ಕದಬಳ್ಳಿ ಕ್ಷೇತ್ರದಲ್ಲಿರುವ ಹೆಬ್ಬಳದ ಅರಸಮ್ಮ ದೇವಸ್ಥಾನ
- ಮೂರು ಗ್ರಾಮಗಳ ಆರಾಧ್ಯ ದೇವತೆ
- ಆದಿಶಕ್ತಿ ಸ್ವರೂಪಿಣಿ ಸಹೋದರಿಯರಾದ
ಮಳವಳ್ಳಿ: ಮೂರು ಗ್ರಾಮಗಳ ಆರಾಧ್ಯ ದೇವತೆಗಳಾಗಿರುವ ಆದಿಶಕ್ತಿ ಸ್ವರೂಪಿಣಿ ಸಹೋದರಿಯರಾದ ಹೆಬ್ಬಳದ ಅರಸಮ್ಮ ಹಾಗೂ ಬಲಿ ಅರಸಮ್ಮದೇವಿ ನಂಬಿ ಬರುವ ಭಕ್ತರ ಕಷ್ಟಗಳನ್ನು ಪರಿಹರಿಸುವ ಮೂಲಕ ದೈವಿಕ ಶಕ್ತಿ ಮೆರೆದಿದ್ದಾರೆ.
ತಾಲೂಕಿನ ಬಿ.ಜಿ.ಪುರ ಹೋಬಳಿಯ ಕದಬಳ್ಳಿ ಗ್ರಾಮದಲ್ಲಿ ಈ ಪುಣ್ಯ ಕ್ಷೇತ್ರವಿದ್ದು, ಹಲವು ಕಾರಣಗಳಿಗಾಗಿ ಊರಿಗೆ ಊರೇ ಅಳಿದು ಹೋಗಿದ್ದರೂ ಸರ್ಕಾರದ ಕಡತಗಳಲ್ಲಿ ಕಂದಾಯ ಗ್ರಾಮವಾಗಿ ಉಳಿದಿದೆ. ವಾಸ್ತವವಾಗಿ ಈ ಗ್ರಾಮದಲ್ಲಿ ಯಾವುದೇ ಕುಟುಂಬಗಳಿಲ್ಲ. ಇಲ್ಲಿ ಸಾವಿರಾರು ಕುಟುಂಬಗಳು ನೆಲೆಸಿದ್ದರು, ಹೆಬ್ಬಳದ ಅರಸಮ್ಮ, ಬಲಿ ಅರಸಮ್ಮ ದೇವಸ್ಥಾನಗಳು ಸೇರಿದಂತೆ ಹಲವು ಗುಡಿಗಳಿತ್ತು. ಸುತ್ತಲಿನ ಸಾವಿರಾರು ಎಕರೆ ಪ್ರದೇಶದಲ್ಲಿರುವ ನೂರಾರು ವೀರಗಲ್ಲುಗಳು, ಹಳೆಗನ್ನಡದ ಲಿಪಿಗಳಲ್ಲಿ ಕೆತ್ತನೆ ಇರುವ ಕಲ್ಲುಗಳು, ದೇವರ ವಿಗ್ರಹ ಮತ್ತು ಕಲ್ಯಾಣಿಗಳು ಕಾಣಸಿಗುತ್ತವೆ. ಕದಬಳ್ಳಿ ಎಂದು ಕರೆಯಲ್ಪಡುತ್ತಿರುವ ಈ ಗ್ರಾಮಕ್ಕೆ 14ನೇ ಶತಮಾನದಷ್ಟು ಇತಿಹಾಸವಿದೆ ಎಂಬುದಕ್ಕೆ ಇಲ್ಲಿನ ಪ್ರದೇಶದಲ್ಲಿ ಕಾಣಸಿಗುವ ಪುರಾತನ ಕಾಲದ ಕುರುಹುಗಳು ಸಾಕ್ಷೀಕರಿಸುತ್ತವೆ.
ಕದಬಳ್ಳಿ ಗ್ರಾಮದಲ್ಲಿ ಪಾಳೆಗಾರರು, ಜಮೀನ್ದಾರರು, ಕೃಷಿಕರು, ಚಿನ್ನ-ಬೆಳ್ಳಿ ವ್ಯಾಪಾರಿಗಳು, ವರ್ತಕರು ಜೀವನವನ್ನು ಸಾಗಿಸುತ್ತಿದ್ದರು. ಎರಡು ಕಿಲೋಮೀಟರ್ ಸುತ್ತಳತೆಯಲ್ಲಿ ಊರಿನ ವಿಸ್ತರಣೆಯಿದ್ದು, ಪ್ರಮುಖ ಪಟ್ಟಣದಂತಿದ್ದ ಈ ಗ್ರಾಮದಲ್ಲಿ ದೈವಭಕ್ತರು ಹೆಚ್ಚಿನ ಪ್ರಮಾಣದಲ್ಲಿ ನೆಲೆಸಿದ್ದರಿಂದ ಗ್ರಾಮದ ಉದ್ದಗಲಕ್ಕೂ ದೇವರ ಗುಡಿಗಳು, ಕೊಳಗಳಿವೆ. ಇಂದಿಗೂ ದೇವರ ಪೂಜಿಸುವವರ ಕುಟುಂಬದ ಹೆಸರಿನಲ್ಲೇ ಭೂಕಂದಾಯ ದಾಖಲೆಗಳಿವೆ.
ಹೆಬ್ಬಳದ ಅರಸಮ್ಮ ಹಾಗೂ ಬಲಿ ಅರಸಮ್ಮ ಗ್ರಾಮದ ರಕ್ಷಣೆಗಾಗಿ ನೆಲೆಸಿದ್ದು, ಜನರು ಪ್ರತಿ ವರ್ಷ ಜಾತ್ರೆ, ಕೊಂಡೋತ್ಸವ ಮಾಡುತ್ತಿದ್ದರು. ಟಿಪ್ಪು ಸುಲ್ತಾನ್ ಗ್ರಾಮದ ಮೇಲೆ ದಾಳಿ ನಡೆಸಲು ಬಂದಾಗ ಈತನ ಸೇನೆ ಊರು ಪ್ರವೇಶಿಸಲಾಗಲಿಲ್ಲ. ಹಾಗಾಗಿ ಗ್ರಾಮ ದೇವತೆಯರ ಪವಾಡವನ್ನು ಅರಿತು ದೇವತೆಗೆ ಚಿನ್ನದ ಪದಕವನ್ನು ಒಪ್ಪಿಸಿ ತೆರಳಿದ್ದರಂತೆ. ಇಂದಿಗೂ ಹಬ್ಬದ ದಿನಗಳಲ್ಲಿ ಟಿಪ್ಪು ನೀಡಿದ್ದ ಪದಕವನ್ನು ಕೊರಳಿಗೆ ಹಾಕಿಕೊಂಡು ದೈವಾರಾಧಕ ದೇವಿಯ ಪೂಜಾ ಕಾರ್ಯ ನೆರವೇರಿಸುತ್ತಾರೆ.
ಸಾಂಕ್ರಾಮಿಕ ಕಾಯಿಲೆಗಳಿಂದ ಪಾರಾಗಲು ಊರು ತೊರೆದು ಕುಟುಂಬಗಳು ಪ್ರತ್ಯೇಕವಾಗಿ ವಾಸಿಸತೊಡಗಿದವು. ಹೀಗಾಗಿ ಕದಬಳ್ಳಿ ಜನರು ಮೂರು ಗುಂಪಾಗಿ ಚದುರಿ ಗುಳೆ ಹೋಗಿ ಗ್ರಾಮದ ಹೊರವಲಯದಲ್ಲಿ ಬದುಕು ಕಟ್ಟಿಕೊಂಡವರು ಹಿಂದಿರುಗಿ ಗ್ರಾಮಕ್ಕೆ ಬರಲಿಲ್ಲ. ಪ್ರಸ್ತುತ ಸುತ್ತಲಿನ ಎರಡು ಕಿಮೀ ವ್ಯಾಪ್ತಿಯಲ್ಲಿರುವ ದೊಡ್ಡಬೂಹಳ್ಳಿ, ಕ್ಯಾತನಹಳ್ಳಿ, ಕಲ್ಯಾಣಿ ಕೊಪ್ಪಲು ಗ್ರಾಮಗಳಲ್ಲಿ ನೆಲೆಸಿರುವವರೇ ಮೂಲದಲ್ಲಿ ಕದಬಳ್ಳಿ ಗ್ರಾಮಸ್ಥರು ಎಂಬುದು ಇಲ್ಲಿನ ಹಿರಿಯರು ಹಾಗೂ ಇತಿಹಾಸ ತಜ್ಞರ ಅಭಿಮತ.
ಗ್ರಾಮ ದೇವತೆಯರನ್ನು ಇಂದಿಗೂ ಶ್ರದ್ಧಾಭಕ್ತಿಯಿಂದ ಪೂಜಿಸುವುದರ ಜತೆಗೆ ಪ್ರತಿವರ್ಷ ಹಬ್ಬವನ್ನು 14 ದಿನ 3 ಗ್ರಾಮಗಳ ಎಲ್ಲ ಕೋಮಿನವರು ಒಗ್ಗೂಡಿ ಆಚರಿಸುತ್ತಾರೆ. ಪ್ರತಿ ಮಂಗಳವಾರ ವಿಶೇಷ ಪೂಜೆ ನೆರವೇರಲಿದ್ದು, ಈ ದಿನಗಳಲ್ಲಿ ಹರಕೆ ಹೊತ್ತ ಭಕ್ತರು ಬಾಯಿ ಬೀಗ ಹಾಕಿಸಿಕೊಳ್ಳುವುದು, ದೇವಿಯರಿಗೆ ಸೀರೆ, ಮಡಿಲಕ್ಕಿ ಕೊಡುವುದು ಮತ್ತು ಅನ್ನ ಸಂತರ್ಪಣೆ ಮಾಡಿಸಿ ದೇವತೆಯ ಹರಕೆ ತೀರಿಸುವ ಕಾರ್ಯಗಳು ನಡೆಯುತ್ತವೆ.
ತಾಲೂಕಿನ ದೊಡ್ಡಬೂಹಳ್ಳಿ, ಕಲ್ಯಾಣಿಕೊಪ್ಪಲು, ಕ್ಯಾತನಹಳ್ಳಿಯಲ್ಲಿ 14 ದಿನ ಆಚರಿಸಲ್ಪಡುವ ಹಬ್ಬಕ್ಕೆ ಫೆ.22ರಂದು ಚಾಲನೆ ದೊರೆತಿದೆ. 22 ರಂದು ಮೇಕೆ ಉಯ್ಯುವ ಮೂಲಕ ಪೂಜೆ ನೆರವೇರಿಸಲಾಗಿದ್ದು, ಡಂಗೂರು ಸಾರಿಸಿದ ದಿನದಿಂದ 10 ದಿನ ಒಗ್ಗರಣೆ ಹಾಕದೆ ಅಡುಗೆ ತಯಾರಿ ಸೇವಿಸಬೇಕು. ಫೆ.24ರಂದು ಬಲಿಯಮ್ಮ ಹಾಗೂ ಹೆಬ್ಬಳದ ಅರಸಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಂಡಿ ಉತ್ಸವಕ್ಕೆ ಚಲನೆ ಸಿಗಲಿದೆ. ಮಾ. 1ರಂದು ಗೊಡ್ಡುಕುಯ್ಯುವ ಸಂಪ್ರದಾಯ, 2ರಂದು ಹೂವಿನ ಕುಕ್ಕೆ ಉತ್ಸವ, 3ರಂದು ಹರಕೆ ಹೊತ್ತ ಭಕ್ತರಿಂದ ಹರಕೆ ತೀರಿಸುವ ಜಾತ್ರೆ, 4ರಂದು ಕಲ್ಯಾಣಿಕೊಪ್ಪಲು, 5ರಂದು ದೊಡ್ಡಬೂಹಳ್ಳಿ, 6ರಂದು ಕ್ಯಾತನಹಳ್ಳಿ ಗ್ರಾಮದಲ್ಲಿ ಸರದಿಯಂತೆ ದೇವರ ಕರಗ ಉತ್ಸವ ಮೆರವಣಿಗೆ ಮಡೆಎಯಲಿದೆ. ಮಾ.8ರಂದು ಕದಬಳ್ಳಿ ಬಸವೇಶ್ವರಕೊಂಡೋತ್ಸವ, 10ರಂದು ಮಾದಪಟ್ಟಣ ಮಾರಮ್ಮನ ದೇವಸ್ಥಾನಕ್ಕೆ ತಂಪು ಸಲ್ಲಿಸುವ ಮೂಲಕ ಹಬ್ಬಕ್ಕೆ ತೆರೆ ಬೀಳಲಿದೆ.
ತೆರಳುವ ಮಾರ್ಗ: ಕದಬಳ್ಳಿ ಹೆಬ್ಬಳದ ಅರಸಮ್ಮ ಹಾಗೂ ಬಲಿ ಅರಸಮ್ಮ ಕ್ಷೇತ್ರಕ್ಕೆ ತೆರಳಲು ಮಳವಳ್ಳಿ ಪಟ್ಟಣದ ಪೂರಿಗಾಲಿ ಮುಖ್ಯರಸ್ತೆಯಲ್ಲಿ 7 ಕಿಮೀ ಸಾಗಿದರೆ ರಾವಣಿ ಗ್ರಾಮದ ಬಳಿ ಎಡಕ್ಕೆ ತಿರುವು ಪಡೆದು 2 ಕಿಮೀ ದೂರ ಕ್ರಮಿಸಿದರೆ ಕದಬಳ್ಳಿ ಶಕ್ತಿ ದೇವತೆಯರ ಕ್ಷೇತ್ರ ಸಿಗಲಿದೆ.
ಕದಬಳ್ಳಿ ಕ್ಷೇತ್ರದಲ್ಲಿ ಹೆಬ್ಬಳದ ಅರಸಮ್ಮ ಸೇರಿದಂತೆ ಶಕ್ತಿ ದೇವತೆಯರು ನೆಲೆಸಿದ್ದಾರೆ. ಭಕ್ತಿಯಿಂದ ಹರಕೆ ಕಟ್ಟಿಕೊಂಡರೆ ಬೇಡಿಕೆ ಈಡೇರಲಿದೆ. ಹರಕೆ ಫಲಪ್ರದವಾದರೆ ಅಂತಹ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಹರಕೆ ತೀರಿಸಿ ಭಕ್ತಿ ಸಮರ್ಪಿಸುತ್ತಾರೆ. ನಮ್ಮ ಪೂರ್ವಜರ ಕಾಲದಿಂದಲೂ ನಮ್ಮ ಕುಟುಂಬದವರು ಹೆಬ್ಬಳದ ಅರಸಮ್ಮ ದೇವಿಯ ಪೂಜೆ ಮಾಡುತ್ತಾ ಬರುತ್ತಿದ್ದಾರೆ.
ಅಶ್ವಥ್‌ಗೌಡ ಅರ್ಚಕ, ಹೆಬ್ಬಳದ ಅರಸಮ್ಮ ದೇವಸ್ಥಾನ
ಕದಬಳ್ಳಿಯಲ್ಲಿ ನೆಲೆಸಿರುವ ಹೆಬ್ಬಳದ ಅರಸಮ್ಮ ಹಾಗೂ ಬಲಿ ಅರಸಮ್ಮ ದೇವಿಯರು ಹಲವಾರ ಪವಾಡಗಳನ್ನು ನಡೆಸುವ ಮೂಲಕ ಜನರ ಸಂಕಷ್ಟಗಳನ್ನು ದೂರ ಮಾಡುತ್ತಿದ್ದಾರೆ. ಕದಬಳ್ಳಿ ಕ್ಷೇತ್ರವು ಶಿವಶರಣರು ಹಾಗೂ ದೈವಾಂಶ ಸಂಭೂತರು ನೆಲೆನಿಂತು ಸಂಚರಿಸಿರುವ ಪುಣ್ಯ ಭೂಮಿಯಾಗಿದ್ದು, ಈ ಪುಣ್ಯ ಕ್ಷೇತ್ರದ ಮಹಿಮೆಯನ್ನು ನಮ್ಮ ಪೂರ್ವಜರಿಂದ ತಿಳಿದುಕೊಂಡಿರುವುದರಿಂದ ಅಪಾರ ನಂಬಿಕೆ ಹಾಗೂ ಭಕ್ತಿ ನಮಗಿದೆ.
ಮಹೇಶ್ ದೊಡ್ಡಬೂಹಳ್ಳಿ ಗ್ರಾಮಸ್ಥ
ಶಕ್ತಿ ದೇವತೆಗಳು ನೆಲೆಸಿರುವ ಹಿನ್ನೆಲೆಯಲ್ಲಿ ಕದಬಳ್ಳಿಯಲ್ಲಿ ದೇವರ ನಾಡಗಿದೆ. ಸಾವಿರಾರು ಕುಟುಂಬಗಳು ಇಲ್ಲಿ ನೆಲೆಸಿ ಸಮೃದ್ಧಿ ಜೀವನ ಸಾಗಿಸಿದ್ದರು ಎಂಬುದಕ್ಕೆ ಹಲವು ಕುರುಹುಗಳು ದೊರೆಯುತ್ತವೆ. ಇಂದಿಗೂ ಹಳೆಗನ್ನಡ ಲಿಪಿಯ ಶಿಲೆ, ವೀರಗಲ್ಲುಗಳು, ದೇವರ ವಿಗ್ರಹಗಳು ಮತ್ತು ಹಲವಾರು ಪ್ರಾಚೀನ ವಸ್ತುಗಳು ಕಂಡು ಬರುತ್ತವೆ. ಪ್ರಸ್ತುತ ನಮ್ಮದೊಂದು ಕುಟುಂಬ ಮೂಲ ಗ್ರಾಮವಿದ್ದ ಸ್ಥಳದಲ್ಲಿ ಮನೆ ಕಟ್ಟಿಕೊಂಡು ನೆಲೆಸಿದೆ.
ಶಿವಶಂಕರ್ ಗ್ರಾಮಸ್ಥ, ಕಲ್ಯಾಣಿ ಕೊಪ್ಪಲು