ಮಂಡ್ಯದಿಂದ ಬಿಜೆಪಿ ಕಾರ್ಯಕರ್ತರು ತಮಿಳುನಾಡು ಸಿಎಂಗೆ ಕಾವೇರಿ ತೀರ್ಥ ಮತ್ತು ಮಂಡ್ಯದ ಬೆಲ್ಲವನ್ನು ರವಾನಿಸಿದರು.
- ಮೇಕೆದಾಟು ಯೋಜನೆಗೆ ಸಹಕರಿಸುವಂತೆ ಒತ್ತಾಯ
- ಅಂಚೆ ಮೂಲಕ ತಮಿಳುನಾಡಿಗೆ ಕೊರಿಯರ್
ಕಾವೇರಿ ಸಂಕಷ್ಟ ಸೂತ್ರ ರಚಿಸಬೇಕು ಹಾಗೂ ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಸಹಕಾರ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ತಮಿಳುನಾಡು ಸಿಎಂಗೆ ಕಾವೇರಿ ತೀರ್ಥ ಮತ್ತು ಮಂಡ್ಯದ ಬೆಲ್ಲವನ್ನು ರವಾನಿಸಿದರು.
ನಗರದ ಅಂಚೆ ಕಚೇರಿ ಎದುರು ಜಮಾವಣೆಗೊಂಡ ಕಾರ್ಯಕರ್ತರು ಅಂಚೆ ಮೂಲಕ ಕೊರಿಯರ್ ಮಾಡಿದರು. ಕಾವೇರಿ ನದಿ ನಮ್ಮ ಎರಡು ರಾಜ್ಯಗಳ ನಡುವಿನ ವಿವಾದದ ಸಂಕೇತವಾಗದೆ ಸಹೋದರತ್ವ, ಪರಸ್ಪರ ನಂಬಿಕೆ ಮತ್ತು ರಾಷ್ಟ್ರೀಯ ಏಕತೆಯ ಪ್ರತೀಕವಾಗಬೇಕು. ಎರಡು ರಾಜ್ಯದ ರೈತರು ಒಂದೇ ಆಗಿದ್ದಾರೆ. ಅವರಿಗೆ ನೋವು ಕೊಡುವ ಕೆಲಸವನ್ನು ಯಾವ ಸರ್ಕಾರಗಳು ಮಾಡಬಾರದು. ಮೆಟ್ಟೂರು ಅಣೆಕಟ್ಟೆ ಬಳಿ ನೀವೊಂದು ಡ್ಯಾಂ ನಿರ್ಮಿಸಿಕೊಳ್ಳಿ ಅಥವಾ ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಒಪ್ಪಿಗೆ ನೀಡಬೇಕೆಂದು ಒತ್ತಾಯಿಸಿ ಬೆಲ್ಲ, ಕಾವೇರಿ ತೀರ್ಥವನ್ನು ತನಾಡು ಸಿಎಂಗೆ ಕಳುಹಿಸಲಾಯಿತು.
ಬೆಂಗಳೂರು ಮಹಾನಗರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 1.5 ರಿಂದ 2 ಕೋಟಿ ಜನರ ಕುಡಿಯುವ ನೀರಿನ ಭದ್ರತೆಯು ಇಂದು ಗಂಭೀರ ಸವಾಲಾಗಿ ಪರಿಣಮಿಸಿದೆ. ಜನಸಂಖ್ಯೆಯ ಏರಿಕೆ, ಹವಾಮಾನ ವೈಪರೀತ್ಯ ಮತ್ತು ಅನಿಯಮಿತ ಮಳೆಯ ಪರಿಣಾಮವಾಗಿ ಭವಿಷ್ಯದಲ್ಲಿ ನೀರಿನ ಅಭಾವ ಮತ್ತಷ್ಟು ತೀವ್ರವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಹರಿದು ಹೋಗುವ ಹೆಚ್ಚುವರಿ ನೀರನ್ನು ವೈಜ್ಞಾನಿಕವಾಗಿ ಸಂಗ್ರಹಿಸುವ ಉದ್ದೇಶದಿಂದ ಮೇಕೆದಾಟು ಯೋಜನೆಯನ್ನು ಕರ್ನಾಟಕ ಸರ್ಕಾರ ಪ್ರಸ್ತಾಪಿಸಿದೆ. ಅದಕ್ಕೆ ತಮಿಳುನಾಡು ಸರ್ಕಾರ ಬೆಂಬಲಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಮಾತನಾಡಿ, ಈ ಯೋಜನೆಯ ಉದ್ದೇಶ ತಮಿಳುನಾಡಿನ ಪಾಲಿನ ನೀರನ್ನು ತಡೆಯುವುದಲ್ಲ. ಕರ್ನಾಟಕಕ್ಕೆ ಕಾನೂನುಬದ್ಧವಾಗಿ ಲಭ್ಯವಾಗುವ ನೀರನ್ನು ಸಂಗ್ರಹಿಸಿ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವುದಾಗಿದೆ. ಅಗತ್ಯವಿದ್ದಾಗ ನಿಯಮಾನುಸಾರ ನೀರನ್ನು ಬಿಡುಗಡೆ ಮಾಡುವುದೇ ಇದರ ಮೂಲ ಉದ್ದೇಶವಾಗಿದೆ. ತಮಿಳುನಾಡು ತನ್ನ ಜನರ ಹಿತಕ್ಕಾಗಿ ಅನೇಕ ಜಲಾಶಯಗಳನ್ನು ನಿರ್ಮಿಸಿ ನೀರಿನ ಸಮರ್ಪಕ ನಿರ್ವಹಣೆ ಮಾಡಿರುವುದು ಶ್ಲಾಘನೀಯ. ಅದೇ ರೀತಿ ಕರ್ನಾಟಕಕ್ಕೂ ತನ್ನ ನಾಗರಿಕರ ಕುಡಿಯುವ ನೀರಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಹಕ್ಕು ಇದೆ ಎಂದರು.
ನಮ್ಮದು ಮುಖ್ಯವಾಗಿ ಕುಡಿಯುವ ನೀರಿನ ಯೋಜನೆಯಾಗಿದ್ದು ನೀರಾವರಿ ವಿಸ್ತರಣೆಯ ಉದ್ದೇಶ ಹೊಂದಿಲ್ಲ. ಬೆಂಗಳೂರು ಸೇರಿದಂತೆ ಲಕ್ಷಾಂತರ ನಾಗರಿಕರಿಗೆ ದೀರ್ಘಾವಧಿಯ ಕುಡಿಯುವ ನೀರಿನ ಭದ್ರತೆ ಒದಗಿಸುತ್ತದೆ. ಮಳೆಗಾಲದಲ್ಲಿ ಸಮುದ್ರಕ್ಕೆ ಹರಿದುಹೋಗುವ ಹೆಚ್ಚುವರಿ ನೀರನ್ನು ಸಂಗ್ರಹಿಸಿ, ಬರಗಾಲದಲ್ಲಿ ಸಮರ್ಪಕವಾಗಿ ಬಳಸಲು ನೆರವಾಗುತ್ತದೆ. ತಮಿಳುನಾಡಿಗೆ ನ್ಯಾಯಾಲಯ ಹಾಗೂ ಕಾವೇರಿ ನೀರು ಹಂಚಿಕೆ ವ್ಯವಸ್ಥೆಯಡಿ ದೊರೆಯಬೇಕಾದ ನೀರಿನ ಹಕ್ಕಿಗೆ ಯಾವುದೇ ಧಕ್ಕೆಯಾಗದಂತೆ ಅನುಷ್ಠಾನಗೊಳಿಸಬಹುದಾದ ಯೋಜನೆ ಇದಾಗಿದೆ ಎಂದು ಸಲಹೆ ನೀಡಿದರು.
ಮುಖಂಡರಾದ ಪ್ರಸನ್ನಕುಮಾರ್, ಮಹಾಂತಪ್ಪ, ಹೊಸಹಳ್ಳಿ ಶಿವು, ನಿತ್ಯಾನಂದ, ಎಲ್ಲೇಗೌಡ ಇದ್ದರು.