ಚಿಕ್ಕಮಗಳೂರು ಮೂಲದ ಉದ್ಯಮಿ ಕಾರ್ತಿಕ್‌ಗೌಡಗೆ ಶಾಸಕ ಪಿ.ರವಿಕುಮಾರ್ ಗಣಿಗ ಹಾಗೂ ಮಾಜಿ ಸಂಸದ ವೀರೇಂದ್ರ ಶರ್ಮಾ ಪ್ರಶಸ್ತಿ ಪ್ರದಾನ ಮಾಡಿದರು.  
ಮಂಡ್ಯ

ಲಂಡನ್ ಪಾರ್ಲಿಮೆಂಟ್‌ನಲ್ಲಿ ಕನ್ನಡದ ಕಂಪು: ಮಾತೃ ಭಾಷೆಯಲ್ಲಿ ಭಾಷಣ ಮಾಡಿದ ಶಾಸಕ ರವಿಕುಮಾರ್ ಗಣಿಗ

ಪ್ರಮುಖ ಮುಖ್ಯಾಂಶಗಳು

  • ಪ್ರತಿಷ್ಠಿತ ಲೂಮಿನಾರ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಯಕ್ರಮ
  • ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡುತ್ತಿರುವವರಿಗೆ ಪ್ರಶಸ್ತಿ ಪ್ರದಾನ
  • ಶಾಸಕ ಪಿ.ರವಿಕುಮಾರ್ ಗಣಿಗ ಸೇರಿದಂತೆ ಹಲವರು ಭಾಗಿ
ಮಂಡ್ಯ: ಲಂಡನ್‌ನ ಹೌಸ್ ಆಫ್ ಕಾಮನ್ಸ್(ಪಾರ್ಲಿಮೆಂಟ್)ನಲ್ಲಿ ಆಯೋಜಿಸಿದ್ದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಕನ್ನಡದಲ್ಲಿ ಭಾಷಣ ಮಾಡಿದ್ದಾರೆ. ಈ ಮೂಲಕ ಮಾತೃಭಾಷೆಯನ್ನು ವಿದೇಶದ ಪಾರ್ಲಿಮೆಂಟ್‌ನಲ್ಲಿ ಮಾತನಾಡಿದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಪ್ರತಿಷ್ಠಿತ ಲೂಮಿನಾರ್ಸ್ ಸಂಸ್ಥೆಯಿಂದ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡುತ್ತಿರುವ 25ಕ್ಕೂ ಹೆಚ್ಚು ಸಾಧಕರಿಗೆ ಪ್ರಶಸ್ತಿ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಯಿತು. ಈ ಕಾರ್ಯಕ್ರಮದ ಅತಿಥಿಗಳಾಗಿ ಲಂಡನ್‌ನಲ್ಲಿ ನಾಲ್ಕು ಬಾರಿ ಸಂಸದರಾಗಿ ಸೇವೆ ಸಲ್ಲಿಸಿರುವ ವೀರೇಂದ್ರ ಶರ್ಮಾ ಹಾಗೂ ಮಂಡ್ಯ ಶಾಸಕ ಪಿ.ರವಿಕುಮಾರ್ ಗಣಿಗ ಭಾಗಿಯಾದರು. ವಿದೇಶದ ಸಾಧಕರ ಜತೆಗೆ ಬೆಂಗಳೂರು ಕಿಂಗ್ಸ್ ಕ್ಲಬ್‌ನ ಮಾಲೀಕ ವಿ.ರವಿಕುಮಾರ್ ಹಾಗೂ ದುಬೈನಲ್ಲಿರುವ ಎಂ.ಕೆ.ಇಂಟರ್ ನ್ಯಾಷನಲ್ ಕಂಪನಿಯ ಮಾಲೀಕ ಚಿಕ್ಕಮಗಳೂರು ಮೂಲದ ಕಾರ್ತಿಕ್‌ಗೌಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಗಮನಸೆಳೆದಿದ್ದು ಕರ್ನಾಟಕದ ಪ್ರತಿನಿಧಿಯಾಗಿ ಪಾಲ್ಗೊಂಡ ಶಾಸಕ ಪಿ.ರವಿಕುಮಾರ್ ಗಣಿಗ ಅವರ ಕನ್ನಡ ಭಾಷಣ. ಆಂಗ್ಲ ಭಾಷೆಯಲ್ಲಿ ಮಾತು ಆರಂಭಿಸಿದ ಶಾಸಕ, ನನ್ನ ಮಾತೃಭಾಷೆಯಲ್ಲಿ ಮಾತನಾಡುವುದಾಗಿ ಹೇಳಿ ಎಲ್ಲರಿಗೂ ನಮಸ್ಕಾರ ತಿಳಿಸಿದರು. ಈ ವೇಳೆ ನೆರೆದಿದ್ದವರು ಚಪ್ಪಾಳೆ ತಟ್ಟುವ ಮೂಲಕ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂಗ್ಲೆಂಡ್‌ನ ಪಾರ್ಲಿಮೆಂಟ್‌ನಲ್ಲಿ ಕನ್ನಡ ಪ್ರತಿನಿಧಿಯಾಗಿ ಪಾಲ್ಗೊಂಡಿರುವುದು ನನಗೆ ಖುಷಿಯ ವಿಚಾರ. ಭಾರತ ಮೂಲದ ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸದ ಸಂಗತಿ ಎಂದರು.
ಚಿಕ್ಕಮಗಳೂರು ಮೂಲದ ಉದ್ಯಮಿ ಕಾರ್ತಿಕ್‌ಗೌಡಗೆ ಶಾಸಕ ಪಿ.ರವಿಕುಮಾರ್ ಗಣಿಗ ಹಾಗೂ ಮಾಜಿ ಸಂಸದ ವೀರೇಂದ್ರ ಶರ್ಮಾ ಪ್ರಶಸ್ತಿ ಪ್ರದಾನ ಮಾಡಿದರು.

ಉದ್ಯಮ ಸ್ಥಾಪನೆಗೆ ಶಾಸಕ ಆಹ್ವಾನ
ತಮ್ಮ ಭಾಷಣದಲ್ಲಿ ಕರ್ನಾಟಕದ ಬಗ್ಗೆ ವಿಶೇಷವಾಗಿ ವರ್ಣಿಸಿದ ಶಾಸಕ ರವಿಕುಮಾರ್ ಗಣಿಗ, ನಮ್ಮ ರಾಜ್ಯ ಸೂಪರ್ ಪವರ್. ಇಡೀ ವಿಶ್ವಕ್ಕೆ ಸಾಫ್ಟ್‌ವೇರ್ ರಫ್ತು ಮಾಡುವುದು ನಮ್ಮ ಕರ್ನಾಟಕ. ಎಚ್‌ಎಎಲ್ ಹಾಗೂ ಎರಡು ಚಿನ್ನದ ಗಣಿಯನ್ನು ಹೊಂದಿದ್ದೇವೆ. ಇಂಗ್ಲೆಂಡ್ ರಾಣಿ ಎಲಿಜಬೆತ್ ಬಳಿ ಇದ್ದ ಕೊಹಿನೂರು ವಜ್ರ ಕೂಡ ಕರ್ನಾಟಕದ್ದು ಎಂದು ಹೇಳುವುದಕ್ಕೆ ಹೆಮ್ಮೆಯಾಗುತ್ತದೆ. ಕಾವೇರಿ ನೀರು ಹರಿಯುವ ರಾಜ್ಯ. ಮಂಡ್ಯದಿಂದ 90 ರಾಷ್ಟ್ರಕ್ಕೆ ಎಥೆನಾಲ್ ಪೂರೈಕೆ ಮಾಡಿದ ಹೆಗ್ಗಳಿಕೆ ಹೊಂದಿದೆ. ಭಾರತದಲ್ಲಿ ಬ್ರಿಟಿಷ್ ಸರ್ಕಾರವಿದ್ದಾಗ ಬೇರೆ ರಾಷ್ಟ್ರಗಳಿಗೆ ಎಥೆನಾಲ್ ಅನ್ನು ರಫ್ತು ಮಾಡುತ್ತಿತ್ತು. ಕರ್ನಾಟಕ ಅಷ್ಟು ಸಮೃದ್ಧಿಯಾಗಿದೆ ಎಂದರು.
ದುಬೈ ಸೇರಿದಂತೆ ವಿದೇಶಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಟ್ರಾಫಿಕ್ ಜಾಮ್ ಹೆಚ್ಚು ಇಲ್ಲ. ಇಲ್ಲಿನ ಉದ್ಯಮಿಗಳು ಕರ್ನಾಟಕಕ್ಕೆ ಬಂದು ಉದ್ಯಮಕ್ಕೆ ಹಣ ಹೂಡಿಕೆ ಮಾಡಬಹುದು. ನಮ್ಮ ರಾಜ್ಯ ಸರ್ಕಾರ ಸ್ನೇಹಮಯ ವಾತಾವರಣ ಕಲ್ಪಿಸಿಕೊಡಲಿದೆ. ಬೆಂಗಳೂರಿನಲ್ಲಿ ಉದ್ಯಮ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಸಾಕಷ್ಟು ಸಾಧಕ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.