ಮಂಡ್ಯ ನಗರದ ಕೆ.ವಿ.ಶಂಕರಗೌಡ ಭವನದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಲಾಯಿತು.
- ನಗರದ ಕೆ.ವಿ.ಶಂಕರಗೌಡ ಭವನದಲ್ಲಿ ಮಹಿಳಾ ದಿನಾಚರಣೆ
- ಕರ್ನಾಟಕ ಸಂಘ ಮಹಿಳಾ ಘಟಕದಿಂದ ಆಯೋಜನೆ
ಮಂಡ್ಯ: ಮಹಿಳಾ ಸಬಲೀಕರಣಗೊಂಡಿದ್ದಾರೆಂದು ಸಮಾಜ ಹೇಳುತ್ತದೆ. ಆದರೆ ಅವರು ಯಾರು ಎಂಬುದನ್ನು ಹುಡುಕುವ ಸ್ಥಿತಿ ಈ ಸಮಾಜದಲ್ಲಿಯೇ ಇರುವುದು ದುರಂತ ಎಂದು ನಿವೃತ್ತ ಉಪನ್ಯಾಸಕಿ ಪ್ರೊ.ಶ್ರೀದೇವಿ ವಿಷಾದಿಸಿದರು.
ನಗರದ ಕೆ.ವಿ.ಶಂಕರಗೌಡ ಭವನದಲ್ಲಿ ಕರ್ನಾಟಕ ಸಂಘ ಮಹಿಳಾ ಘಟಕದ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣ ಪಡೆದುಕೊಂಡವರು, ಉದ್ಯೋಗ ಪಡೆದುಕೊಂಡವರು, ಆರ್ಥಿಕವಾಗಿ ಸ್ವಾತಂತ್ರ್ಯ ಪಡೆದುಕೊಂಡವರಿದ್ದಾರೆ. ಆದರೆ ಈ ಮಹಿಳೆಯರಿಗೆಲ್ಲ ಸಂಪೂರ್ಣವಾಗಿ ಸ್ವಾತಂತ್ರ್ಯ ಸಿಕ್ಕಿದಿಯೇ?. ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಎಲ್ಲಿ ಸಿಕ್ಕಿದೆ ಸ್ವಾತಂತ್ರ್ಯ ಎನ್ನುವುದನ್ನು ನೀವೇ ಹೇಳಿ. ಕೆಲ ಮನೆಯಲ್ಲಿ ಹೆಣ್ಣು ಮಕ್ಕಳು ಮಾತನಾಡದ ಸ್ಥಿತಿ ಇದೆ. ಏಕೆಂದರೆ ಮೃದುವಾಗಿ ಹೆಣ್ಣು ಮಾತನಾಡಬೇಕೆನ್ನುವ ಕಟ್ಟುಪಾಡು ಇನ್ನೂ ಇದೆ. ಸಿಗದೇ ಇರುವ ಸ್ವಾತಂತ್ರ್ಯದ ಹಿಂದೆ ಮಹಿಳೆಯು ಓಡುತ್ತಿದ್ದಾಳೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಚಾರವಾದಿ ಮಂಜುಳಾ ಜಯಪ್ರಕಾಶಗೌಡ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಸಾಹಿತಿ ಮ.ರಾಮಕೃಷ್ಣ, ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ, ಮಹಿಳಾ ಘಟಕದ ಅಧ್ಯಕ್ಷೆ ನಾಗರೇವಕ್ಕ, ವೀಣಾ, ಸುಲೋಚನಾ, ನಂದಿನಿ ಜಯರಾಂ, ನಿರ್ಮಲಾ, ಪ್ರೊ.ಚಂದ್ರಮ್ಮ ಇದ್ದರು.