ಬಾಬುರಾಯನಕೊಪ್ಪಲು ಸಮೀಪದ ಎರಮಣಿ ಪಿಕಪ್ ನಾಲೆ ಅಭಿವೃದ್ಧಿ ಕಾಮಗಾರಿಗೆ ಎ.ಬಿ.ರಮೇಶ ಬಂಡಿಸಿದ್ದೇಗೌಡ ಭೂಮಿ ಪೂಜೆ ನೆರವೇರಿಸಿದರು. ಬಿ.ಬೋರೇಗೌಡ, ಬಿ.ಎಸ್ ಸಂದೇಶ್, ಬಿ.ಎಸ್.ವಾಸು, ದೀಪು, ಬಿ.ಎಸ್.ರಾಮಚಂದ್ರು ಇದ್ದರು.
- ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ
- ಬಾಬುರಾಯನಕೊಪ್ಪಲು ಸಮೀಪದ ಎರಮಣಿ ಪಿಕಪ್ ನಾಲೆ ಅಭಿವೃದ್ಧಿ
- ಕಿರಂಗೂರಿನ ಕುಂಬಾರಗುಂಡಿ ನಾಲೆ, ಚೆಂದಗಿರಿಕೊಪ್ಪಲು ಗ್ರಾಮದ ಅಟ್ಟೆಹಳ್ಳ
ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯದ ನೀರು ಪೋಲಾಗದಂತೆ ಅವಶ್ಯವಿರುವ ನಾಲೆಗಳ ಆಧುನೀಕರಣ ಕಾರ್ಯವನ್ನು ರಾಜ್ಯ ಸರ್ಕಾರ ಕೈಗೆತ್ತಿಗೊಂಡಿದ್ದು, ಪ್ರಸ್ತುತ ರೈತರು ಬೇಸಿಗೆ ಅಂತ್ಯದವರೆಗೆ ಬೆಳೆಗಳಿಗೆ ನೀರನ್ನು ಪೋಲು ಮಾಡದೆ ಮಿತವಾಗಿ ಬಳಸಿ ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಸಲಹೆ ನೀಡಿದರು.
ತಾಲೂಕಿನ ಬಾಬುರಾಯನಕೊಪ್ಪಲು ಸಮೀಪದ ಎರಮಣಿ ಪಿಕಪ್ ನಾಲೆ ಅಭಿವೃದ್ಧಿ, ಕಿರಂಗೂರಿನ ಕುಂಬಾರಗುಂಡಿ ನಾಲೆ, ಚೆಂದಗಿರಿಕೊಪ್ಪಲು ಗ್ರಾಮದ ಅಟ್ಟೆಹಳ್ಳ ಸೇರಿದಂತೆ ವಿವಿಧ ನಾಲೆಗಳ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಬೇಸಿಗೆಯ ತಾಪ ಹೆಚ್ಚಾದಂತೆ ಕನ್ನಂಬಾಡಿ ಅಣೆಕಟ್ಟೆ ನೀರಿನ ಮಟ್ಟ ಸಹ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣವು ಇಳಿಕೆಯಾಗುತ್ತಿದೆ. ಸದ್ಯ ಲಭ್ಯ ಇರುವ ನೀರನ್ನು ಅಗತ್ಯತೆಗೆ ತಕ್ಕಂತೆ ಇತಿಮಿತಿಯಲ್ಲಿ ಬಳಸಿಕೊಂಡು ಬೆಳೆ ಬೆಳೆಯುವ ಪರಿಸ್ಥಿತಿ ಎದುರಾಗಿದೆ. ಕಾವೇರಿ ನೀರಾವರಿ ನಿಗಮ ಸಹ ಕಟ್ಟು ಪದ್ಧತಿಯಲ್ಲಿ ನೀರು ಹರಿಸುವ ವೇಳಾಪಟ್ಟಿ ಪ್ರಕಟಿಸಿದ್ದು, ಅದರಂತೆ ಭತ್ತ, ಕಬ್ಬು ಹಾಗೂ ತೋಟಗಾರಿಕೆ ಬೆಳೆಗಳಿಗೆ ವ್ಯರ್ಥವಾಗದಂತೆ ಎಚ್ಚರವಹಿಸಿ ವೈಜ್ಞಾನಿಕ ರೀತಿಯಲ್ಲಿ ನೀರುಣಿಸಬೇಕು ಎಂದರು.
ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರ ಭೂಮಿಗೆ ನೀರನ್ನು ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆಧುನೀಕರಣ ಕಾಮಗಾರಿಗೆ ಮುಂದಾಗಿದ್ದು, ಕ್ಷೇತ್ರ ವ್ಯಾಪ್ತಿಯ ವಿವಿಧ ನಾಲೆ ಮತ್ತು ವಿತರಣಾ ನಾಲೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಲಿದೆ. ನಾಲೆಗಳ ಕಡೇ ಭಾಗಕ್ಕೆ ನೀರು ತಲುಪಿಸಿ ರೈತರ ಬೆಳೆಗಳನ್ನು ಉಳಿಸುವ ಉದ್ದೇಶದಿಂದ ಸಿಮೆಂಟ್ ಲೈನಿಂಗ್ ಮಾಡಲಾಗುತ್ತಿದೆ. ತಾಲೂ ಕಿನ ಬಾಬುರಾಯನಕೊಪ್ಪಲು, ಕಿರಂಗೂರು ಬಳಿ ಕುಂಬಾರಗುಂಡಿ ಪಿಕಪ್ ನಾಲೆ, ಕೂಡಲಕುಪ್ಪೆ ಬಳಿ ಸಿಡಿಎಸ್ ನಾಲೆಯ 77ನೇ ತೂಬಿನಿಂದ ಹೊರಡುವ ನಾಲೆ, ಚಂದಗಿರಿಕೊಪ್ಪಲು ಬಳಿ ಸಿಡಿಎಸ್ ನಾಲೆ ವ್ಯಾಪ್ತಿಯ ಅಟ್ಟೆಹಳ್ಳದ ಸೇತುವೆ ಹಾಗೂ ಸಬ್ಬನಕುಪ್ಪೆ ಗ್ರಾಮದ ಸಿಡಿಎಸ್ ನಾಲೆಯ ಎಸ್ಕೇಪ್ ಹಳ್ಳದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಮನ್‌ಮುಲ್ ನಿರ್ದೇಶಕ ಬಿ.ಬೋರೇಗೌಡ, ತಾಪಂ ಮಾಜಿ ಅಧ್ಯಕ್ಷ ಬಿ.ಎಸ್.ಸಂದೇಶ್, ಮಾಜಿ ಸದಸ್ಯ ಬಿ.ಎಸ್.ವಾಸು, ಗ್ರಾಪಂ ಮಾಜಿ ಅಧ್ಯಕ್ಷ ದೀಪು, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಿ.ಎಸ್.ರಾಮಚಂದ್ರು, ಮುಖಂಡರಾದ ಬಿ.ಎಂ.ಸುಬ್ರಹ್ಮಣ್ಯ, ಹಂಗರಹಳ್ಳಿ ಗೋವಿಂದೇಗೌಡ, ಜವರೇಗೌಡ, ಬಿ.ಎಸ್.ರಮೇಶ್, ವಿಷ್ಣು, ರವಿಕುಮಾರ್, ಪ್ರಭಾಕರ್, ಇಂಜಿನಿಯರ್ ಹೊನ್ನೋಜಿರಾವ್ ಇತರರಿದ್ದರು.