ಮಂಡ್ಯ ತಾಲೂಕು ಬಿ.ಗೌಡಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಜನತಾದರ್ಶನದಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಸಾರ್ವಜನಿಕರ ಅಹವಾಲು ಆಲಿಸಿದರು. 
ಮಂಡ್ಯ

ಬಿ.ಗೌಡಗೆರೆ ವ್ಯಾಪ್ತಿಗೆ 15 ಕೋಟಿ ರೂ. ಅನುದಾನ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಬಿ.ಗೌಡಗೆರೆ ಗ್ರಾಮದಲ್ಲಿ ಜನತಾದರ್ಶನ
  • ಸಾರ್ವಜನಿಕರಿಂದ ಅಹವಾಲು ಸ್ವೀಕಾರ
  • ಶಾಸಕ ರವಿಕುಮಾರ್ ಗಣಿಗ ಸೇರಿದಂತೆ ಅಧಿಕಾರಿಗಳು ಭಾಗಿ
ಮಂಡ್ಯ: ಕಳೆದ ಎರಡೂವರೆ ವರ್ಷದಲ್ಲಿ ಬಿ.ಗೌಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ 15 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ಮಂಡ್ಯ ತಾಲೂಕು ಆಡಳಿತದ ವತಿಯಿಂದ ತಾಲೂಕಿನ ಬಿ.ಗೌಡಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರು ಸರ್ಕಾರಿ ಕಚೇರಿಗಳನ್ನು ಅಲೆಯುವುದನ್ನು ತಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜನಸ್ಪಂದನ ಕಾರ್ಯಕ್ರಮವನ್ನು ಜಾರಿಗೊಳಿಸಿದರು. ಅದರಂತೆ ಇದು ಮಂಡ್ಯ ತಾಲೂಕಿನಲ್ಲಿ ನಡೆಯುತ್ತಿರುವ 15ನೇ ಜನತಾ ದರ್ಶನ ಕಾರ್ಯಕ್ರಮ. ಮುಂದೆ ಮಂಡ್ಯ ನಗರದ ವಾರ್ಡ್ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿನಲ್ಲಿ ಅಧಿಕಾರಿಗಳನ್ನು ಒಳಗೊಂಡಂತೆ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಈ ಜನಸ್ಪಂದನ ಸಭೆಯಲ್ಲಿ ಜನರು ನೀಡುವ ಅರ್ಜಿಗಳನ್ನು ಸ್ಥಳದಲ್ಲಿ ಪರಿಹರಿಸಲಾಗುವುದು. ಇಲ್ಲದ ಪಕ್ಷದಲ್ಲಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಪರಿಶೀಲಿಸಿ ಕಾನೂನು ಬದ್ಧವಾಗಿದ್ದರೆ ಮೂವತ್ತು ದಿನಗಳಲ್ಲಿ ಸರಿಪಡಿಸಲಾಗುವುದು. ಕಣ್ಣಿನ ಉಚಿತ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ. ಅಗತ್ಯ ಇರುವವರಿಗೆ ಕನ್ನಡಕವನ್ನು ನೀಡಲಾಗುತ್ತದೆ. ಸಾರ್ವಜನಿಕರ ಸಮಸ್ಯೆ ಪರಿಹರಿಸಲು ನಮ್ಮ ಸರ್ಕಾರ ಮತ್ತು ಅಧಿಕಾರಿಗಳು ಶ್ರಮವಹಿಸುತ್ತಿದ್ದೇವೆ ಎಂದು ತಿಳಿಸಿದರು.
ಮಲ್ಲಯ್ಯನದೊಡ್ಡಿ ಮತ್ತು ಕಟ್ಟೆದೊಡ್ಡಿ ರಸ್ತೆ ಸುಮಾರು 40 ವರ್ಷದಿಂದ ದುಸ್ಥಿತಿಯಲ್ಲಿತ್ತು. ಅಲ್ಲಿನ ಜನರ ಬೇಡಿಕೆಯಂತೆ ರಸ್ತೆ ಉದ್ಘಾಟನೆಗೆ ಸಿದ್ಧವಾಗಿದೆ. ರಸ್ತೆ ಅಭಿವೃದ್ಧಿಯನ್ನು 2.80 ಕೋಟಿ ರೂ ವೆಚ್ಚದಲ್ಲಿ ಎರಡು ಭಾಗವಾಗಿ ಮಾಡಲಾಗಿದೆ. ಹನಕೆರೆಯಿಂದ ಕನ್ನಲಿ ಗ್ರಾಮದವರೆಗೂ ರಸ್ತೆ ನಿರ್ಮಾಣ ಮಾಡಲಾಗುವುದು. 5 ಕೋಟಿ ರೂ. ವೆಚ್ಚದಲ್ಲಿ ಹನಕೆರೆಯಿಂದ ರಸ್ತೆಯನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ನಮ್ಮ ಸರ್ಕಾರ ಇನ್ನೂ ಎರಡೂವರೆ ವರ್ಷಗಳ ಕಾಲ ಇರುತ್ತದೆ. ಈ ಅವಧಿಯಲ್ಲಿ ಗ್ರಾಮೀಣ ಭಾಗದ ಒಳ ರಸ್ತೆಗಳನ್ನು ಹಂತ ಹಂತವಾಗಿ ಸಿದ್ಧಪಡಿಸಲಾಗುವುದು. ಕಟ್ಟೆದೊಡ್ಡಿಯಲ್ಲಿ ಸುಸಜ್ಜಿತವಾದ ರಸ್ತೆಗಳನ್ನು ನಿರ್ಮಾಣ ಮಾಡಲು 20 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡಲು 5 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಜನರೊಟ್ಟಿಗೆ ಬೆರೆಯುವ ನಿಜವಾದ ಜನನಾಯಕ ರವಿಕುಮಾರ್ ಗಣಿಗ. ಯಾವಾಗಲೂ ಜನರೊಟ್ಟಿಗೆ ಇದ್ದು ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹಾರ ನೀಡಬೇಕು ಎಂಬ ದೂರದೃಷ್ಟಿಯನ್ನು ಶಾಸಕ ರವಿಕುಮಾರ್ ಅವರು ಹೊಂದಿದ್ದಾರೆ. ಕಳೆದ 6 ತಿಂಗಳಲ್ಲಿ 10 ಕ್ಕೂ ಹೆಚ್ಚು ಜನಸ್ಪಂದನ ಕಾರ್ಯಕ್ರಮವನ್ನು ಶಾಸಕರು ಆಯೋಜಿಸಿದ್ದಾರೆ ಎಂದು ಹೇಳಿದರು.
ಅನೇಕ ಸಂದರ್ಭಗಳಲ್ಲಿ ಅನಿವಾರ್ಯ ಕಾರಣಗಳಿಂದ ಸಾರ್ವಜನಿಕರು ಅಧಿಕಾರಿಗಳನ್ನು ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಇಂತಹ ಜನಸ್ಪಂದನ ಕಾರ್ಯಕ್ರಮದಲ್ಲಿ ಅಧಿಕಾರಿಗಳು ನಿಮ್ಮ ಊರಿಗೆ ಬಂದು ನಿಮ್ಮ ಸಮಸ್ಯೆಗಳನ್ನು ಆಲಿಸಿ ಕಾನೂನು ಬದ್ಧವಾಗಿ ಪರಿಹಾರ ಒದಗಿಸುತ್ತಾರೆ. ಮೃತರಾದವರ ಹೆಸರು ಪಹಣಿಯಲ್ಲಿ ಈಗಲೂ ಸಹ ಮುಂದುವರಿಯುತ್ತಿದೆ. ವಾರಸುದಾರರು ತಾಲೂಕು ಕಚೇರಿಗೆ ಆರ್.ಟಿ.ಸಿ, ವಂಶವೃಕ್ಷ ಮತ್ತು ಮರಣ ಪ್ರಮಾಣ ಪತ್ರ ನೀಡಿ ತಮ್ಮ ಹೆಸರಿಗೆ ಮಾಡಿಕೊಳ್ಳಬೇಕಾಗಿತ್ತು. ಜನರು ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ಒಂದು ಮಹತ್ವಾಕಾಂಕ್ಷಿ ಯೋಜನೆಯಾದ ಪೌತಿ ಖಾತಾ ಆಂದೋಲನವನ್ನು ಜಾರಿಗೊಳಿಸಿದೆ. ಮಂಡ್ಯ ಜಿಲ್ಲೆಯ ಕಂದಾಯ ಇಲಾಖೆಯ ಎಲ್ಲ ಅಧಿಕಾರಿ, ಸಿಬ್ಬಂದಿ ವರ್ಗ ಉತ್ತಮವಾದ ಕೆಲಸವನ್ನು ಮಾಡಿರುವುದರಿಂದ ರಾಜ್ಯದಲ್ಲಿ ಪೌತಿ ಖಾತೆ ಆಂದೋಲನದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಆಫ್‌ಲೈನ್‌ನಲ್ಲಿ 70 ಸಾವಿರಕ್ಕೂ ಹೆಚ್ಚು ಪೌತಿ ಖಾತೆ ಮತ್ತು ಆನ್‌ಲೈನ್‌ನಲ್ಲಿ 58 ಸಾವಿರ ಪೌತಿ ಖಾತೆಯನ್ನು ಜಿಲ್ಲೆಯಲ್ಲಿ ಮಾಡಿದ್ದೇವೆ. ಮುಂದಿನ ದಿನಗಳಲ್ಲೂ ಹೆಚ್ಚು ಪೌತಿ ಖಾತೆಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್(ಶಿವಪ್ಪ), ತಹಸೀಲ್ದಾರ್ ವಿಶ್ವನಾಥ್, ತಾಪಂ ಇಒ ಲೋಕೇಶ್‌ಮೂರ್ತಿ, ಆರಕ್ಷಕ ವೃತ್ತ ನಿರೀಕ್ಷಕ ಪ್ರಕಾಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.