ಮದ್ದೂರು ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ರಕ್ತದಾನ ಶಿಬಿರಕ್ಕೆ ಶಾಸಕ ಕೆ.ಎಂ.ಉದಯ ಚಾಲನೆ ನೀಡಿದರು. ಲೋಕೇಶ್, ಕೆ.ಪ್ರವೀಣ್, ಶಿವಕುಮಾರ್‌ಬಿರಾದರ, ಧನಂಜಯ, ರಾಧಿಕಾ, ಶಶಿಗೌಡ ಇದ್ದರು. 
ಮಂಡ್ಯ

ರಕ್ತದಾನ ಶಿಬಿರ ಯಶಸ್ಸಿಗೆ ಕೈಜೋಡಿಸಿ

ಮದ್ದೂರು:

ರಕ್ತದಾನದಿಂದ ಸಂಕಷ್ಟದಲ್ಲಿರುವ ವ್ಯಕ್ತಿಗಳ ಜೀವ ಉಳಿಸಬಹುದಾಗಿದ್ದು ಇದನ್ನರಿತು ಪ್ರತಿಯೊಬ್ಬರೂ ರಕ್ತದಾನ ಪ್ರಕ್ರಿಯೆಯಲ್ಲಿ ಸ್ವಯಂ ಪ್ರೇರಿತವಾಗಿ ಪಾಲ್ಗೊಂಡು ಶಿಬಿರದ ಯಶಸ್ವಿಗೆ ಕೈಜೋಡಿಸುವಂತೆ ಶಾಸಕ ಕೆ.ಎಂ.ಉದಯ್ ತಿಳಿಸಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರೋಟರಿ ಸಂಸ್ಥೆ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಕ್ತದಾನ ಮಹಾದಾನ ಎಂಬಂತೆ ಹದಿನೆಂಟು ತುಂಬಿದ ವಯೋಮಾನದ ಯುವಕ-ಯುವತಿಯರು ರಕ್ತದಾನ ಮಾಡಬಹುದಾಗಿದ್ದು ಪ್ರತಿಯೊಬ್ಬರೂ ರಕ್ತದಾನ ಮಾಡಿದರೆ ತುರ್ತು ಸಂದರ್ಭಗಳಲ್ಲಿರುವ ವ್ಯಕ್ತಿಗಳಿಗೆ ಅನುಕೂಲವಾಗುವ ಮೂಲಕ ಪ್ರಾಣ ಉಳಿಸಬಹುದಾಗಿದ್ದು ಇದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ರಕ್ತದ ಕೊರತೆ ಕಂಡುಬರುತ್ತಿದ್ದು ಕೆಲ ಅಪಘಾತ ಸಂದರ್ಭಗಳಲ್ಲಿ ರಕ್ತ ಸಿಗದೆ ಮೃತಪಡುತ್ತಿರುವ ಉದಾಹರಣೆಗಳು ನಮ್ಮ ಕಣ್ಮುಂದೆ ಕಾಣಸಿಗುತ್ತಿದ್ದು ಇದನ್ನರಿತು ಸಂಘ ಸಂಸ್ಥೆಗಳು ಆಯೋಜಿಸುತ್ತಿರುವ ಶಿಬಿರಗಳಲ್ಲಿ ಪಾಲ್ಗೊಂಡು ರಕ್ತದಾನ ಮಾಡುವುದರ ಮೂಲಕ ಇತರರ ಜೀವ ಉಳಿಸಲು ನೆರವಾಗಬೇಕೆಂದು ಹೇಳಿದರು.
ರೋಟರಿ ಸಂಸ್ಥೆಯು ತಾಲೂಕಿನಾದ್ಯಂತ ಹಲವಾರು ಸಮಾಜಮುಖಿ ಸೇವಾ ಕಾರ್ಯಗಳೊಟ್ಟಿಗೆ ನೇತ್ರ ತಪಾಸಣೆ, ರಕ್ತದಾನ, ದಂತ ತಪಾಸಣೆ ಮತ್ತು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಹಲವಾರು ಸೌಲಭ್ಯ ಒದಗಿಸುತ್ತಿರುವ ಸಂಸ್ಥೆಯ ಕಾರ್ಯವನ್ನು ಶ್ಲಾಸಿದರು.
ರಕ್ತದಾನ ಶಿಬಿರವು ಜೀವಗಳನ್ನು ಉಳಿಸುವ ಮಹತ್ವದ ಸಮಾಜಿಕ ಕಾರ್ಯಕ್ರಮವಾಗಿದ್ದು ಜತೆಗೆ ರಕ್ತದ ಕೊರತೆಯನ್ನು ನೀಗಿಸಲು ಮತ್ತು ತುರ್ತು ಸಂಧರ್ಭಗಳಲ್ಲಿ ರಕ್ತ ಲಭ್ಯವಾಗುವಂತೆ ಮಾಡಲು ಸಹಕಾರಿಯಾಗಲಿದ್ದು ಸುಮಾರು 18 ರಿಂದ 65 ವರ್ಷದೊಳಗಿನವರು ರಕ್ತದಾನ ಮಾಡಬಹುದಾಗಿದೆ ಎಂದರು.
ವಿವಿಧ ಗ್ರಾಮಗಳಿಂದ ಆಗಮಿಸಿದ ನೂರಾರು ಸಂಖ್ಯೆಯ ಯುವಕರು, ಶಿಕ್ಷಕರು, ಕಾಲೇಜು ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು. ಶಿಬಿರದಲ್ಲಿ ಸುಮಾರು 100 ಯೂನಿಟ್ ರಕ್ತ ಸಂಗ್ರಹವಾಯಿತು.
ತಹಸೀಲ್ದಾರ್ ಶಿವಕುಮಾರ್ ಬಿರಾದರ, ತಾಪಂ ಇಓ ರಾಮಲಿಂಗಯ್ಯ, ಬಿಇಓ ಧನಂಜಯ, ನಗರಸಭೆ ಪೌರಯುಕ್ತೆ ರಾಧಿಕಾ, ರೋಟರಿ ಅಧ್ಯಕ್ಷ ಲೋಕೇಶ್, ಕಾರ್ಯದರ್ಶಿ ಕೆ.ಪ್ರವೀಣ್, ಪದಾಧಿಕಾರಿಗಳಾದ ಮೋಹನ್, ತಮ್ಮೇಗೌಡ, ಎಂ.ಸಿ.ಶಶಿಗೌಡ, ಪ್ರಕಾಶ್ ಇತರರಿದ್ದರು.