಾದ ಕೆಸ್ತೂರು ಕೆ.ದಾಸೇಗೌಡ, ಸಿಪಾಯಿ ಶ್ರೀನಿವಾಸ್, ನವೀನ್, ತಿಮ್ಮಯ್ಯ, ಶಂಕರೇಗೌಡ, ಟಿಎಚ್‌ಒ ರವಿಶಂಕರ್ ಇದ್ದರು.