ಮಂಡ್ಯದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದ ಪೂರ್ವಭಾವಿ ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿದರು.  
ಮಂಡ್ಯ

ಫೆ.21ರಂದು ಬೃಹತ್ ಉದ್ಯೋಗ ಮೇಳ: ಜಿಪಂ ಸಿಇಒ ಕೆ.ಆರ್.ನಂದಿನಿ ಮಾಹಿತಿ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಮಂಡ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಕ್ರಿಯೆ
  • ವ್ಯಾಪಕ ಪ್ರಚಾರ ಕೈಗೊಳ್ಳಲು ಸೂಚನೆ
ಮಂಡ್ಯ: ನಗರದ ವಿಶ್ವವಿದ್ಯಾನಿಲಯದಲ್ಲಿ ಫೆ.21ರಂದು ಜಿಲ್ಲಾಮಟ್ಟದ ಉದ್ಯೋಗ ಮೇಳ ಆಯೋಜಿಸಲಾಗಿದೆ. ಎಲ್ಲ ವರ್ಗದ ಆಕಾಂಕ್ಷಿಗಳಿಗೆ ಉದ್ಯೋಗ ಕಲ್ಪಿಸುವುದು. ವಿಶೇಷವಾಗಿ ಅಂಗವಿಕಲರಿಗೆ ಉದ್ಯೋಗ ಸಿಗುವಂತೆ ಅಗತ್ಯ ಕ್ರಮ ಮಾಡಿಕೊಳ್ಳಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚನೆ ನೀಡಿದರು.
ನಗರದ ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೌಶಲಾಭಿವೃದ್ಧಿ, ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆ, ದೀನ್ ದಯಾಳ್ ಅಂತ್ಯೋದಯ ಗ್ರಾಮೀಣ ಕೌಶಲ ಯೋಜನೆ, ಜಿಲ್ಲಾಡಳಿತ, ಜಿಪಂ, ಮಂಡ್ಯ ವಿಶ್ವವಿದ್ಯಾನಿಲಯದ ಸಹಾಭಾಗಿತ್ವದಲ್ಲಿ ಉದ್ಯೋಗ ಮೇಳ ವಿವಿಯ ಕಲಾಭವನದಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ ಎಂದರು.
ಅಂಗವಿಕಲರ ಅಭ್ಯರ್ಥಿಗಳನ್ನು ಗುರುತಿಸಿ, ಅವರಿಗೆ ವಿಶೇಷ ಕೊಠಡಿಯಲ್ಲಿ ಸಂದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ತಾಲೂಕು ವ್ಯಾಪ್ತಿಯಲ್ಲಿ ಮೇಳ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳುಬೇಕು. ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳನ್ನು ಶಿಷ್ಟಾಚಾರದಂತೆ ಆಹ್ವಾನಿಸಬೇಕು. ಮೇಳ ಕುರಿತು ಜನಪ್ರತಿನಿಧಿಗಳ ವೀಡಿಯೋ/ಆಡಿಯೋ ಸಂದೇಶ ಚಿತ್ರೀಕರಿಸಿ ಸಾಮಾಜಿಕ ಜಾಲತಾಣ ಹಾಗೂ ಸ್ವಚ್ಛ ವಾಹಿನಿ ವಾಹನಗಳ(ಗ್ರಾಮೀಣ ಮತ್ತು ನಗರ ಪ್ರದೇಶ) ಮೂಲಕ ವ್ಯಾಪಕ ಪ್ರಚಾರ ಮಾಡಬೇಕು ಎಂದು ತಿಳಿಸಿದರು.
ಶಿಕ್ಷಣ ಸಂಸ್ಥೆ ಹಾಗೂ ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ಬ್ಯಾನರ್, ಪೋಸ್ಟರ್ ಅಳವಡಿಸಬೇಕು. 18 ವರ್ಷ ಮೇಲ್ಪಟ್ಟ ಪುರುಷ, ಮಹಿಳಾ, ತೃತೀಯ ಲಿಂಗಿಗಳು ಹಾಗೂ ವಿಶೇಷ ವರ್ಗ, ಅಂಗವಿಕಲ ಅಭ್ಯರ್ಥಿಗಳು ಭಾಗವಹಿಸಬಹುದು. ನೋಂದಣಿ ಮತ್ತು ನಿರ್ವಹಣಾ ಸಮಿತಿಯು ವಿವಿಧ ವಲಯಗಳ ಉದ್ಯೋಗದಾತ ಸಂಸ್ಥೆಗಳನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬೇಕು ಉದ್ಯೋಗದಾತ ಸಂಸ್ಥೆಗಳಿಗೆ ಅಗತ್ಯವಿರುವ ಅಭ್ಯರ್ಥಿಗಳ ವಿದ್ಯಾರ್ಹತೆ ವಿವರಗಳನ್ನು ಸಂಗ್ರಹಿಸಬೇಕು ಎಂದು ಹೇಳಿದರು.
ತಾಲೂಕುವಾರು ಎಲ್ಲ ಸಂಜೀವಿನಿ ಸಿಬ್ಬಂದಿ, ಶಿಕ್ಷಣ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು. ಅಭ್ಯರ್ಥಿಗಳ ನೋಂದಣಿ ಮಾಡಬೇಕು. ಮೇಳದಲ್ಲಿ ಭಾಗವಹಿಸುವ ಉದ್ಯೋಗದಾತ ಸಂಸ್ಥೆಗಳ ಪಟ್ಟಿ ಸಂಗ್ರಹಿಸಿ ನೋಂದಣಿ ಮಾಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾಂತರು, ಅಂಗವಿಕಲರು, ಲೈಂಗಿಕ ಅಲ್ಪಸಂಖ್ಯಾಂತರು, ವಿಶೇಷ ವರ್ಗದ ನಿರುದ್ಯೋಗಿಗಳಿಗೆ ನೋಂದಾಯಿಸಿಕೊಳ್ಳಬೇಕು. ಮೇಳದ ದಿನದಂದು ಬೆಳಗ್ಗೆ 9ಗಂಟೆಗೆ ಅಭ್ಯರ್ಥಿಗಳು ಹಾಜರಾಗಬೇಕು. ಅಂದು ನೋಂದಣಿ ಕೌಂಟರ್ ಮತ್ತು ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಬೇಕು. ಉದ್ಯೋಗದಾತ ಸಂಸ್ಥೆ ಹಾಗೂ ಅಭ್ಯರ್ಥಿಗಳಿಗೆ ಪ್ರತ್ಯೇಕ ಕೌಂಟರ್ ನಿರ್ಮಿಸಿ ನೀರು ಮತ್ತು ಊಟದ ವ್ಯವಸ್ಥೆ ಕಲ್ಪಿಸಬೇಕು. ಸಂದರ್ಶನ ಕೊಠಡಿಗಳಲ್ಲಿ ಚೇರ್, ಟೇಬಲ್ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದರು.
ಸಂದರ್ಶನ ಕೊಠಡಿಗಳನ್ನು ಸ್ವಚ್ಛಗೊಳಿಸಲು ಅಗತ್ಯ ಡಿ ಗ್ರೂಪ್ ಸಿಬ್ಬಂದಿ ನಿಯೋಜಿಸಬೇಕು. ಸಂದರ್ಶನ ಕೊಠಡಿಗಳ ಬಗ್ಗೆ ಅಭ್ಯರ್ಥಿಗಳ ಮಾರ್ಗದರ್ಶನಕ್ಕಾಗಿ ಬ್ಯಾನರ್ ಅಳವಡಿಸಬೇಕು. ವೇದಿಕೆ ಕಾರ್ಯಕ್ರಮಕ್ಕೆ ಶಿಷ್ಠಾಚಾರದನ್ವಯ ಅಗತ್ಯ ವ್ಯವಸ್ಥೆ ಕಲ್ಪಿಸಿ. ವೇದಿಕೆ ಕಾರ್ಯಕ್ರಮ ನಂತರ ಸ್ವ-ಉದ್ಯೋಗ ಕುರಿತು ತಜ್ಞರಿಂದ ಉಪಾನ್ಯಾಸವನ್ನು ಏರ್ಪಡಿಸಬೇಕು. ಸ್ವಚ್ಛ ವಾಹಿನಿ ವಾಹನಗಳೊಂದಿಗೆ ಅಗತ್ಯ ಸಿಬ್ಬಂದಿ ನಿಯೋಜಿಸಿ ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡಬೇಕು. ಅಗತ್ಯ ವೈದ್ಯಕೀಯ ಸೌಲಭ್ಯಗಳೊಂದಿಗೆ ಸಿಬ್ಬಂದಿ ನೇಮಿಸಬೇಕು ಹಾಗೂ ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಬೇಕು. ಉದ್ಯೋಗಾಕಾಂಕ್ಷಿಗಳು ಆಧಾರ್ ಕಾರ್ಡ್ ಮತ್ತು ಫೋಟೋ, ಅರ್ಹತಾ ಅಂಕ ಪಟ್ಟಿ ತರಬೇಕು. ಉದ್ಯೋಗ ಮೇಳದಲ್ಲಿ ನೋಂದಾಯಿಸಿಕೊಂಡವರಿಗೆ ಊಟದ ಟೋಕನ್ ನೀಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್, ಸಹಾಯಕ ಕೃಷಿ ನಿರ್ದೇಶಕ ಹರ್ಷ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಆಶಾ, ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಕೌಶಲಾಭಿವೃದ್ಧಿ ಅಧಿಕಾರಿ ನಾಗನಂದ ಇತರರಿದ್ದರು.