ಕಿಕ್ಕೇರಿ ಆರಕ್ಷಕ ಠಾಣೆಯಲ್ಲಿ ಕಿಕ್ಕೇರಮ್ಮ ಜಾತ್ರೋತ್ಸವ ಅಂಗವಾಗಿ ಪೂರ್ವಭಾವಿ ಸಭೆಯಲ್ಲಿ ಇನ್‌ಸ್ಪೆಕ್ಟರ್ ಜಯರಾಂ ಮಾತನಾಡಿದರು.ಲಕ್ಷ್ಮೀಪುರ ಗ್ರಾಮದ ಕೆಂಚಮ್ಮ, ಮಾರಮ್ಮ, ದೊಡ್ಡಹಟ್ಟಿ ವಠಾರದ ಮುಖಂಡರು, ಕಿಕ್ಕೇರಿ ಹಾಗೂ ಸುತ್ತಮುತ್ತಲ ಗ್ರಾಮಗಳ ಗಣ್ಯರು ಸಭೆಯಲ್ಲಿ ಹಾಜರಿದ್ದರು.
ಕಿಕ್ಕೇರಿ: ಜಾತ್ರೆ, ಹಬ್ಬ ಹರಿದಿನಗಳು ಸರ್ವ ಜನಾಂಗದ ಶಾಂತಿ, ನೆಮ್ಮದಿ, ಸಂತೋಷ ನೀಡುವ ಭಾವೈಕ್ಯತೆ ಸಂಕೇತವಾಗಿದೆ ಎಂದು ಇನ್‌ಸ್ಪೆಕ್ಟರ್ ಜಯರಾಂ ತಿಳಿಸಿದರು.
ಇಲ್ಲಿನ ಆರಕ್ಷಕ ಠಾಣೆಯಲ್ಲಿ ಗ್ರಾಮಸ್ಥರೊಂದಿಗೆ ಶುಕ್ರವಾರ ಆಯೋಜಿಸಿದ್ದ ಕಿಕ್ಕೇರಮ್ಮ ಜಾತ್ರೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಗ್ರಾಮದೇವಿಯನ್ನು ಸಂಭ್ರಮದಿಂದ ಜಾತಿ, ಮತ, ಭೇದ ಮರೆತು ಹೋಬಳಿಯ ಜನತೆ ಪೂಜಿಸಲಾಗುತ್ತದೆ. ಮಾ.25ರ ಬುಧವಾರ ಸಂಜೆ ಕಿಕ್ಕೇರಮ್ಮ ರಥೋತ್ಸವ ಜರುಗಲಿದೆ. ಸುಮಾರು 50 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಹಾಗಾಗಿ ಅನುಚಿತವಾಗಿ ವರ್ತಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ರಥಬೀದಿಯಲ್ಲಿ ಸುಗಮ ಸಂಚಾರಕ್ಕಾಗಿ ಸಹಕರಿಸಬೇಕು. ಈ ಬೀದಿಯಲ್ಲಿ ಅನಗತ್ಯವಾಗಿ ಅಂಗಡಿಗಳನ್ನು ಇಟ್ಟು ಸಾರ್ವಜನಿಕರಿಗೆ ತೊಂದರೆ ಕೊಡಬಾರದು. ರಥದ ಬಳಿ ಜನದಟ್ಟಣೆ, ರಥ ಎಳೆಯುವಾಗ ಅಡ್ಡ ಬರುವುದು. ಜೂಜಾಟ, ಮದ್ಯಪಾನ ಸೇವನೆ, ಮಹಿಳೆಯರನ್ನು ಚುಡಾಯಿಸುವುದು ಇಂತಹ ಪ್ರಕರಣಗಳು ನಡೆಯದಂತೆ ತಡೆಗಟ್ಟಲು ಮುಖಂಡರು ಸಹಕರಿಸಬೇಕು. ವ್ಹೀಲಿಂಗ್ ಮಾಡುವವರು, ಕರ್ಕಶ ಶಬ್ಧದ ಹಾರನ್ ಅಳವಡಿಸಿಕೊಂಡು ಕಿರಿಕಿರಿ ಮಾಡುವುದು ಈಚೆಗೆ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಬೇಕು. ಅನಧಿಕೃತವಾಗಿ ಮದ್ಯ ಮಾರಾಟ ತಡೆಗೂ ಸಹಕರಿಸಬೇಕು. ಜಾತ್ರೆ ಯಶಸ್ಸಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಕಿಕ್ಕೇರಿ, ಲಕ್ಷ್ಮೀಪುರ, ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಮುಖಂಡರು ಜಾತ್ರೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಇಲಾಖೆಗೆ ಸಹಕಾರ ನೀಡಲಾಗುವುದು. ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಭರವಸೆ ನೀಡಿದರು.
ಲಕ್ಷ್ಮೀಪುರ ಗ್ರಾಮದ ಕೆಂಚಮ್ಮ, ಮಾರಮ್ಮ, ದೊಡ್ಡಹಟ್ಟಿ ವಠಾರದ ಮುಖಂಡರು, ಕಿಕ್ಕೇರಿ ಹಾಗೂ ಸುತ್ತಮುತ್ತಲ ಗ್ರಾಮಗಳ ಗಣ್ಯರು ಸಭೆಯಲ್ಲಿ ಹಾಜರಿದ್ದರು.