ಶ್ರೀರಂಗಪಟ್ಟಣದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮವನ್ನು ನ್ಯಾಯಾಧೀಶೆ ಡಿ.ಜ್ಯೋತ್ಸ್ನಾ ಉದ್ಘಾಟಿಸಿದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಈ.ಮೋಹನ್‌ಗೌಡ, ತಹಸೀಲ್ದಾರ್ ಚೇತನಾ ಯಾದವ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಇತರರು ಇದ್ದರು.
- protect the earth
- World Earth Day
ಶ್ರೀರಂಗಪಟ್ಟಣ: ಕೃಷಿ ಕಾಯಕದೊಂದಿಗೆ ಭೂಮಿ ತಾಯಿಯ ಸೇವೆ ಮಾಡುವುದು ಅತ್ಯಂತ ಸಂತಸ ಹಾಗೂ ಸಾರ್ಥಕದ ಕಾರ್ಯವಾಗಿದ್ದು, ನನಗೂ ರೈತಾಪಿ ಜೀವನ ಅತ್ಯಂತ ಪ್ರಿಯ ಎಂದು 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಡಿ.ಜ್ಯೋತ್ಸ್ನಾ ತಿಳಿಸಿದರು.
ಪಟ್ಟಣದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಕಲ ಜೀವರಾಶಿಗಳಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನೀರು, ಗಾಳಿ, ಆಹಾರ, ಆಶ್ರಯ ನೀಡಿ ಸಾಕಿ ಸಲಹುತ್ತಿರುವ ಭೂಮಿಯನ್ನು ಸ್ಮರಿಸಿ ಬಾಳಬೇಕಿರುವುದು ಮನುಷ್ಯ ಧರ್ಮವಾಗಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಇಂತಹ ಭೂಮಿಯನ್ನು ಪ್ರಕೃತಿದತ್ತವಾಗಿ ದೊರೆತ ಎಲ್ಲ ಸಂಪನ್ಮೂಲಗಳನ್ನು ಕಲುಷಿತಗೊಳಿಸುತ್ತಿರುವುದು ವಿಪರ್ಯಾಸದ ಸಂಗತಿ. ಇವುಗಳಿಂದ ಭೂಮಿಯನ್ನು ರಕ್ಷಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಈ.ಮೋಹನ್‌ಗೌಡ ಮಾತನಾಡಿ, ರೈತರು ಕೃಷಿ ಚಟುವಟಿಕೆಯಲ್ಲಿ ಸಾಧ್ಯವಾದಷ್ಟು ರಾಸಾಯನಿಕ ಬಳಕೆ ಕಡಿಮೆ ಮಾಡಿ. ಸಾವಯುವ ಕೃಷಿ ಮೂಲಕ ಭೂಮಿಯ ಫಲವತ್ತತೆ ಹೆಚ್ಚಿಸಿ. ಇದರಿಂದ ನಿಮ್ಮ ಖರ್ಚಿನ ಮಟ್ಟ ಕಡಿಮೆಯಾಗಿ, ಆದಾಯ ಹೆಚ್ಚಲಿದೆ ಎಂದು ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಚೇತನಾ ಯಾದವ್ ಮಾತನಾಡಿದರು. ಇಲವಾಲದ ಎಲೆಚೇನಹಳ್ಳಿ ತೋಟಗಾರಿಕೆ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಎಚ್.ಸಿದ್ದಪ್ಪ ನೆರೆದಿದ್ದ ರೈತರಿಗೆ ತೆಂಗು ಮತ್ತು ತರಕಾರಿ ಬೆಳೆಗಳಿಗೆ ಕೃಷಿಯಲ್ಲಿ ಬಳಸುವ ಕ್ರಿಮಿನಾಶಕಗಳಿಂದಾಗುವ ಹಾನಿ ಹಾಗೂ ಮಣ್ಣಿನ ರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ, ರೇಷ್ಮೆ ಇಲಾಖೆಯ ತಾಲೂಕು ಅಧಿಕಾರಿ ಸಿ.ಆರ್.ಕೃಷ್ಣ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಮರೀಗೌಡ, ಕಾರ್ಯದರ್ಶಿ ದಿನೇಶ್ ಸೇರಿದಂತೆ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.