ವಿಶ್ವ ಹಿಂದು ಪರಿಷತ್ ಆಕ್ರೋಶ
- ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಮಾಜಿ ಸಂಸದ ಅನಂತಕುಮಾರ್ ಹೆಗಡೆ
- ನಗರದ ಪೊಲೀಸರ ಕ್ರಮ ಸರಿಯಲ್ಲ
ಮದ್ದೂರು: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಮಾಜಿ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಪ್ರಕರಣ ದಾಖಲು ಮಾಡಿರುವ ನಗರದ ಪೊಲೀಸರ ಕ್ರಮ ಸರಿಯಲ್ಲ ಎಂದು ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ವೀರಭದ್ರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಾ.23ರಂದು ವಿವಿಧ ಹಿಂದು ಪರ ಸಂಘಟನೆಗಳಿಂದ ಬಲಿದಾನ್ ದಿವಸ್ ಅನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದ್ದು, ಸ್ವಾತಂತ್ರೃ ಹೋರಾಟಗಾರರ ತ್ಯಾಗದ ಸ್ಮರಣೆಗಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತೆ ಹೊರತು ಬೇರೆ ಉದ್ದೇಶದಿಂದಲ್ಲ. ಹೀಗಿದ್ದರೂ ಇಬ್ಬರು ಮಹಾನ್ ನಾಯಕರ ವಿರುದ್ಧ ಪೊಲೀಸರೇ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲು ಮಾಡಿ ಸರ್ಕಾರದ ಏಜೆಂಟ್‌ಗಳಂತೆ ವರ್ತಿಸುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಹಿಂದೂಪರ ಸಂಘಟನೆ ವಕ್ತಾರ ಜಗನ್ನಾಥ್ ಮಾತನಾಡಿ, ಬಲಿದಾನ ದಿವಸ್ ಕಾರ್ಯಕ್ರಮ ಆಯೋಜನೆ ಮಾಡುವ ಮೊದಲು ನಗರದಾದ್ಯಂತ ಫ್ಲೆಕ್ಸ್ ಅಳವಡಿಸಲು ನಗರಸಭೆಯಲ್ಲಿ ಅನುಮತಿ ಪಡೆಯಲಾಗಿತ್ತು. ಕಾರ್ಯಕ್ರಮ ಮುಗಿದ ಕೆಲ ಗಂಟೆಗಳಲ್ಲೇ ರಾತ್ರೋರಾತ್ರಿ ಅವುಗಳನ್ನು ತೆರವು ಮಾಡಿರುವ ಕ್ರಮ ಸರಿಯಲ್ಲ ಎಂದು ಎಂದು ನಗರಸಭಾ ಅಧಿಕಾರಿಗಳ ವಿರುದ್ಧ ಬೇಸರವ್ಯಕ್ತಪಡಿಸಿದರು.
ರಾಜಕೀಯ ವ್ಯಕ್ತಿಗಳು, ಅವರ ಬೆಂಬಲಿಗರು ಹಾಕಿರುವ ಫ್ಲೆಕ್ಸ್‌ಗಳು ತಿಂಗಳುಗಟ್ಟಲೇ ಇದ್ದರೂ ಅದನ್ನು ತೆರವು ಮಾಡಿಲ್ಲ. ಬಲಿದಾನ್ ಅಂಗವಾಗಿ ಅಳವಡಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಪೋಸ್ಟರ್‌ಗಳನ್ನು ನಗರಸಭೆ ಹಾಗೂ ಪೋಲೀಸ್ ಅಧಿಕಾರಿಗಳು ತೆರವುಗೊಳಿಸಿರುವುದು ಸರಿಯಲ್ಲ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಸನಗೌಡ ಪಾಟೀಲ ಯತ್ನಾಳ್, ಅನಂತಕುಮಾರ್ ಹೆಗಡೆ ಅವರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಈ ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಹಿಂದೂ ಪರ ಸಂಘಟನೆಗಳ ಮುಖಂಡರಾದ ಅನಿಲ್, ಗಿರೀಶ್ ಸುದ್ದಿಗೋಷ್ಠಿಯಲ್ಲಿದ್ದರು.