ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ದೇವರಾಜು ಅವಿರೋಧವಾಗಿ ಆಯ್ಕೆಯಾದರು. ಚುಂಚಮ್ಮ, ಆಬಲವಾಡಿ ಸುರೇಶ್, ಸತೀಶ್, ದೇವರಾಜು, ನರಸಿಂಹಚಾರಿ ಇದ್ದರು.
ಮದ್ದೂರು: ತಾಲೂಕಿನ ಆಬಲವಾಡಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ದೇವರಾಜು ಅವಿರೋಧವಾಗಿ ಆಯ್ಕೆಯಾದರು.
ಸತ್ಯವತಿ ಅವರು ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ದೇವರಾಜು ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರವನ್ನು ಸಲ್ಲಿಸದ ಕಾರಣ ಅವರ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಾಪಂ ಇಒ ರಾಮಲಿಂಗಯ್ಯ ಘೋಷಿಸಿದರು.
ನೂತನ ಅಧ್ಯಕ್ಷ ದೇವರಾಜು ಮಾತನಾಡಿ, ಸ್ವಾತಂತ್ರೃ ಬಂದಾಗಿನಿಂದಲೂ ಇದುವರೆಗೆ ಅವ್ವೆರಹಳ್ಳಿ ಗ್ರಾಮಕ್ಕೆ ಅಧ್ಯಕ್ಷ ಸ್ಥಾನ ಸಿಕ್ಕಿರಲಿಲ್ಲ, ಈಗ ನಾನು ಅಧ್ಯಕ್ಷನಾಗಿ ಆಯ್ಕೆಯಾಗಲು ಮುಖಂಡ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ್ ಕಾರಣವೆಂದರು.
ಪಂಚಾಯಿತಿಯ ಎಲ್ಲ ಸದಸ್ಯರ ವಿಶ್ವಾಸ ಪಡೆದು ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳ ರಸ್ತೆ, ಚರಂಡಿ, ಕುಡಿಯುವ ನೀರು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ ಪಂಚಾಯಿತಿಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಸರ್ಕಾರದಿಂದ ಬರುವ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಮತ್ತು ಗ್ರಾಮಸ್ಥರ ಹಾಗೂ ರೈತರು ಕೆಲಸಗಳು ಪಂಚಾಯಿತಿಯಲ್ಲಿ ತ್ವರಿತವಾಗಿ ಆಗುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದರು.
ದೇವರಾಜು ರವರು ಜಯಶೀಲರಾದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ಗ್ರಾಪಂ ಉಪಾಧ್ಯಕ್ಷೆ ಚುಂಚಮ್ಮ, ಸದಸ್ಯರಾದ ಆಬಲವಾಡಿ ಸುರೇಶ್, ಸತೀಶ್, ದೇವರಾಜು, ನರಸಿಂಹಾಚಾರಿ, ಅನಿಲ್, ಸಾಗರ್, ಪುಷ್ಪಾ, ರಾಮಲಿಂಗು, ಮುಖಂಡರಾದ ವೀರಣ್ಣ, ಅಶೋಕ್, ಅನಿಲ್, ಶಿವನಂಜು, ಬದಗಣ್ಣ, ನಂಜುಂಡ, ದೇವರಾಜು ಮತ್ತಿತರರು ಹಾಜರಿದ್ದರು.