ಮದ್ದೂರು ತಾಲೂಕು ಗುಡಿಗೆರೆ ಗ್ರಾಮದಲ್ಲಿ ಜಲ ಜೀವನ ಮಿಷನ್ ಕಾಮಗಾರಿ ಬಗ್ಗೆ ಜಿಪಂ ಸಿಇಒ ಕೆ.ಆರ್.ನಂದಿನಿ ಮಾಹಿತಿ ಪಡೆದರು.  
ಮಂಡ್ಯ

ಜೆಜೆಎಂ ಕಾಮಗಾರಿ ಪ್ರಗತಿ ಪರಿಶೀಲನೆ: ವಿವಿಧ ಗ್ರಾಮಕ್ಕೆ ಜಿಪಂ ಸಿಇಒ ಕೆ.ಆರ್.ನಂದಿನಿ ಭೇಟಿ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಜಲ ಜೀವನ್ ಮಿಷನ್ ಕಾಮಗಾರಿ
  • ಜಿಪಂ ಸಿಇಒ ಕೆ.ಆರ್.ನಂದಿನಿ ಪರಿಶೀಲನೆ
  • ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚನೆ
ಮಂಡ್ಯ: ವಿವಿಧೆಡೆ ಜಲ ಜೀವನ ಮಿಷನ್ ಯೋಜನೆಯಡಿ ತೆಗೆದುಕೊಳ್ಳಲಾದ ಕಾಮಗಾರಿಗಳ ಗುಣಮಟ್ಟ ಮತ್ತು ಪ್ರಸ್ತುತ ಸ್ಥಿತಿ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಪರಿಶೀಲಿಸಿದರು.
ಮಂಡ್ಯ ತಾಲೂಕಿನ ಹನಕೆರೆ, ಮದ್ದೂರು ತಾಲೂಕು ಗುಡಿಗೆರೆ ಮತ್ತು ಯಲಾದಹಳ್ಳಿ ಹಾಗೂ ಮಳವಳ್ಳಿ ತಾಲೂಕಿನ ಕೆಂಬೂತಗೆರೆ ಗ್ರಾಮದಲ್ಲಿ ಕಾಮಗಾರಿ ಪರಿಶೀಲನೆ ನಡೆಸಿದ ಅವರು, ಗ್ರಾಮದಲ್ಲಿನ ಪ್ರತಿ ಕುಟುಂಬಗಳಿಗೂ ನೀರು ಸರಬರಾಜು ಮಾಡಲು ಅವಶ್ಯಕವಿರುವ ಕಾಮಗಾರಿಗಳನ್ನು ಯೋಜನೆಯ ಮಾರ್ಗಸೂಚಿಯನುಸಾರ ತೆಗೆದುಕೊಂಡು ಮುಕ್ತಾಯಗೊಳಿಸಿ ಗ್ರಾಪಂಗೆ ಹಸ್ತಾಂತರ ಮಾಡುವಂತೆ ಸೂಚಿಸಿದರು.
ಪೈಪ್‌ಲೈನ್ ಅಳವಡಿಸಲು ಕತ್ತರಿಸಲಾಗಿರುವ ರಸ್ತೆ ಭಾಗವನ್ನು ಸರಿಯಾದ ರೀತಿಯಲ್ಲಿ ಮುಚ್ಚಿಲ್ಲದಿರುವುದರಿಂದ ಆನೇಕ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. ಈ ನಿಟ್ಟಿನಲ್ಲಿ ಇಂಜಿನಿಯರ್‌ಗಳು ಕೂಡಲೇ ಕ್ರಮಗಳನ್ನು ತೆಗೆದುಕೊಂಡು ಪೈಪ್‌ಲೈನ್ ಅಳವಡಿಸಲು ಕತ್ತರಿಸಿರುವ ಭಾಗವನ್ನು ಎಸ್‌ಒಪಿಯಂತೆ ಮರುಪೂರಣಗೊಳಿಸಿ ವರದಿ ಸಲ್ಲಿಸಬೇಕು. ಒಎಚ್‌ಟಿ ಕಾಮಗಾರಿಗೆ ಸಂಬಂಧಿಸಿದಂತೆ ಗುರುತಿಸಲಾಗಿರುವ ನಿವೇಶನಗಳನ್ನು ಸಂಬಂಧಪಟ್ಟವರಿಂದ ಹಸ್ತಾಂತರ ಪಡೆಯಲು ಕ್ರಮವಹಿಸಿ. ಮಾತ್ರವಲ್ಲದೆ ಕಾಮಗಾರಿಯನ್ನು ಪ್ರಥಮ ಆದ್ಯತೆಯಲ್ಲಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಗ್ರಾ.ಪಂ ನೀರುಗಂಟಿಗಳು ನೀರು ಸರಬರಾಜು ವಿತರಣಾ ಪೈಪ್‌ಗಳನ್ನು ಪ್ರತಿ ದಿನ ಪರಿಶೀಲಿಸಬೇಕು. ಯಾವುದಾದರೂ ಪೈಪ್‌ಲೈನ್‌ನಲ್ಲಿ ಲೀಕೇಜ್ ಕಂಡುಬಂದಲ್ಲಿ ಕೂಡಲೇ ಸರಿಪಡಿಸಲು ಅಗತ್ಯ ಕ್ರಮವಹಿಸಬೇಕು. ಯಾವುದೇ ಕಾರಣಕ್ಕೂ ಕಲುಷಿತ ನೀರು ಸಾರ್ವಜನಿಕರಿಗೆ ಸರಬರಾಜಾಗದಂತೆ ಎಚ್ಚರಿಕೆ ವಹಿಸಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕುಡಿಯುವ ನೀರು ಸರಬರಾಜು ಯೋಜನೆಯಡಿ ಸೃಜಿಸಲಾಗಿರುವ ಸ್ವತ್ತುಗಳನ್ನು ಸಂರಕ್ಷಣೆ ಮಾಡಬೇಕು. ಕಾಲ ಕಾಲಕ್ಕೆ ಅವುಗಳನ್ನು ಸ್ವಚ್ಛಗೊಳಿಸಬೇಕು. ಫೀಲ್ಡ್ ಟೆಸ್ಟ್‌ಕಿಟ್ ಮೂಲಕ ನೀರಿನ ಪರೀಕ್ಷೆಯನ್ನು ಮಾಡುವ ಮೂಲಕ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಪರಿಶೀಲನೆ ವೇಳೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಪ್ರಮೋದ್‌ಕುಮಾರ್, ವಿವಿಧ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ಗಣೇಶ್ ಹೆಗಡೆ, ಮಧುಸೂಧನ್, ರಂಗಸ್ವಾಮಿ ಇತರರಿದ್ದರು.