ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಮಂಡ್ಯ ನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
- ನಗರದಲ್ಲಿ ವಿಶ್ವ ತಾಯಂದಿರ ದಿನಾಚರಣೆ
- ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಮತ್ತು ಚುಟುಕು ಸಾಹಿತ್ಯ ಪರಿಷತ್ ನಿಂದ ಆಯೋಜನೆ
ಮಂಡ್ಯ: ತಾಯಿಯೇ ದೇವರು. ಜಗತ್ತಿನಲ್ಲಿ ಆಕೆಯ ನಿಷ್ಕಲ್ಮಶ ಪ್ರೀತಿಗೆ ಬೆಲೆ ಕಟ್ಟಲಾಗದು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಸಲಹೆಗಾರ ಎಂ.ಗುರುಪ್ರಸಾದ್ ಹೇಳಿದರು.
ನಗರದ ಸೇವಾ ಕಿರಣ ವೃದ್ಧಾಶ್ರಮ ಸಭಾಂಗಣದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಮತ್ತು ಚುಟುಕು ಸಾಹಿತ್ಯ ಪರಿಷತ್ ಮಂಡ್ಯ ತಾಲೂಕು ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ತಾಯಂದಿರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ತನ್ನ ಮಕ್ಕಳಿಗಾಗಿ ಎಂತಹ ತ್ಯಾಗಕ್ಕೂ ಸಿದ್ಧವಿರುವ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ. ಆಕೆಯ ಪ್ರೀತಿ ವಾತ್ಸಲ್ಯವನ್ನು ಯಾವುದರಿಂದಲೂ ಅಳೆಯಲು, ಸರಿದೂಗಿಸಲು ಸಾಧ್ಯವಿಲ್ಲ. ಜಗತ್ತಿನಲ್ಲಿ ತಾಯಿಯ ನಿಷ್ಕಲ್ಮಶ ಮಮತೆಗೆ ಬೆಲೆ ಕಟ್ಟಲಾಗದು ಎಂದರು.
ದೇವರ ಪ್ರತಿರೂಪವಾದ ಇಂತಹ ತಾಯಂದಿರಿಗೆ ಗೌರವ ಸಲ್ಲಿಸಲು, ತಾಯಿಯ ಪ್ರೀತಿ ತ್ಯಾಗಕ್ಕೆ ಧನ್ಯವಾದವನ್ನು ತಿಳಿಸಲು ಪ್ರಪಂಚದಾದ್ಯಂತ ಪ್ರತಿವರ್ಷ ಮೇ ತಿಂಗಳ 2ನೇ ಭಾನುವಾರ ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು 1908ರಲ್ಲಿ ಅಮೆರಿಕದಲ್ಲಿ ಪ್ರಾರಂಭಗೊಂಡ ವಿಶ್ವ ತಾಯಂದಿರ ದಿನ ಹಂತ ಹಂತವಾಗಿ ಜಗತ್ತಿನಾದ್ಯಂತ ವಿಶೇಷವಾದ ಮಹತ್ವವನ್ನು ಪಡೆಯಿತು. ಇಂದಿಗೂ ತಾಯಿಯರನ್ನು ಜಗತ್ತಿನಾದ್ಯಂತ ಗೌರವಿಸುವುದು ನಮ್ಮಗಳೆಲ್ಲರ ಆದ್ಯ ಕರ್ತವ್ಯ. ಇದನ್ನು ಕೇವಲ ಒಂದು ದಿವಸಕ್ಕೆ ಸೀಮಿತಗೊಳಿಸದೆ ದಿನನಿತ್ಯ ತಾಯಿಯನ್ನು ಗೌರವಿಸುವುದು, ಅವರನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಸೇವೆ ಮತ್ತು ಸಂತೋಷವಾಗಿಡುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.
ವೈದ್ಯ ಡಾ.ಎಚ್.ಸಿ.ಆನಂದ್ ಮಾತನಾಡಿ, ತಾಯಂದಿರನ್ನು ಪ್ರತಿಯೊಬ್ಬರೂ ಗೌರವಿಸಿದಾಗ ಮಾತ್ರ ಸದೃಢ ಸಂಸ್ಕಾರ ಸಮಾಜವಾಗಲು ಸಾಧ್ಯ. ತಂದೆ, ತಾಯಿ ದೇವರಿದ್ದಂತೆ. ತಾಯಂದಿರು ಬದುಕಿದ್ದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಅವರಿಗೆ ಪ್ರೀತಿ, ವಿಶ್ವಾಸ, ಗೌರವ ಸಲ್ಲಿಸಬೇಕು. ನಾವು ವಿಶ್ವ ತಾಯಂದಿರ ದಿನ ಆಚರಣೆ ಮಾಡುತ್ತಿದ್ದು, ಜನಸಾಮಾನ್ಯರಿಗೆ ಅರಿವು ಮೂಡಿಸುವುದು ನಮ್ಮ ಸಂಘಟನೆಯ ಉದ್ದೇಶ. ತಾಯಂದಿರನ್ನು ಪ್ರತಿಯೊಬ್ಬರೂ ಗೌರವಿಸಿದಾಗ ಮಾತ್ರ ಸದೃಢ ಸಂಸ್ಕಾರ ಸಮಾಜವಾಗಲು ಸಾಧ್ಯ ಎಂದು ಸ್ಮರಿಸಿದರು.
ಸೇವಾಕಿರಣ ವೃದ್ಧಾಶ್ರಮದ ಟ್ರಸ್ಟಿ ಜಿ.ವಿ.ಕುಮಾರ್, ನಿವೃತ ತಹಸೀಲ್ದಾರ್ ಕೆ.ಬಿ.ಪಾಪಣ್ಣ, ಕಸಿವೇ ರಾಜ್ಯಾಧ್ಯಕ್ಷ ಪೋತೇರ ಮಹದೇವು, ಮೈಸೂರು ಘಟಕದ ಅಧ್ಯಕ್ಷೆ ಮಂಜುಳಾ ರಮೇಶ್, ಪಾಪಣ್ಣ ಇದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವಸಂತಾ ನಾಗಲಿಂಗೇಗೌಡ, ಪದ್ಮಾವತಿ ಬೆಟ್ಟಯ್ಯ, ಎ.ಸಿ.ಶೋಭಾ, ಎಂ.ಜೆ.ಲೀಲಾವತಿ ಅವರಿಗೆ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಆಶ್ರಮವಾಸಿಗಳಿಗೆ ಹಣ್ಣು-ಹಂಪಲು ನೀಡಲಾಯಿತು.