ಮದ್ದೂರು ನಗರದ ಎಚ್.ಕೆ.ವೀರಣ್ಣಗೌಡ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಪ್ರಾಧ್ಯಾಪಕ ಪ್ರಸನ್ನ ಕುಮಾರ್ ಕೆರಗೋಡು ಉದ್ಘಾಟಿಸಿದರು. ಎಂ.ಸ್ವರೂಪ್‌ಚಂದ್, ಸಿ.ಅಪೂರ್ವಚಂದ್ರ, ಯು.ಎಸ್.ಶಿವಕುಮಾರ್, ಜಿ.ಎಸ್.ನಂದಿನಿ, ಚಂದನ್, ಡಾ.ನವೀನ್‌ಕುಮಾರ್ ಇದ್ದರು.
ಮದ್ದೂರು: ವಿದ್ಯಾರ್ಥಿಗಳ ಜೀವನವು ಕೇವಲ ಪಠ್ಯದ ಜ್ಞಾನಕ್ಕೆ ಸೀಮಿತವಾಗದೆ ಕೌಶಲ, ನೈತಿಕತೆ ಮತ್ತು ಶಿಸ್ತನ್ನು ಕಲಿಯುವ ಮೂಲಕ ಸಮಾಜಮುಖಿಯಾಗಿ ರೂಪುಗೊಳ್ಳಬೇಕು ಎಂದು ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಪ್ರಸನ್ನ ಕುಮಾರ್ ಕೆರಗೋಡು ಕಿವಿಮಾತು ನೀಡಿದರು.
ನಗರದ ಎಚ್.ಕೆ.ವೀರಣ್ಣಗೌಡ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಕನ್ನಡ ಸಂಘ ಉದ್ಘಾಟನೆ ಹಾಗೂ ಸಿಇಟಿ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಅಂಕ ಗಳಿಕೆಯು ಶಿಕ್ಷಣದ ಮಾನದಂಡವಾಗುತ್ತಿರುವುದರಿಂದ ಮಕ್ಕಳು ಅನಗತ್ಯವಾಗಿ ಒತ್ತಡಕ್ಕೆ ಒಳಗಾಗುತ್ತಿರುವುದು ವಿಷಾದನೀಯ. ಮಕ್ಕಳಿಗೆ ಒತ್ತಡ ನಿಭಾಯಿಸಲು ಮತ್ತು ಇತರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಂತಹ ಮೌಲ್ಯಯುತ ಶಿಕ್ಷಣವನ್ನು ನೀಡುವುದು ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.
ಗ್ರಾಮೀಣ ಪ್ರದೇಶದ ಮಕ್ಕಳು ಪ್ರತಿಭಾವಂತರಾಗಿದ್ದು, ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ನೀಡಿದರೆ ವಿಶ್ವದ ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಬಲ್ಲರು. ಆದರೆ ಪಾಲಕರು ಅನಗತ್ಯವಾಗಿ ತಮ್ಮ ಆಲೋಚನೆಗಳನ್ನು ಮಕ್ಕಳ ಮೇಲೆ ಪ್ರಯೋಗಿಸುವ ಮೂಲಕ ಅವರನ್ನು ಸೀಮಿತ ಕ್ಷೇತ್ರಕ್ಕೆ ದೂಡುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
ಎಂ.ಎಚ್.ಚನ್ನೇಗೌಡ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಸ್ವರೂಪಚಂದ್, ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಿ.ಅಪೂರ್ವಚಂದ್ರ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಯು.ಎಸ್.ಶಿವ ಕುಮಾರ್, ಉಪ ಪ್ರಾಂಶುಪಾಲ ಜಿ.ಎಸ್.ನಂದಿನಿ, ಪ್ರಾಧ್ಯಾಪಕ ಚಂದನ್, ಸಿಇಟಿ ಸಂಪನ್ಮೂಲ ವ್ಯಕ್ತಿಗಳಾದ ಡಾ.ನವೀನ್‌ಕುಮಾರ್, ಸ್ವಾಮಿ, ಉಪನ್ಯಾಸಕರಾದ ಎಚ್.ಎಸ್. ಪಂಚಲಿಂಗೇಗೌಡ , ಜಿ.ಸುರೇಂದ್ರ, ಸ್ಮಿತಾ, ಸ್ವಾತಿ, ರಾಜೇಶ್, ರಕ್ಷಿತಾ, ಚಾಂದಿನಿ ಇತರರು ಇದ್ದರು.