ಮಂಡ್ಯದಲ್ಲಿ ಕವಿ ಕೆ.ಪಿ.ಮೃತ್ಯುಂಜಯ ಅವರ ಜಾಯ್ ಪದ್ಯಗಳು ಪುಸ್ತಕವನ್ನು ಸಚಿವ ಎನ್.ಚಲುವರಾಯಸ್ವಾಮಿ ಬಿಡುಗಡೆ ಮಾಡಿದರು.
- ನಗರದಲ್ಲಿ ಪುಸ್ತಕ ಲೋಕಾರ್ಪಣೆ ಸಮಾರಂಭ
- ಸ್ನೇಹ ಬಳಗದ ಸಹಯೋಗದಲ್ಲಿ ಆಯೋಜನೆ
ಮಂಡ್ಯ: ಸಾಹಿತಿ ಹಾಗೂ ಉಪನ್ಯಾಸಕ ಕೆ.ಪಿ.ಮೃತ್ಯುಂಜಯ ಅವರು ಸರಳ ಮತ್ತು ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಸ್ನೇಹ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ಕವಿ ಕೆ.ಪಿ.ಮೃತ್ಯುಂಜಯ ಅವರ ಜಾಯ್ ಪದ್ಯಗಳು ಪುಸ್ತಕ ಬಿಡುಗಡೆ ಮತ್ತು ಗೌರವಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ತುಮಕೂರಿನಿಂದ ಮಂಡ್ಯದಲ್ಲಿ ಬಿ.ಇ. ವ್ಯಾಸಂಗ ಮಾಡಲು ಬಂದ ಮೃತ್ಯುಂಜಯ ಅವರು ಅನಿರೀಕ್ಷಿತವಾಗಿ ಪತ್ರಿಕಾರಂಗಕ್ಕೆ ಬಂದರು. ಅಲ್ಲಿ ಸುಮಾರು ಹದಿನೈದು ವರ್ಷ ಸಮಾಜ ತಿದ್ದುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಪತ್ರಿಕಾರಂಗದ ಜತೆಗೆ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡ ಅವರು, ಹಲವು ಕವನ ಸಂಕಲನಗಳನ್ನು ಬರೆದಿದ್ದು, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ 11 ಪ್ರಶಸ್ತಿ ಗಳಿಸಿದ್ದಾರೆ. ಅವರ ‘ದೊಡ್ಡಮ್ಮ ದೇವತೆಗೆ ಕಣ್ಣು ಧರಿಸಿದ ಹೊತ್ತು’ ಎಂಬ ಕವಿತೆಯು ಮೈಸೂರು ವಿಶ್ವವಿದ್ಯಾಲಯದ ಪದವಿ ಪಠ್ಯ ಪುಸ್ತಕದಲ್ಲಿ ಸೇರ್ಪಡೆಗೊಂಡಿದೆ ಎಂದು ತಿಳಿಸಿದರು.
‘ಜಾಯ್’ ಪುಸ್ತಕ ಕುರಿತು ವಿಮರ್ಶೆ ಮಾಡಿದ ಅಧ್ಯಾಪಕ ಹಾಗೂ ಬರಹಗಾರ ಪ್ರಸನ್ನಕುಮಾರ್ ಕೆರಗೋಡು, ಕೆ.ಪಿ.ಮೃತ್ಯುಂಜಯ ಅವರು ಒಂದು ಶ್ವಾನದ ಬಗ್ಗೆ ಪ್ರಮುಖವಾಗಿ ಒಂದು ಜೀವಿಯ ಬಗ್ಗೆ ಬರೆದಿದ್ದಾರೆ. ಪತ್ರಿಕಾರಂಗದಲ್ಲಿ ನನ್ನಂತಹ ಹಲವಾರು ಯುವಕರಿಗೆ ಅಕ್ಷರ ದೀಕ್ಷೆಯನ್ನು ಕೊಟ್ಟು ಬೆಳೆಸಿದ್ದಾರೆ. ಮನುಷ್ಯತ್ವ ಮತ್ತು ಮಾನವೀಯತೆ ನೆಲೆಯೊಳಗೆ ಮೃತ್ಯುಂಜಯ ಅವರು ಕೆಲಸ ಮಾಡುತ್ತಿದ್ದರು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕವಿ ಕೆ.ಪಿ.ಮೃತ್ಯುಂಜಯ ಮಾತನಾಡಿ, ಎನ್.ಚಲುವರಾಯಸ್ವಾಮಿ ಅವರು ಸಚಿವರಾದಾಗ ಮಂಡ್ಯ ಜಿಲ್ಲೆಯು ಸರ್ವಾಂಗೀಣ ಅಭಿವೃದ್ಧಿ ಕಂಡಿದೆ. ಮೆಡಿಕಲ್ ಕಾಲೇಜು ಸ್ಥಾಪನೆ, ಮಂಡ್ಯ ಸೇರಿದಂತೆ ಎಲ್ಲ ತಾಲೂಕುಗಳ ಸಾರಿಗೆ ಬಸ್ ನಿಲ್ದಾಣಗಳನ್ನು ನವೀಕರಿಸಿದ್ದಾರೆ. ಪ್ರಸ್ತುತ ಮಂಡ್ಯ ಕೃಷಿ ವಿಶ್ವವಿದ್ಯಾಲಯವನ್ನು ತರುವ ಮೂಲಕ ರೈತರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ. ಇವರ ಅವಧಿಯಲ್ಲಿ ಜಿಲ್ಲೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಕಾಣಲಿ ಎಂದು ಆಶಿಸಿದರು.
ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶುಭದಾಯಿನಿ, ಹಿರಿಯ ಸಹಕಾರಿ ಕೌಡ್ಲೆ ಚನ್ನಪ್ಪ, ಸ್ನೇಹ ಬಳಗದ ಸಿ.ಎಂ.ದ್ಯಾವಪ್ಪ, ಎಲ್.ಸಂದೇಶ್, ಮಂಗಲ ಎಂ.ಯೋಗೇಶ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮೇ 31ರಂದು ಉಪನ್ಯಾಸಕ ವೃತ್ತಿಯಿಂದ ನಿವೃತ್ತರಾಗುತ್ತಿರುವ ಕೆ.ಪಿ. ಮೃತ್ಯುಂಜಯ ಅವರನ್ನು ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಸ್ನೇಹ ಬಳಗದ ಪದಾಧಿಕಾರಿಗಳು ಸನ್ಮಾನಿಸಿದರು.