ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ(ಮೂಲ ಸಂಘಟನೆ) ಕಾರ್ಯಕರ್ತರು ಶನಿವಾರ ತಾಲೂಕಿನ ಟಿ.ಕಾಗೇಪುರ ಬಳಿ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ತಮಿಳುನಾಡಿಗೆ ಕೆ.ಆರ್.ಎಸ್.ಜಲಾಶಯದಿಂದ ಪ್ರತಿದಿನ 3,500 ಕ್ಯೂಸೆಕ್ ಕಾವೇರಿ ನೀರು ಹರಿಸಬೇಕು ಎಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ವಿರೋಧಿಸಿ ರಾಜ್ಯ ರೈತ ಸಂಘ(ಮೂಲ ಸಂಘಟನೆ)ಯ ಕಾರ್ಯಕರ್ತರು ಶನಿವಾರ ತಾಲೂಕಿನ ಟಿ.ಕಾಗೇಪುರ ಬಳಿ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟಿಸಿದರು.
ಟಿ.ಕಾಗೇಪುರದಲ್ಲಿರುವ ಕಾವೇರಿ ನೀರಾವರಿ ನಿಗಮದ ಕಚೇರಿ ಬಳಿಗೆ ತೆರಳಿದ ಕಾರ್ಯಕರ್ತರು ಅಲ್ಲಿ ಸಮಾವೇಶಗೊಂಡು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಲಿಂಗೇಗೌಡ ಮಾತನಾಡಿ, ತೀವ್ರ ಬರಗಾಲದಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದು, ಕಾವೇರಿ ಕೊಳ್ಳದ ಜಲಾಶಯಗಳು ಇನ್ನೂ ಭರ್ತಿಯಾಗಿಲ್ಲ. ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಹಲವು ನಗರ ಪ್ರದೇಶಗಳಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಲಿದೆ. ನಮ್ಮಲ್ಲಿ ಜನ-ಜಾನುವಾರುಗಳ ಬಳಕೆಗಾಗಿ ಕೆರೆ-ಕಟ್ಟೆಗಳನ್ನು ತುಂಬಿಸಲೂ ನೀರು ಬಿಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿಸುವ ನಿರ್ದೇಶನ ಸರಿಯಲ್ಲ ಎಂದು ಕಿಡಿ ಕಾರಿದರು.
ರಾಜ್ಯ ಸರ್ಕಾರ ಏನಾದರೂ ನೀರು ಹರಿಸಲು ಮುಂದಾದರೆ ನಮ್ಮ ಹೋರಾಟದ ಸ್ವರೂಪವೇ ಬದಲಾಗಲಿದೆ ಎಂದರು. ಭಾನುವಾರ ನಡೆಯುವ ಸರ್ವಪಕ್ಷ ಸಭೆಯಲ್ಲಿ ನೀರು ಹರಿಸದಂತೆ ಕೇಂದ್ರದ ಮೇಲೆ ಒತ್ತಡ ಹೇರುವ ನಿರ್ಣಯ ಕೈಕೊಳ್ಳಬೇಕು. ಇಲ್ಲವಾದಲ್ಲಿ ಹೋರಾಟದ ಕಿಚ್ಚು ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಮುಖಂಡ ಸೊ.ಸಿ.ಪ್ರಕಾಶ್ ಮಾತನಾಡಿ, ಕೆ.ಆರ್.ಎಸ್, ಕಬನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ಒಟ್ಟು 36 ಟಿಎಂಸಿ ನೀರಿದೆ. ಆದರೆ, ಅದನ್ನು ಗಮನಿಸಿದ ಪ್ರಾಧಿಕಾರ ಏಕಪಕ್ಷೀಯವಾಗಿ ತಮಿಳುನಾಡಿಗೆ ನೀರು ಹರಿಸಿ ಎನ್ನುವುದು ಸರಿಯಲ್ಲ, ಬಂಗಾರಪ್ಪ ಅವರಂತೆ ಡಿ.ಕೆ.ಶಿವಕುಮಾರ್ ಸಹ ಕಠಿಣ ನಿಲುವು ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.
ತಾಲೂಕು ಘಟಕದ ಅಧ್ಯಕ್ಷ ದೇವಿಪುರ ಬಸವರಾಜು ಮಾತನಾಡಿ, ಪ್ರಭುಲಿಂಗು, ಶಿವನಂಜು, ಭೂಮಿಗೌಡ, ಚೌಡೇಗೌಡ, ಮಲ್ಲೇಶ್, ಗಿರೀಶ್, ಹನುಮಂತ, ಕೃಷ್ಣ, ಲಿಂಗಪಟ್ಟಣ ಬಸವರಾಜು, ಮಹೇಶ್ ಇತರರಿದ್ದರು.