ಮಳವಳ್ಳಿ ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಕೆ.ಎಸ್.ಗುರುಪ್ರಸಾದ್ , ಎಚ್.ಬಿ. ಶಿವಸ್ವಾಮಿ, ಎವಿಟಿ ಕುಮಾರ್, ಮಲ್ಲೇಶ್, ನಟರಾಜಮೂರ್ತಿ, ಜಗದೀಶ್ ಇದ್ದರು.
ಮಳವಳ್ಳಿ: ರೇಣುಕಾಚಾರ್ಯರು ‘ಸಿದ್ಧಾಂತ ಶಿಖಾಮಣಿ’ ಎಂಬ ಗ್ರಂಥ ರಚಿಸುವ ಮೂಲಕ ಶೈವ ತತ್ವವನ್ನು ಜನಸಾಮಾನ್ಯರಿಗೆ ತಲುಪಿಸಿದರು ಎಂದು ಪೂರಿಗಾಲಿ ಒಡೆಯರ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಬಳಿ ಮಂಗಳವಾರ ವೀರಶೈವ ಲಿಂಗಾಯಿತ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಷ್ಟಲಿಂಗ ಧಾರಣೆ ಮೂಲಕ ವೈಯಕ್ತಿಕ ಭಕ್ತಿಯನ್ನು ಒತ್ತಿ ಹೇಳುವುದರ ಜತೆಗೆ ಸಮಾನತೆ ಮತ್ತು ಸಹಬಾಳ್ವೆಯ ತತ್ವವನ್ನು ಬೋಧಿಸಿದರು. ಲಿಂಗಾಯತ ಮತ್ತು ವೀರಶೈವ ಸಮುದಾಯಗಳು ಸಮಾನತೆ, ಶೈವಭಕ್ತಿ ಮತ್ತು ಸಾಮರಸ್ಯವನ್ನು ಸ್ಮರಿಸುತ್ತಾರೆ. ರೇಣುಕಾಚಾರ್ಯರ ಜನ್ಮ ದಿನಾಂಕವು ಐತಿಹಾಸಿಕ ದಾಖಲೆಗಳಲ್ಲಿ ಸ್ಪಷ್ಟವಾಗಿಲ್ಲದ ಕಾರಣ, ಪುರಾಣ ಮತ್ತು ಆಗಮ ಗ್ರಂಥಗಳ ಆಧಾರದ ಮೇಲೆ ನಿರ್ಧರಿಸಲಾಗಿದೆ ಎಂದರು.
ವೀರಶೈವ ಸಂಪ್ರದಾಯದಲ್ಲಿ ಅವರು ಕಲಿಯುಗದಲ್ಲಿ ರೇವಣಸಿದ್ಧರೆಂದು ಕರೆಯಲ್ಪಡುತ್ತಾರೆ ಮತ್ತು ಕೊಲ್ಲಿಪಾಕಿಯ ಸೋಮೇಶ್ವರ ಲಿಂಗದಿಂದ ಲಿಂಗೋದ್ಭವವಾಗಿ ಜನಿಸಿದ್ದಾರೆ ಎಂಬ ನಂಬಿಕೆಯಿದೆ. ಐತಿಹಾಸಿಕ ದಾಖಲೆಗಳ ಅಭಾವದಿಂದಾಗಿ ಸರ್ಕಾರವು 2022ರಲ್ಲಿ ಮಾ.16 ಅನ್ನು ಅಧಿಕೃತ ಜಯಂತಿ ದಿನವೆಂದು ಘೋಷಿಸಿತು ಎಂದರು.
ಕಾರ್ಯಕ್ರಮದಲ್ಲಿ ವೀರಶೈವ ಮಹಾಸಭ ತಾಲೂಕು ಅಧ್ಯಕ್ಷ ಮೂರ್ತಿ, ಬಸವಕೇಂದ್ರ ತಾಲೂಕು ಅಧ್ಯಕ್ಷ ತೊಟ್ಟಿಮನೆ ಚನ್ನಪ್ಪ, ಮುಖಂಡರಾದ ಕೆ.ಎಸ್.ಗುರುಪ್ರಸಾದ್, ಶಿವಸ್ವಾಮಿ, ಕೃಷ್ಣಶೆಟ್ಟಿ, ದಯಾಶಂಕರ್, ಆರ್.ಎನ್.ವಿಶ್ವಾಸ್, ಮಹೇಶ್ ಕುಮಾರ್, ಮಲ್ಲೇಶ್, ಎವಿಟಿ ಕುಮಾರ್, ಪರಶಿವಮೂರ್ತಿ ಇತರರು ಇದ್ದರು.