ಕೆ.ಆರ್.ಪೇಟೆ ಪಟ್ಟಣದ ಪುರಸಭಾ ಮೈದಾನದಲ್ಲಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ದಕ್ಷಿಣ ಕರ್ನಾಟಕ ಹಿಂದೂ ಮಹಾಸಭಾದ ಪ್ರಾಂತೀಯ ಸಹ ಸಂಚಾಲಕ ಮಹೇಶ್ ಕಡಗದಾಳು ಮಾತನಾಡಿದರು. ಕೆ.ಕಾಳೇಗೌಡ, ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ ಇದ್ದರು.
- ಮಹೇಶ್ ಕಡಗದಾಳು ಅಭಿಪ್ರಾಯ
- ಬೃಹತ್ ಶೋಭಾಯಾತ್ರೆ
ಕೆ.ಆರ್.ಪೇಟೆ: ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಅಂಗವಾಗಿ ಬುಧವಾರ ಪಟ್ಟಣದ ನಾಗಮಂಗಲ ರಸ್ತೆಯಲ್ಲಿರುವ ಶ್ರೀ ಪ್ರಸನ್ನ ಆಂಜನೇಯ ದೇಗುಲದಿಂದ ಪುರಸಭೆ ಮೈದಾನದವರೆಗೆ ಬೃಹತ್ ಶೋಭಾಯಾತ್ರೆ ನಡೆಸಲಾಯಿತು.
ಪಟ್ಟಣದ ಎಲ್ಲ ಬೀದಿಗಳಲ್ಲಿ ಕೇಸರಿ ಧ್ವಜಗಳು ಹಾರಾಡಿದವು. ಯುವಕರು ತಮ್ಮ ತಮ್ಮ ಗ್ರಾಮಗಳಿಂದ ಎತ್ತಿನ ಗಾಡಿಗಳ ಮೂಲಕ ಆಗಮಿಸಿ ಮೆರವಣಿಗೆಗೆ ಕಳೆ ತುಂಬಿದರು. ಜಾನಪದ ಕಲಾ ತಂಡಗಳು ಮೆರವಣಿಗೆಯ ಅಂದವನ್ನು ಹೆಚ್ಚಿಸಿದವು.
ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ದಕ್ಷಿಣ ಕರ್ನಾಟಕ ಹಿಂದೂ ಮಹಾಸಭಾದ ಪ್ರಾಂತೀಯ ಸಹ ಸಂಚಾಲಕ ಮಹೇಶ್ ಕಡಗದಾಳು ಮಾತನಾಡಿ, ಭಾರತ ದೇಶದ ಹಿಂದೂ ಸಂಸ್ಕೃತಿಯು ವಿಶ್ವ ಮಾನ್ಯತೆ ಪಡೆದುಕೊಂಡಿದೆ. ಹಿಂದೂ ಧರ್ಮದ ಮಹತ್ವ ಮತ್ತು ಅಗತ್ಯತೆಯನ್ನು ವಿಶ್ವವೇ ಪ್ರತಿಪಾದಿಸುತ್ತಿವೆ. ಹಲವು ಅಪಮಾನ, ಕಷ್ಟಗಳನ್ನು ಸಹಿಸಿಕೊಂಡು ಛಲ ಬಿಡದೆ ಡಾ.ಕೇಶವ ಬಲಿರಾಮ್ ಹೆಡ್ಗೆವಾರ್ ಈ ಬಲಿಷ್ಠ ಸಂಘಟನೆ ಕಟ್ಟಲು ಶ್ರಮಿಸಿದರು. ಇದರ ಪರಿಣಾಮವಾಗಿ ಹಿಂದೂಗಳು ಬಲಿಷ್ಠರಾಗಿದ್ದಾರೆ ಎಂದರು.
ಹಿಂದುತ್ವವನ್ನು ಅಪಮಾನಿಸುವ ಕೆಲಸವನ್ನು ಹಿಂದೂಗಳೇ ಮಾಡುತ್ತಿದ್ದಾರೆ. ಇಂತಹವರ ವಿರುದ್ಧ ನಾವು ಎಚ್ಚರಿಕೆಯಿಂದ ಇರಬೇಕು. ಇಡೀ ವಿಶ್ವಕ್ಕೆ ಹಿಂದುತ್ವ ಪರಿಚಯ ಮಾಡಿಕೊಡುವ ಕೆಲಸವನ್ನು ಆರ್‌ಎಸ್‌ಎಸ್ ಮಾಡುತ್ತಿದೆ. ಹಿಂದುತ್ವ ಹಾಗೂ ಹಿಂದೂವನ್ನು ಬಿಟ್ಟು ಈ ಭಾರತ ದೇಶವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಿಂದುತ್ವ ಎಂದರೆ ಕೇಸರಿ ಧರಿಸುವುದಷ್ಟೇ ಅಲ್ಲ. ಎಲ್ಲರೂ ನಮ್ಮವರೆ, ಎಲ್ಲವೂ ಸಮಾನರೇ ಎಂದುಕೊಂಡು ಬದುಕುವುದು. ಆದರೆ ತಪ್ಪು ಸಂದೇಶಗಳನ್ನು ಸಾರಿ ಮತಾಂತರ ಮಾಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದರು.
ತಾಲೂಕು ಹಿಂದೂ ಸಮಾಜೋತ್ಸವದ ಸಂಚಾಲಕರಾದ ಕೆ.ಕಾಳೇಗೌಡ, ತೆಂಡೆಕೆರೆ ಬಾಳೆಹೊನ್ನೂರು ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಬೆಡದಹಳ್ಳಿಯ ಪಂಚಭೂತೇಶ್ವರ ಮಠದ ಶ್ರೀರುದ್ರಮುನಿ ಸ್ವಾಮೀಜಿ, ದಕ್ಷಿಣ ಕರ್ನಾಟಕ ಹಿಂದೂ ಮಹಾಸಭಾದ ಪ್ರಾಂತೀಯ ಸಹ ಸಂಚಾಲಕ ಮಹೇಶ್ ಕಡಗದಾಳು, ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ ಬಿ.ನಂಜಪ್ಪ ಹಾಗೂ ಕೆ.ಆರ್.ಪೇಟೆಯ ಆರ್‌ಎಸ್‌ಎಸ್ ಕಾರ್ಯವಾಹಕ ರವಿ ಇತರರು ಇದ್ದರು.