ಮಂಡ್ಯ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪುಸ್ತಕ ಪ್ರೇಮಿ ಅಂಕೇಗೌಡ ಅವರನ್ನು ಅಭಿನಂದಿಸಲಾಯಿತು. 
ಮಂಡ್ಯ

ಅಂಕೇಗೌಡರ ಪುಸ್ತಕ ಪ್ರೇಮ ಮಾದರಿ: ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮೆಚ್ಚುಗೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಕಸಾಪದಿಂದ ಅಂಕೇಗೌಡರಿಗೆ ಸನ್ಮಾನ
  • ನಗರದ ಗಾಂಧಿಭವನದಲ್ಲಿ ಆಯೋಜನೆ
ಮಂಡ್ಯ: ಪುಸ್ತಕಗಳು ದೇಶಕ್ಕೆ ಅನನ್ಯವಾದ ಸಂಪತ್ತು. ಅಂತಹ ಪುಸ್ತಕಗಳನ್ನು ಲಕ್ಷಾಂತರ ಸಂಖ್ಯೆಯಲ್ಲಿ ಸಂಗ್ರಹಿಸಿರುವ ಅಂಕೇಗೌಡ ಅವರ ಪುಸ್ತಕ ಪ್ರೇಮ ಎಲ್ಲರಿಗೂ ಮಾದರಿ ಹಾಗೂ ಮೆಚ್ಚುವಂತಹ ಕಾರ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.
ನಗರದ ಗಾಂಧಿಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಪದ್ಮಶ್ರೀ ಪ್ರಶಸ್ತಿ ಗೌರವಕ್ಕೆ ಭಾಜನರಾಗಿರುವ ಪುಸ್ತಕ ಪ್ರೇಮಿ ಅಂಕೇಗೌಡ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅಂಕೇಗೌಡರು ತಮ್ಮ ಜೀವಿತಾವಧಿಯಲ್ಲಿ ಅತ್ಯುತ್ತಮ ಪುಸ್ತಕಗಳನ್ನು ಸಂಗ್ರಹಿಸಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಐತಿಹಾಸಿಕ ದಾಖಲೆಯುಳ್ಳ ಪುಸ್ತಕಗಳು ಅವರ ಸಂಗ್ರಹದಲ್ಲಿರುವುದು ಶ್ಲಾಘನೀಯ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪುಸ್ತಕ ಪ್ರೇಮಿ ಅಂಕೇಗೌಡ, ನಮ್ಮ ಕಾಲದಲ್ಲಿ ಓದಲು ಪುಸ್ತಕಗಳೇ ಸಿಗುತ್ತಿರಲಿಲ್ಲ. ಹಾಗಾಗಿ ಈ ಬಗ್ಗೆ ಯೋಚನೆ ಮಾಡಿ ಪುಸ್ತಕಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ಅದು ಈ ಹಂತಕ್ಕೆ ಬಂದಿದೆ ಎಂದು ಹೇಳಿದರು.
ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹರ್ಷ ವಿ.ಪಣ್ಣೆದೊಡ್ಡಿ, ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ, ಕಸಾಪ ಮಾಜಿ ಅಧ್ಯಕ್ಷರಾದ ಎಂ.ವಿ.ಧರಣೇಂದ್ರಯ್ಯ, ಜಿ.ಟಿ.ವೀರಪ್ಪ, ಡಿ.ಪಿ.ಸ್ವಾಮಿ, ಎಚ್.ಆರ್.ಪೂರ್ಣಚಂದ್ರ ತೇಜಸ್ವಿ, ಚಂದ್ರಲಿಂಗು, ಸುನೀಲ್ಕುಮಾರ್, ಚಂದ್ರಶೇಖರ್, ಸಿದ್ದಲಿಂಗ, ಪ್ರಕಾಶ್, ಮಹದೇವಸ್ವಾಮಿ, ಚೇತನ್‌ಕುಮಾರ್ ಇತರರಿದ್ದರು.