ಮಂಡ್ಯ ನಗರದ ಜೆ.ಸಿ ವೃತ್ತದಲ್ಲಿ ಜೈಲ್ ಭರೋ ಚಳವಳಿ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಕರೆದೊಯ್ಯುತ್ತಿರುವುದು.  
ಮಂಡ್ಯ

ಬಲವಂತದ ಭೂಸ್ವಾಧೀನಕ್ಕೆ ವಿರೋಧ: ಜೈಲ್ ಭರೋ ಚಳವಳಿ ನಡೆಸಿದವರ ಬಂಧನ

ಕೆ.ಎನ್.ರಾಘವೇಂದ್ರ

ಮಂಡ್ಯ: ಬಲವಂತದ ಭೂಸ್ವಾಧೀನ, ಕಾರ್ಪೋರೇಟ್ ಭೂಕಬಳಿಕೆ, ಬೆಲೆ ಏರಿಕೆ ವಿರೋಧಿಸಿ ಕ್ವಿಟ್ ಇಂಡಿಯಾ ಮಾದರಿಯಲ್ಲಿ ಕಾರ್ಪೋರೇಟ್‌ಗಳೇ ದೇಶ ಬಿಟ್ಟು ತೊಲಗಿ ಘೋಷಣೆಯಡಿ ನಗರದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ, ಸಂಯುಕ್ತ ಕಿಸಾನ್ ಮೋರ್ಚಾ, ಜಂಟಿ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಜೈಲ್‌ಭರೋ ಚಳವಳಿ ನಡೆಸಿ ಬಂಧನಕ್ಕೊಳಗಾದರು.

ಸಿಲ್ವರ್ ಜುಬಿಲಿ ಉದ್ಯಾನದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಯಚಾಮರಾಜೇಂದ್ರ ಒಡೆಯರ್ ವೃತ್ತಕ್ಕೆ ತೆರಳಿಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರಲ್ಲದೆ, ಹೆದ್ದಾರಿ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟಿಸಿದರು. ಬಳಿಕ ಪೊಲೀಸರು ಪುಟ್ಟಮಾಧು, ದೇವಿ, ಭರತ್‌ರಾಜ್, ಮಹದೇವು, ಕೃಷ್ಣೇಗೌಡ, ಲಿಂಗರಾಜು, ಹನುಮೇಶ್, ಕುಮಾರ್, ಸಿ.ಕುಮಾರಿ, ರಾಜು, ಸುಶೀಲ, ಲತಾ, ಮಹದೇವಮ್ಮ, ಆನಂದ್ ಸೇರಿದಂತೆ ಹಲವರನ್ನು ಬಂಧಿಸಿ ಸಶಸ್ತ್ರ ಪೊಲೀಸ್ ಮೈದಾನಕ್ಕೆ ಕರೆದೊಯ್ದು ಕೆಲಕಾಲ ಇಟ್ಟುಕೊಂಡು ನಂತರ ಬಿಡುಗಡೆ ಮಾಡಿದರು.
ಇದಕ್ಕೂ ಮೊದಲು ಮಾತನಾಡಿದ ಪ್ರತಿಭಟನಾಕಾರರು, ವಿಬಿ ಜಿ ರಾಮ್ ಜಿ ಕಾಯ್ದೆ ಹಿಂಪಡೆದು ನರೇಗಾ ಮುಂದುವರಿಸುವ ಜತೆಗೆ ವರ್ಷಕ್ಕೆ 200 ದಿನ ಕೆಲಸ, ದಿನಕ್ಕೆ 700 ರೂ. ಕೂಲಿ ನೀಡಬೇಕು. ವಿದ್ಯುತ್ ಕಾಯ್ದೆ-2025, ಬೀಜ ಕಾಯ್ದೆ, ಕೃಷಿ ಮಾರುಕಟ್ಟೆ ಕುರಿತು ರಾಷ್ಟ್ರೀಯ ಧೋರಣಾ ಚೌಕಟ್ಟು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಡಾ.ಸ್ವಾಮಿನಾಥನ್ ವರದಿ ಶಿಫಾರಸಿನಂತೆ ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಶಾಸನ, ಎಲ್ಲ ರೈತ-ಕೃಷಿ ಕೂಲಿಕಾರ-ಮಹಿಳೆಯರ ಎಲ್ಲ ರೀತಿಯ ಸಾಲ ಮನ್ನಾ ಮಾಡಲು ಹಾಗೂ ಋಣಮುಕ್ತ ಕಾಯ್ದೆ ಮತ್ತು ಶಾಸನಬದ್ಧ ಜೀವನಾವಶ್ಯಕ ಕನಿಷ್ಠ ಕೂಲಿ ಶಾಸನಕ್ಕೆ, ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಆಗ್ರಹಿಸಿದರು.
ರಸಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಶ ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಬೇಕು. ಎಲ್ಲ ವಲಯಗಳಲ್ಲಿ ಹೆಚ್ಚುತ್ತಿರುವ ಖಾಸಗೀಕರಣ, ಕಾರ್ಪೋರೇಟ್ ಶೋಷಣೆ ಮೇಲೆ ಸೂಕ್ತ ನಿಯಂತ್ರಣ ಹಾಕುವಂತೆ ಹಾಗೂ ಬ್ಯಾಂಕ್, ವಿಮೆ, ಆರೋಗ್ಯ, ಶಿಕ್ಷಣ ಖಾಸಗೀಕರಣ ನಿಲ್ಲಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.