ಬೆಂಗಳೂರಿನ ವಿಕಾಸಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು.  
ಮಂಡ್ಯ

ಅನುದಾನ ಕೇಳಲು ಸಿಎಂ ಬಳಿ ನಿಯೋಗ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ ! Jal Jeevan Mission Scheme

ಜಲಜೀವನ್ ಮಿಷನ್ ಯೋಜನೆಯ ಪ್ರಾರಂಭದಲ್ಲಿ ಸೀಮಿತ ಕಾಮಗಾರಿಗಳನ್ನಷ್ಟೇ ನಡೆಸಬೇಕಿತ್ತು. ಆದರೆ ಸ್ಥಳೀಯ ಒತ್ತಡಗಳಿಂದಾಗಿ ಹೆಚ್ಚುವರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಿಂದಾಗಿ ಅನುದಾನದ ಕೊರತೆ ಉಂಟಾಗಿದ್ದರೆ, ಮತ್ತೊಂದೆಡೆ ಕಳಪೆ ಕಾಮಗಾರಿ ನಡೆದಿರುವುದು ಕಂಡುಬಂದಿದೆ. ಈ ಸಂಬಂಧ ಜಿಲ್ಲೆಯ ಶಾಸಕರ ನಿಯೋಗ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ರಾಜ್ಯ ಸರ್ಕಾರದ ಅನುದಾನದ ಮೂಲಕ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿದೆ

ಮಂಡ್ಯ: ಜಲಜೀವನ್ ಮಿಷನ್ ಯೋಜನೆಯ ಪ್ರಾರಂಭದಲ್ಲಿ ಸೀಮಿತ ಕಾಮಗಾರಿಗಳನ್ನಷ್ಟೇ ನಡೆಸಬೇಕಿತ್ತು. ಆದರೆ ಸ್ಥಳೀಯ ಒತ್ತಡಗಳಿಂದಾಗಿ ಹೆಚ್ಚುವರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಿಂದಾಗಿ ಅನುದಾನದ ಕೊರತೆ ಉಂಟಾಗಿದ್ದರೆ, ಮತ್ತೊಂದೆಡೆ ಕಳಪೆ ಕಾಮಗಾರಿ ನಡೆದಿರುವುದು ಕಂಡುಬಂದಿದೆ. ಈ ಸಂಬಂಧ ಜಿಲ್ಲೆಯ ಶಾಸಕರ ನಿಯೋಗ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ರಾಜ್ಯ ಸರ್ಕಾರದ ಅನುದಾನದ ಮೂಲಕ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.

ಬೆಂಗಳೂರಿನ ವಿಕಾಸಸೌಧದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯೊಂದಿಗೆ ಆಯೋಜಿಸಿದ್ದ ಜಿಲ್ಲಾ ವ್ಯಾಪ್ತಿಯ ಜಲಜೀವನ ಮಿಷನ್ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಯೋಜನೆಗೆ ಕಳೆದ ಒಂದೂವರೆ ವರ್ಷದಿಂದ ಕೇಂದ್ರ ಸರ್ಕಾರವು ಅನುದಾನ ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಬಹುತೇಕ ಕಾಮಗಾರಿ ಸ್ಥಗಿತಗೊಂಡಂತಾಗಿದ್ದು, ಕೆಲವೆಡೆ ಕಳಪೆ ಕಾಮಗಾರಿಯೂ ನಡೆದಿದೆ. ಕಾಮಗಾರಿಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಸಿಎಂ ಭೇಟಿ ಮಾಡಿ ಉಳಿದ ಅನುದಾನವನ್ನು ರಾಜ್ಯ ಸರ್ಕಾರದಿಂದಲೇ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಅಂದಾಜು ಯೋಜನಾ ವೆಚ್ಚವನ್ನು ಸಮರ್ಪಕವಾಗಿ ಸಿದ್ಧಪಡಿಸದ ಕಾರಣ ಜಲಜೀವನ ಮಿಷನ್‌ನಲ್ಲಿ ಇಷ್ಟೆಲ್ಲಾ ಸಮಸ್ಯೆ ಉದ್ಭವಿಸಿವೆ. ಕಾಮಗಾರಿಗೂ ಹಾಗೂ ಅಂದಾಜು ಮೊತ್ತಕ್ಕೂ ವ್ಯತ್ಯಾಸವಿದ್ದು, ಅಧಿವೇಶನದ ಮಧ್ಯದಲ್ಲೇ ಮುಖ್ಯಮಂತ್ರಿ ಅವರ ಸಮಯ ಪಡೆದು ಮನವಿ ಸಲ್ಲಿಸುವುದು ಸೂಕ್ತ. ಮಾರ್ಚ್ ಒಳಗೆ ಶೇ.30ರಷ್ಟು ಹಾಗೂ ನಂತರ ಶೇ.70ರಷ್ಟು ಅನುದಾನ ಬಿಡುಗಡೆ ಮಾಡುವಂತೆ ಸಿಎಂ ಹಾಗೂ ಆರ್ಥಿಕ ಇಲಾಖೆಯ ಕಾರ್ಯದರ್ಶಿಗೆ ಮನವರಿಕೆ ಮಾಡಿಕೊಡಬೇಕು. ಈ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ತಾವೂ ವೈಯಕ್ತಿಕವಾಗಿ ಚರ್ಚಿಸುವುದಾಗಿ ಚಲುವರಾಯಸ್ವಾಮಿ ಹೇಳಿದರು.

ಏಕಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಒಂದು ವರ್ಷದೊಳಗೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು 2028ರ ಡಿಸೆಂಬರ್ ಒಳಗೆ ಪೂರ್ಣಗೊಳಿಸಬೇಕು. ಅಗತ್ಯ ಅನುದಾನಕ್ಕಾಗಿ ಪ್ರತಿ ಶಾಸಕರ ಕ್ಷೇತ್ರವಾರು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಬೇಕು. ಜಲಧಾರೆ ಯೋಜನೆಗೆ ಸಂಬಂಧಿಸಿದಂತೆ ಕಾಮಗಾರಿ ಆರಂಭಿಸದ ಗುತ್ತಿಗೆದಾರರಿಗೆ ನೋಟಿಸ್ ಜಾರಿಗೊಳಿಸಿ, ಕಾಮಗಾರಿಯ ವೇಗವನ್ನು ಹೆಚ್ಚಿಸಬೇಕು ಎಂದು ಸಚಿವರು ಸೂಚಿಸಿದರು.

ಜಿಲ್ಲಾ ವ್ಯಾಪ್ತಿಗೆ ಸಂಬಂಧಿಸಿದಂತೆ ಜಲಜೀವನ್ ಮಿಷನ್ ಕಾಮಗಾರಿಗಳ ಪ್ರತ್ಯೇಕ ಸಭೆ ನಡೆಸಿ, ವಾರದೊಳಗೆ ಬಾಕಿಯಿರುವ 90 ಕೋಟಿ ರೂ. ಅನುದಾನ ಬಿಡುಗಡೆಯ ಭರವಸೆ ನೀಡಿದ ಹಾಗೂ ಕಾಮಗಾರಿ ಪೂರ್ಣಗೊಳಿಸಲು ರಾಜ್ಯ ಸರ್ಕಾರದ ಅನುದಾನಕ್ಕಾಗಿ ಸಿಎಂ ಅವರನ್ನು ಭೇಟಿ ಮಾಡುವ ನಿಲುವಿಗೆ ಸ್ಪಂದಿಸಿದ ಆರ್‌ಡಿಪಿಆರ್ ಸಚಿವ ಈಶ್ವರ ಖಂಡ್ರೆ ಅವರಿಗೆ ಜಲಸಂಪನ್ಮೂಲ ಸಚಿವರು ಧನ್ಯವಾದ ಸಲ್ಲಿಸಿದರು. ಇದೇ ವೇಳೆ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಜಿಲ್ಲೆಯ ಗುತ್ತಿಗೆದಾರರೊಂದಿಗೆ ಸಚಿವ ಚಲುವರಾಯಸ್ವಾಮಿ ಅವರು ಪ್ರತ್ಯೇಕ ಸಭೆ ನಡೆಸಿ, ಬಾಕಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸ್ಪಷ್ಟ ಸೂಚನೆ ನೀಡಬೇಕೆಂದು ಮನವಿ ಮಾಡಿದರು.

ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಜಲಜೀವನ್ ಮಿಷನ್‌ನ 1 ರಿಂದ 3ನೇ ಹಂತದ ಕಾಮಗಾರಿಗಳಲ್ಲಿ ಜಿಲ್ಲೆಯಲ್ಲಿ 1,913 ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಇವುಗಳಲ್ಲಿ 1,422 ಕಾಮಗಾರಿಗಳು ಅಂದಾಜು ಮೊತ್ತದಲ್ಲಿ ವ್ಯತ್ಯಾಸಗೊಂಡಿದ್ದು, ಈಗ ಅನುದಾನದ ಪ್ರಮಾಣ ಹೆಚ್ಚಾಗಿದೆ. ಡಿಪಿಆರ್ ಅನ್ವಯ 1,483 ಕಾಮಗಾರಿ ಪೂರ್ಣಗೊಳಿಸಲಾಗಿದ್ದು, 621 ಗ್ರಾಮಗಳಲ್ಲಿ ಮನೆ-ಮನೆಗೆ ನೀರು ತಲುಪಿಸಿ ’ಹರ್ ಘರ್ ಜಲ್’ ಘೋಷಿಸಲಾಗಿದೆ ಎಂದು ವಿವರಿಸಿದರು.

ಈಶ್ವರ್ ಖಂಡ್ರೆ ಮಾತನಾಡಿ, 2019-20 ರಲ್ಲಿ ಜಲಜೀವನ್ ಮಿಷನ್ ಯೋಜನೆ ಆರಂಭವಾಗಿದ್ದು, ಒಟ್ಟು 8.5 ಲಕ್ಷ ಕೋಟಿ ರೂ. ಯೋಜನಾ ಮೊತ್ತವನ್ನು ಅಂದಾಜಿಸಲಾಗಿದೆ. 2028ರ ಡಿಸೆಂಬರ್ ಅಂತ್ಯದೊಳಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸುವ ಗಡುವು ಇದೆ. ಮಂಡ್ಯದಲ್ಲಿ 500 ಮನೆಗಳ ಪೈಕಿ ಕೇವಲ 200 ಮನೆಗಳ ಲೆಕ್ಕದಲ್ಲಿ ಆರಂಭಿಕ ಯೋಜನಾ ವೆಚ್ಚ ಸಿದ್ಧಪಡಿಸಲಾಗಿದ್ದರಿಂದ ಈಗ ನಿರೀಕ್ಷೆಗೂ ಮೀರಿದ ಅನುದಾನದ ಅಗತ್ಯವಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಪಿ.ರವಿಕುಮಾರ್ ಗಣಿಗ, ಕೆ.ಎಂ.ಉದಯ್, ದರ್ಶನ್ ಪುಟ್ಟಣ್ಣಯ್ಯ, ಎಚ್.ಟಿ.ಮಂಜು, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಕೆಎನ್‌ಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ ರಾಥೋಡ್ ಇತರರಿದ್ದರು.