ಮಂಡ್ಯದಲ್ಲಿ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘದಿಂದ ಕುಲಪತಿ ಪ್ರೊ.ಶಿವಚಿತ್ತಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. 
ಮಂಡ್ಯ

ಕಾರ್ಯಭಾರವನ್ನು ಹೆಚ್ಚಿಸುವಂತೆ ಒತ್ತಾಯ: ಕನ್ನಡ ಅಧ್ಯಾಪಕರ ಸಂಘದಿಂದ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಪ್ರತಿಭಟನೆಗೆ ಜಯ ಕರ್ನಾಟಕ ಸಂಘ ಬೆಂಬಲ
  • ಕುಲಪತಿ ಪ್ರೊ.ಶಿವಚಿತ್ತಪ್ಪ ಅವರಿಗೆ ಮನವಿ ಸಲ್ಲಿಕೆ
ಮಂಡ್ಯ: ಎಸ್‌ಇಪಿ 5 ಮತ್ತು 6ನೇ ಚತುರ್ಮಾಸದ ಐಚ್ಛಿಕ ಕನ್ನಡ ಪತ್ರಿಕೆಗಳ ಕಾರ್ಯಭಾರವನ್ನು ಹೆಚ್ಚಿಸುವಂತೆ ಒತ್ತಾಯಿಸಿ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಂಡ್ಯ ವಿಶ್ವವಿದ್ಯಾಲಯದ ಎದುರು ಧರಣಿ ನಡೆಸಿದ ಸಂಘದ ಪದಾಧಿಕಾರಿಗಳು, ಕುಲಪತಿ ಪ್ರೊ.ಶಿವಚಿತ್ತಪ್ಪ ಅವರಿಗೆ ಮನವಿ ಸಲ್ಲಿಸಿದರು. 2026-27ನೇ ಸಾಲಿಗೆ ಮಂಡ್ಯ ವಿಶ್ವವಿದ್ಯಾಲಯವು 5 ಮತ್ತು 6ನೇ ಚತುರ್ಮಾಸದ ಐಚ್ಚಿಕ ಕನ್ನಡ ಪತ್ರಿಕೆಗಳ ಕಾರ್ಯಭಾರ ಪ್ರಕಟಿಸಿದೆ. ಇದರಲ್ಲಿ 2 ಡಿಎಸ್‌ಸಿ ಪತ್ರಿಕೆಗಳಿಗೆ 4 ಕ್ರೆಡಿಟ್‌ಗೆ 4 ಗಂಟೆ ಬೋಧನಾ ಅವಧಿಯೆಂದು ಹಾಗೂ ಕಡ್ಡಾಯ ಕೌಶಲ ಪತ್ರಿಕೆಗೆ 2 ಕ್ರಿಡಿಟ್‌ಗೆ 2ಗಂಟೆಗಳ ಬೋಧನಾ ಅವಧಿ ಎಂದು ನಿಗದು ಮಾಡಿರುತ್ತದೆ ಎಂದು ದೂರಿದರು.
ಪ್ರಥಮ ಬಿಎ ಮತ್ತು ದ್ವಿತೀಯ ಬಿಎ ಐಚ್ಚಿಕ ಕನ್ನಡ ಪತ್ರಿಕೆಗಳಿಗೆ 5 ಕ್ರೆಡಿಟ್‌ಗೆ 6 ಗಂಟೆಗಳ ಬೋಧನಾ ಅವಧಿ ಎಂದು ನಿಗದಿಯಾಗಿದೆ. ಅದರಂತೆ 5 ಮತ್ತು 6ನೇ ಸೆಮಿಸ್ಟರ್‌ಗೂ 4 ಕ್ರಿಡಿಟ್‌ಗೆ 5 ಗಂಟೆಗಳ ಬೋಧನಾ ಅವಧಿ ಹಾಗೂ ಕಡ್ಡಾಯ ಕೌಶಲ ಪತ್ರಿಕೆಗೆ 2 ಕ್ರಿಡಿಟ್‌ಗೆ 3 ಗಂಟೆಗಳ ಬೋಧನಾ ಅವಧಿ ಸೇರಿದಂತೆ ಒಟ್ಟು 13 ಗಂಟೆಯ ಬೋಧನಾ ಅವಧಿ ನಿಗಧಿ ಮಾಡಬೇಕು ಎಂದು ಒತ್ತಾಯಿಸಿದರು.
ಮಂಡ್ಯ ವಿವಿ ಇತರೆ ಮಾನವಿಕ ವಿಷಯಗಳಿಗೆ 5 ಮತ್ತು 6ನೇ ಸೆಮಿಸ್ಟರ್‌ಗೆ 13 ಗಂಟೆಗಳ ಕಾರ್ಯಭಾರವನ್ನು ನಿಗದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಐಚ್ಚಿಕ ಕನ್ನಡ 5 ಮತ್ತು 6ನೇ ಸೆಮಿಸ್ಟರ್‌ಗಳಿಗೆ 13 ಗಂಟೆಗಳ ಕಾರ್ಯಭಾರವನ್ನು ಹೆಚ್ಚಿಸಿಕೊಡಬೇಕು ಎಂದು ಆಗ್ರಹಿಸಿದರು. ಅಧ್ಯಾಪಕರ ಪ್ರತಿಭಟನೆಗೆ ಜಯ ಕರ್ನಾಟಕ ಸಂಘ ಬೆಂಬಲ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಡಾ.ಎನ್.ಎಸ್.ಶಂಕರೇಗೌಡ, ಡಾ.ಪ್ರತಿಮಾ, ನಾಗರಾಜು, ಪರಮೇಶ್, ಡಾ.ಬರಗೂರಪ್ಪ, ಡಾ.ಕೆ.ಪಿ.ಲೋಕೇಶ್, ಡಾ.ಜಯಕೀರ್ತಿ, ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ಇತರರಿದ್ದರು.