ಶ್ರೀರಂಗಪಟ್ಟಣದ ರಿವರ್ ವ್ಯಾಲಿ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಹಂತದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಎ.ಬಿ.ರಮೇಶ ಬಂಡಿಸಿದ್ದೇಗೌಡ ಉದ್ಘಾಟಿಸಿ ಚಾಲನೆ ನೀಡಿದರು. ಆರ್.ಆದರ್ಶ್, ಎಂ.ಎಲ್.ದಿನೇಶ್, ಎಸ್.ಪಿ.ನಮ್ರತಾ, ಸಿದ್ದಲಿಂಗು ಇದ್ದರು.
- ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅಭಿಮತ
ಶ್ರೀರಂಗಪಟ್ಟಣ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿನ ಪ್ರತಿಭೆ, ಕೌಶಲಗಳನ್ನು ಗುರುತಿಸಿ ಹೊರತೆಗೆದು ಅವರನ್ನು ಸಮಾಜದ ಮುನ್ನೆಲೆಗೆ ಪರಿಚಯಿಸಲು ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉತ್ತಮ ವೇದಿಕೆಯಾಗಬೇಕು ಎಂದು ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಸಲಹೆ ನೀಡಿದರು.
ಪಟ್ಟಣದ ಗಂಜಾಂನ ಚಂದಗಾಲು ರಸ್ತೆಯ ರಿವರ್ ವ್ಯಾಲಿ ಶಿಕ್ಷಣ ಸಂಸ್ಥೆಯಲ್ಲಿ 2025ನೇ ಸಾಲಿನ ತಾಲೂಕು ಕ್ಷೇತ್ರ ಶಿಕ್ಷಣ ಹಾಗೂ ಸಂಪನ್ಮೂಲ ಇಲಾಖೆಗಳ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಹಂತದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಪ್ಪಟ ದೇಸಿ ನೆಲೆಗಟ್ಟಿನ ಸಂಸ್ಕೃತಿಯಲ್ಲಿ ಬೆಳೆದು ಬಂದ ಗ್ರಾಮೀಣ ವಿದ್ಯಾರ್ಥಿಗಳು ನೈಜತೆ ಹಾಗೂ ವಿಶೇಷ ಕೌಶಲಗಳನ್ನು ಹೊಂದಿರುವ ಪ್ರತಿಭಾನ್ವಿತರಾಗಿದ್ದು, ಅವರಲ್ಲಿನ ಈ ಗುಣಗಳನ್ನು ಪತ್ತೆ ಹಚ್ಚಿ ಸಮಾಜದ ಮುಖ್ಯವಾಹಿನಿಗೆ ಕರೆತರಲು ಇಂತಹ ಕಾರ್ಯಕ್ರಮಗಳು ಸೂಕ್ತ ವೇದಿಕೆಯಾಗಬೇಕು. ಶೈಕ್ಷಣಿಕ ಪಠ್ಯಕ್ರಮಗಳೊಂದಿಗೆ ಇಂತಹ ಪೂರಕ ಕಲೆಗಳು ಸಹ ಭವಿಷ್ಯತ್ತಿನಲ್ಲಿ ವಿದ್ಯಾರ್ಥಿಗಳ ಬದುಕಿಗೆ ಅಡಿಪಾಯವಾಗುವ ಜತೆಗೆ ಸಮಾಜಕ್ಕೆ ಮೌಲ್ಯಧಾರಿತ ಕೊಡುಗೆಗಳಾಗುವಲ್ಲಿ ಇವುಗಳು ಅತ್ಯಂತ ಮಹತ್ವಪೂರ್ಣ ಪಾತ್ರವಹಿಸಲಿದೆ. ಇದರೊಂದಿಗೆ ನಗರ ಪ್ರದೇಶದ ಬೃಹತ್ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಮಾನಾಗಿ ಗ್ರಾಮೀಣ ಭಾಗದ ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಬಲ ಪೈಪೋಟಿ ಒಡ್ಡುತ್ತಿದ್ದು, ಅವರ ಜ್ಞಾನಾರ್ಜನೆಯನ್ನು ಪ್ರೋತ್ಸಾಹಿಸುವ ಜತೆಗೆ ಪಾಲಕರಲ್ಲಿ ನಂಬಿಕೆ ತರುವ ಕೆಲಸವಾಗಬೇಕು ಎಂದು ತಿಳಿಸಿದರು.
ರಿವರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಆದರ್ಶ್ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಕ್ಷೇತ್ರದ ಸರ್ಕಾರಿ ಶಾಲೆಗಳು, ಅನುದಾನಿತ ಖಾಸಗಿ ಸೇರಿದಂತೆ ಸುಮಾರು 171 ಶಾಲೆಗಳಿಂದ ಕ್ಲಸ್ಟರ್ ಮಟ್ಟದಲ್ಲಿ ಆಯ್ಕೆಗೊಂಡು ಆಗಮಿಸಿದ್ದ ವಿದ್ಯಾರ್ಥಿಗಳು ತಾಲೂಕು ಹಂತದ ಕಾರ್ಯಕ್ರಮದಲ್ಲಿ ಉತ್ತಮ ಪ್ರಕ್ರಿಯೆ ಅನಾವರಣಗೊಳಿಸಿರುವುದು ಸಂತಸ ತರಿಸಿದ್ದು, ಇದು ಅವರಲ್ಲಿನ ಮುಂದಿನ ಯಶಸ್ಸಿಗೆ ದಿಕ್ಸೂಚಿಯಾಗಿ ಹೊರಹೊಮ್ಮಲಿ ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನೃತ್ಯ, ಪ್ರಬಂಧ, ಆಶುಭಾಷಣ, ಛದ್ಮವೇಷ ಸ್ಪರ್ಧೆ, ಕ್ಲೇ ಸೇರಿದಂತೆ ಹಲವು ರೀತಿಯ ಕಲಾ ಪ್ರದರ್ಶನಗಳನ್ನು ನೀಡಿದ ವಿದ್ಯಾರ್ಥಿಗಳು ನಲಿದು ತಮ್ಮೊಳಗಿನ ಸಂತಸ ವ್ಯಕ್ತಪಡಿಸಿದರು.
ಪುರಸಭಾ ಅಧ್ಯಕ್ಷ ಎಂ.ಎಲ್.ದಿನೇಶ್, ರಿವರ್ ವ್ಯಾಲಿ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಪಿ.ನಮ್ರತಾ, ಕಸಾಪ ತಾಲೂಕು ಅಧ್ಯಕ್ಷ ಸಿದ್ದಲಿಂಗು, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಜೆ.ಶ್ರೀನಿವಾಸ್, ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಬಿ.ವಿ.ನಂದೀಶ್, ಕ್ಷೇತ್ರ ಶಿಕ್ಷಣ ಸಂಯೋಜಕಿ ಬಿ.ಕೆ.ಪ್ರತಿಮಾ, ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಶಿವಕುಮಾರ್ ಸೇರಿದಂತೆ ಇತರರು ಈ ವೇಳೆ ಉಪಸ್ಥಿತರಿದ್ದರು.