ಮಂಡ್ಯದಲ್ಲಿ ಆಯೋಜಿಸಿದ್ದ ಕಾಲಭೈರವೇಶ್ವರಸ್ವಾಮಿ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮವನ್ನು ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. 
ಮಂಡ್ಯ

ಆದಿಚುಂಚನಗಿರಿ ಮಠ ಆಲದ ಮರದಂತೆ: ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಬಣ್ಣನೆ

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಕಾಲಭೈರವೇಶ್ವರಸ್ವಾಮಿ ದೇವಸ್ಥಾನ ಲೋಕಾರ್ಪಣೆ
  • ಸಹಸ್ರಾರೂ ಭಕ್ತರು, ಜನಪ್ರತಿನಿಧಿಗಳು ಭಾಗಿ
ಮಂಡ್ಯ: ಆದಿಚುಂಚನಗಿರಿ ಮಠದ ಅರಳಿ ಹಾಗೂ ಆಲದ ಮರದ ವೃಕ್ಷದಂತೆ ವಿಶ್ವದೆಲ್ಲೆಡೆ ತನ್ನ ಕಾರ್ಯವ್ಯಾಪ್ತಿಯನ್ನು ಪಸರಿಸಿದೆ. ಇದಕ್ಕೆ ಭೈರವೈಕ್ಯ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ದೂರದೃಷ್ಠಿ ಕಾರಣ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅಭಿಪ್ರಾಯಿಸಿದರು.
ನಗರದ ಬಂದೀಗೌಡ ಬಡಾವಣೆಯಲ್ಲಿ ಆದಿಚುಂಚನಗಿರಿ ಮಠದಿಂದ ನೂತನವಾಗಿ ನಿರ್ಮಾಣ ಮಾಡಿರುವ ಕಾಲಭೈರವೇಶ್ವರಸ್ವಾಮಿ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಭಾರತೀಯ ಧಾರ್ಮಿಕ ಸಂಸ್ಕೃತಿಯ ಬೀಜವನ್ನು ಜನಸಾಮಾನ್ಯರ ಮನದಲ್ಲಿ ಬಿತ್ತಲು ಶ್ರಮಿಸಿದ ಭೈರವೈಕ್ಯ ಬಾಲಗಂಗಾಧರರ ಜತೆ ಶ್ರಮಿಸಿದ ಪುರುಷೋತ್ತಮಾನಂದನಾಥ ಶ್ರೀಗಳ ಸೇವೆಯೂ ಸ್ಮರಣೀಯ ಎಂದು ಪ್ರಶಂಶಿಸಿದರು.
ಆಧ್ಯಾತ್ಮಿಕ ಕ್ಷೇತ್ರದ ಉನ್ನತಿಯ ಜತೆ ಅನ್ನ, ಅಕ್ಷರದ ಅರಿವು ಮೂಡಿಸಲು ಬಾಲಗಂಗಾಧರನಾಥ ಶ್ರೀಗಳು ದೂರದೃಷ್ಠಿ ಹೊಂದಿದ ಫಲವಾಗಿ ನನ್ನಂತಹ ಸಹಸ್ರಾರು ಜನ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಯಿತು. ಇಲ್ಲದಿದ್ದರೆ ಹಲವರ ಬದುಕು ಬೀದಿಪಾಲಾಗುತ್ತಿತ್ತು. ಹೆಮ್ಮರವಾಗಿ ಬೆಳೆದುನಿಂತಿರುವ ಮಠದ ಫಲ ಭಕ್ತರಿಗೆ ಮತ್ತಷ್ಟು ವಿಸ್ತೃತವಾಗಿ ದೊರೆಯಬೇಕೆಂಬ ಡಾ.ನಿರ್ಮಲಾನಂದನಾಥ ಶ್ರೀಗಳ ಅಭಿಲಾಷೆಯಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಉನ್ನತಿಗೆ ಪ್ರೇರೇಪಿಸುತ್ತಿರುವ ಫಲವಾಗಿ ಇಂದು ಶ್ರೀಮಠವನ್ನು ಅವಲೋಕಿಸುವ ಕೌತುಕತೆ ದೇಶದೆಲ್ಲೆಡೆ ಸಾಗಿದೆ ಎಂದರು.
ಭಕ್ತ ಸಮುದಾಯದ ಭಕ್ತಿ ಪರಂಪರೆ, ಸಾಂಸ್ಕೃತಿಕ ಹಾಗೂ ದೇಶಪ್ರೇಮ ಮತ್ತು ನಮ್ಮ ಆಚಾರ-ವಿಚಾರಗಳ ಪ್ರಜ್ಞೆ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ನಾಥ ಪರಂಪರೆಯನ್ನು ಉನ್ನತೀಕರಿಸುವ ಸದುದ್ದೇಶದಿಂದ ಶ್ರೀಮಠದ ವತಿಯಿಂದ ಕಾಲಭೈರವೇಶ್ವರ ದೇವಾಲಯವನ್ನು ನಿರ್ಮಾಣ ಮಾಡಿರುವುದು ಭಕ್ತ ಸಂಕುಲಕ್ಕೆ ವರದಾನವಾಗಲಿದೆ. ಅರಬರ ಆಕ್ರಮಣ, ಸುಲ್ತಾನರ ಆಳ್ವಿಕೆಯ ಅವಧಿಯಲ್ಲಿ ನಮ್ಮ ಭಾರತೀಯ ಸಂಸ್ಕೃತಿ ಮತ್ತು ದೇವ ಸಂಸ್ಕೃತಿಯನ್ನು ನಾಶ ಮಾಡಲು ಹೊರಟಾಗ ಆದಿಶಂಕರಾಚಾರ್ಯ, ಮಧ್ವಾಚಾರ್ಯರು, ರಾಮಾನುಜಾಚಾರ್ಯರು, ವಿವೇಕಾನಂದರು, ರಾಮಕೃಷ್ಣ ಪರಮಹಂಸ, ಬಾಲಗಂಗಾಧರನಾಥ ಶ್ರೀಗಳು ಸೇರಿ ವಿವಿಧ ಸಾಧು-ಸಂತರು ನಮ್ಮ ಧಾರ್ಮಿಕ ಪರಂಪರೆ ಹಾಗೂ ಸಂಸ್ಕೃತಿಯನ್ನು ಶ್ರೀಮಂತಗೊಳಿಸಲು ಶ್ರಮಿಸಿದ್ದಾರೆ ಎಂದು ಹೇಳಿದರು.
ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ಶ್ರೀಮಠಕ್ಕೆ ಸಾವಿರ ವರ್ಷದ ಇತಿಹಾಸವಿದೆ. ಸಾಕ್ಷಾತ್ ಶಿವನೇ ತಪಸ್ಸು ಮಾಡಿದ ಪವಿತ್ರ ಸ್ಥಳ ಎಂದು ಆದಿಚುಂಚನಗಿರಿಯನ್ನು ದಾಖಲಿಸಲಾಗಿದೆ. ಜಿಲ್ಲೆಯ ರೈತರ ಬಳುವಳಿಯನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಣ ಕ್ಷೇತ್ರವನ್ನು ಹೆಮ್ಮರವಾಗಿ ಬೆಳೆಸಲು ಬಾಲಗಂಗಾಧರನಾಥ ಶ್ರೀಗಳು ಹಲವು ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿದ್ದಾರೆ. ಪರಿಸರ ಕಾಳಜಿ, ಗೋಶಾಲೆ ತೆರೆಯುವ ಮೂಲಕ ಸಾಮಾಜಿಕ ಕಾರ‌್ಯಗಳಿಗೂ ಒತ್ತು ನೀಡಲಾಗಿದೆ. ಅದೇ ರೀತಿ ಭಕ್ತರ ಸಹಕಾರದಿಂದ ಮಂಡ್ಯ ನಗರದಲ್ಲಿ ಅತ್ಯುಮ ಆಧ್ಯಾತ್ಮಿಕ ಕೇಂದ್ರವಾಗಿ ಕಾಲಭೈರವೇಶ್ವರ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಓಂಕಾರಾಶ್ರಮದ ಮಧುಸೂಧನಾನಂದಪುರಿ ಸ್ವಾಮೀಜಿ, ನೆಲಮಂಗಲ ಶನಿಮಹಾತ್ಮ ದೇವಾಲಯದ ಹನುಮಂತಪ್ಪಸ್ವಾಮೀಜಿ, ಕಾಗಿನೆಲೆಪೀಠದ ಶಿವಾನಂದಪುರಿಸ್ವಾಮೀಜಿ, ಕಬೀರಾನಂದಾಶ್ರಮದ ಶಿವಲಿಂಗಾನಂದಸ್ವಾಮೀಜಿ, ಅನ್ನದಾನೇಶ್ವರನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಪಿ.ರವಿಕುಮಾರ್ ಗಣಿಗ, ಎಂಎಲ್‌ಸಿ ಕೆ.ವಿವೇಕಾನಂದ, ಮಾಜಿ ಸಚಿವ ಡಿ.ಸಿ. ತಮ್ಮಣ್ಣ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಯುವ ನಾಯಕ ಇಂಡುವಾಳು ಸಚ್ಚಿದಾನಂದ, ಎಸ್‌ಬಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ, ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಇತರರಿದ್ದರು.

ಅಹಂಕಾರ ಹೆಚ್ಚಾದ ದೈವರ ಅವತಾರ
ಆಧ್ಯಾತ್ಮ ಮತ್ತು ಸಂಸ್ಕೃತಿ ಶುದ್ಧವಾದ ನೀರಿದ್ದಂತೆ. ಮೌಲ್ಯಾಧಾರಿತ ವ್ಯಕ್ತಿಗಳು ಸಮಾಜದಲ್ಲಿ ಸದಾ ತಿಳಿಯಾದ ನೀರಿನಂತೆ ಇರಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪ್ರಜ್ಞೆ ಎನ್ನುವುದು ಸೂರ್ಯನಿದ್ದಂತೆ. ಮನಸ್ಸು ಮಲಿನಗೊಂಡಾಗ ಮೋಡಗಳು ಸೂರ್ಯನನ್ನು ಮರೆಮಾಚುವಂತೆ ಪ್ರಜ್ಞೆ ಮರೆಯಾಗಬಹುದು. ಆದರೆ ಶುದ್ಧ ಪ್ರಜ್ಞೆಯೇ ನಮ್ಮ ಸ್ವರೂಪ. ವ್ಯಕ್ತಿಯಲ್ಲಿ ಅಹಂಕಾರ ಹೆಚ್ಚಿದಾಗ ಅದನ್ನು ಅಳಿಯಲು ದೈವದ ಅವತಾರವಾಗುತ್ತದೆ. ಬ್ರಹ್ಮನ ಐದನೇ ತಲೆಗೆ ಅಹಂಕಾರ ಬಂದಾಗ ಅದನ್ನು ನಿಗ್ರಹಿಸಲು ಈಶ್ವರನು ಕಾಲಭೈರವೇಶ್ವರನಾಗಿ ಅವತರಿಸಿದನು ಎಂದು ವಿವರಿಸಿದರು.
ಮಠದ ಯಾವುದೇ ಕಾರ್ಯಕ್ರಮಗಳಿಗೆ ಬರಲು ಇಂತಿಷ್ಟು ಹಣ ಕೊಡಬೇಕು ಎನ್ನುವ ಸಂಪ್ರದಾಯ ಆದಿಚುಂಚನಗಿರಿ ಮಠದಲ್ಲಿಲ್ಲ. ದೇವಸ್ಥಾನ ನಿರ್ಮಾಣದಂತಹ ವಿಶೇಷ ಯೋಜನೆಗಳಿಗೆ ಮಾತ್ರ ಭಕ್ತರು ಸ್ವಯಂ ಪ್ರೇರಣೆಯಿಂದ ಕಾಣಿಕೆ ನೀಡಿದ್ದಾರೆ. ವರ್ಷದಲ್ಲಿ ಕನಿಷ್ಟ ಒಂಬತ್ತು ದಿನ ಆದಿಚುಂಚನಗಿರಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಭೈರವೇಶ್ವರನ ಕೃಪೆಗೆ ಪಾತ್ರರಾಗಬೇಕು ಎಂಬುದು ನಾಥ ಸಂಪ್ರದಾಯದ ಆಶಯವಾಗಿದೆ ಎಂದು ಹೇಳಿದರು.
1200 ವರ್ಷದ ಇತಿಹಾಸವಿರುವ ಆದಿಚುಂಚನಗಿರಿ ಮಹಾಸಂಸ್ಥಾನದ ಅಧಿದೇವತೆ ಕಾಲಭೈರವೇಶ್ವರ ಸ್ವಾಮಿಯ ದೇವಸ್ಥಾನವು ಭಕ್ತರ ಅಭಿಷ್ಠೆಯಂತೆ ಸಿದ್ಧಗೊಂಡಿದೆ. ಮೂರು ದಿನಗಳ ಶಾಸ್ತ್ರೋಕ್ತ ಕಾರ್ಯಕ್ರಮದ ನಂತರ ಮಂಡ್ಯದ ಬಂದೀಗೌಡ ಬಡಾವಣೆಯಲ್ಲಿ ದೇವಾಲಯ ಲೋಕಾರ್ಪಣೆಗೊಂಡಿದೆ. ಭಕ್ತರ ಆಸೆಯಂತೆ ಈ ಸುಂದರ ದೇವಸ್ಥಾನ ನಿರ್ಮಿಸಲು ಪುರುಷೋತ್ತಮಾನಂದನಾಥ ಸ್ವಾಮೀಜಿ ಇಳಿ ವಯಸ್ಸಿನಲ್ಲೂ ಅಪಾರವಾಗಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಪುರುಷೋತ್ತಮಾನಂದನಾಥ ಸ್ವಾಮೀಜಿ ಅವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದು ಪೂರ್ಣಗೊಳ್ಳುವವರೆಗೂ ಹಠ ಬಿಡದೆ ನಿಲ್ಲುತ್ತಾರೆ ಎಂಬುದಕ್ಕೆ ಈ ದೇವಾಲಯದ ನಿರ್ಮಾಣವೇ ಸಾಕ್ಷಿ. ಬೆಂಗಳೂರಿನ ವಿಜಯನಗರದಲ್ಲಿ 25 ವರ್ಷದ ಹಿಂದೆಯೇ ಹೈಟೆಕ್ ಶಾಲೆ ನಿರ್ಮಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಅವರು ಕಾರಣಕರ್ತರಾಗಿದ್ದಾರೆ. ಕೆಲ ತಿಂಗಳ ಹಿಂದೆ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ, ವಿಶ್ರಾಂತಿ ಪಡೆಯದೆ ಈ ದೇವಸ್ಥಾನ ಲೋಕಾರ್ಪಣೆಗಾಗಿ ಶ್ರಮಿಸಿದ್ದಾರೆ. ದೇವಸ್ಥಾನದ ಸಂಕಲ್ಪ ಶಕ್ತಿ ಮತ್ತು ಸ್ವಾಮೀಜಿಯವರ ಛಲಕ್ಕೆ ಇಡೀ ಭಕ್ತ ಸಮೂಹದ ಪರವಾಗಿ ಕೃತಜ್ಞತೆಗಳನ್ನು ಅರ್ಪಿಸುವುದಾಗಿ ಹೇಳಿದರು.