ಮಂಡ್ಯದ ಎಸ್.ಬಿ.ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
- ಕನ್ನಡ ರಾಜ್ಯೋತ್ಸವ ಪುರಸ್ಕಾರ
- ಮಾತೃ ಭಾಷೆ ಕನ್ನಡವನ್ನು ಎಂದಿಗೂ ಮರೆಯಬೇಡಿ
- ಸಂಗೀತದಲ್ಲಿಯೂ ನೂರಾರು ಅರ್ಥ ಕೊಡುವ ಭಾಷೆ ಕನ್ನಡ
ಮಂಡ್ಯ: ವ್ಯವಹಾರಿಕವಾಗಿ ಯಾವ ಭಾಷೆಯನ್ನಾದರೂ ಕಲಿಯಿರಿ. ಆದರೆ ನಿಮ್ಮ ಮಾತೃ ಭಾಷೆ ಕನ್ನಡವನ್ನು ಎಂದಿಗೂ ಮರೆಯಬೇಡಿ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಹೇಳಿದರು.
ನಗರದ ಎಸ್.ಬಿ. ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ತಾಲೂಕು ಘಟಕ, ಮಾಂಡವ್ಯ ಶಿಕ್ಷಣ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಅರ್ಥಪೂರ್ಣವಾದ ಭಾಷೆಯಾಗಿದೆ. ಸಂಗೀತದಲ್ಲಿಯೂ ನೂರಾರು ಅರ್ಥ ಕೊಡುವ ಯಾವುದಾದರೂ ಭಾಷೆಯಿದ್ದರೆ ಅದು ಕನ್ನಡ ಎಂಬುದನ್ನು ವಚನಕಾರರೇ ಹೇಳಿದ್ದಾರೆ ಎಂದರು.
ಈ ಹಿಂದೆ ಕನ್ನಡ ಭಾಷೆಯ ಅಸ್ಮಿತೆಯೇನಾದರೂ ಅಸ್ತಿತ್ವದಲ್ಲಿ ಉಳಿದಿದೆ ಎಂದರೆ ಅದಕ್ಕೆ ವಚನಕಾರರು, ಜನಪದರು, ಕೀರ್ತನೆಕಾರರಿಂದಲೇ ಎನ್ನುವುದನ್ನು ಹೇಳಬಹುದು. ಪ್ರಸ್ತುತದಲ್ಲಿ ಕನ್ನಡ ಭಾಷೆ ನಶಿಸುತ್ತಿದೆಯೇನೋ ಎಂಬುವ ಆತಂಕ ಕಾಡುತ್ತಿದೆ. ಕೇವಲ ಕನ್ನಡವನ್ನೇ ಕಲಿತರೆ ಉದ್ಯೋಗಾವಕಾಶ ಸಿಗುವುದಿಲ್ಲ ಎನ್ನುವ ಪರಿಕಲ್ಪನೆ ಇದೆ. ನೀವು ಯಾವ ಭಾಷೆಯನ್ನಾದರೂ ಕಲಿತುಕೊಳ್ಳಿ, ಆದರೆ ಮಾತೃ ಭಾಷೆಯಾಗಿರುವ ಕನ್ನಡವನ್ನು ಕಲಿಯುವುದು ಮುಖ್ಯವಾಗಿರಲಿ ಎಂದು ಸಲಹೆ ನೀಡಿದರು.
ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಮಾತನಾಡಿ, ಜನಸಂಖ್ಯೆಗನುಗುಣವಾಗಿ ಶಾಲೆಗಳು ಹೆಚ್ಚಾಗಬೇಕು. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದರಿಂದ ಅವರಿಗೆ ಪ್ರೋತ್ಸಾಹ ನೀಡಲು ಸಾಧ್ಯವಾಗುತ್ತದೆ. ಅಂಕವೀರರಾಗುವ ಜತೆಗೆ ಮನುಷ್ಯತ್ವ ಸಂಪಾದನೆ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಕನ್ನಡಕ್ಕೆ ದುಡಿದ ಮಹನೀಯರಿಗೆ ಗೌರವ ಸಲ್ಲಿಸುತ್ತಾ ಬಂದಿರುವುದೇ ಒಂದು ಪುಣ್ಯದ ಕೆಲಸವಾಗಿದೆ. ಎಲ್ಲರೂ ಒಟ್ಟಿಗೆ ಕುಳಿತು ಕನ್ನಡ ಓದಿದರೆ ಪ್ರೀತಿ ಅಭಿಮಾನ ಹೆಚ್ಚುತ್ತದೆ ಎಂದರು.
ಅಕ್ಕಮಹಾದೇವಿ ವಿ.ವಿ ವಿಶೇಷ ಅಧಿಕಾರಿ ವಿಷ್ಣು ಶಿಂಧೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಚಲುವಯ್ಯ, ಡಿಡಿಪಿಯು ಜಿ.ಎ.ಲೋಕೇಶ್, ಬಿಇಒಗಳಾದ ಮಹಾದೇವ, ಕೆ.ಟಿ.ಸೌಭಾಗ್ಯಾ, ಪರಿಷತ್‌ನ ವಿ.ಹರ್ಷ, ಚಂದ್ರಲಿಂಗು, ಪ್ರಾಂಶುಪಾಲ ಕೆ.ಸಿ.ಚಂದ್ರಶೇಖರ್ ಇದ್ದರು. ಇದೇ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ರಾಜ್ಯೋತ್ಸವ ಪ್ರತಿಭಾ ಪುರಸ್ಕಾರ ನೀಡಲಾಯಿತು.