ಮಂಡ್ಯ ತಾಲೂಕು ಹನಕೆರೆ ಗ್ರಾಮದಲ್ಲಿ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿಯನ್ನು ಶಾಸಕ ಪಿ.ರವಿಕುಮಾರ್ ಗಣಿಗ ಪರಿಶೀಲಿಸಿದರು.
- ಹನಕೆರೆ ಗ್ರಾಮದಲ್ಲಿ ಸ್ಥಳ ಪರಿಶೀಲನೆ
- ಸ್ಥಳೀಯರು ಹೇಳಿರುವ ಜಾಗದಲ್ಲಿಯೇ ಕಾಮಗಾರಿ ಆಗಬೇಕು
ಮಂಡ್ಯ: ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಾಲೂಕಿನ ಹನಕೆರೆ ಗ್ರಾಮದಲ್ಲಿ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿಯನ್ನು ಸ್ಥಳೀಯರು ಹೇಳಿರುವ ಜಾಗದಲ್ಲಿಯೇ ಮಾಡಬೇಕು. ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಸೂಚನೆ ನೀಡಿದರು.
ಹನಕೆರೆ ಗ್ರಾಮದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಅವರು, ಈ ಬಗ್ಗೆ ಹಲವು ಬಾರಿ ಚರ್ಚೆಯಾಗಿದೆ. ಕೆಡಿಪಿ ಹಾಗೂ ದಿಶಾ ಸಭೆಯಲ್ಲಿ ಮಾತನಾಡಲಾಗಿದೆ. ಗ್ರಾಮದಿಂದ ದೂರದಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡಿದರೆ ಉಪಯೋಗವಿಲ್ಲ. ಜತೆಗೆ ಜನರಿಗೆ ಅನಾನೂಕೂಲ. ಆದ್ದರಿಂದ ಕಾಮಗಾರಿ ಮಾಡಿದರೂ ವ್ಯರ್ಥ ಎನಿಸುತ್ತದೆ ಎಂದರು.
ಗ್ರಾಮದಿಂದ ನೂರು ಮೀಟರ್ ದೂರದಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡಿದರೆ ಯಾರು ಬಳಕೆ ಮಾಡುವುದಿಲ್ಲ. ಇದೇ ಕಾರಣಕ್ಕೆ ಸ್ಥಳೀಯರು ಗ್ರಾಮದಲ್ಲಿಯೇ ಮಾಡಬೇಕೆನ್ನುತ್ತಿದ್ದಾರೆ. ಈ ಬೇಡಿಕೆ ಹಲವು ವರ್ಷದಿಂದ ಇದೆ. ಆದ್ದರಿಂದ ಅದಕ್ಕೆ ತಕ್ಕಂತೆಯೇ ಪರಿಶೀಲನೆ ಮಾಡಬೇಕು. ಹಿಂದೆ ಈ ಯೋಜನೆಗೆ ಎಂಟು ಕೋಟಿ ರೂ ನಿಗದಿಪಡಿಸಲಾಗಿತ್ತು. ಆದರೀಗ ಮೂರು ಕೋಟಿ ರೂ ನಿಗದಿಯಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಕೊಡಬೇಕು. ಮುಖ್ಯವಾಗಿ ಸ್ಥಳೀಯರಿಗೆ ಅನುಕೂಲವಾಗುವಂತೆಯೇ ಕಾಮಗಾರಿ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಪರಿಶೀಲನೆ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ, ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕ ಗಂಗಾಧರ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಸಮಯದಲ್ಲಿ ಸ್ಥಳೀಯರು ಅಂಡರ್‌ಪಾಸ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಮ್ಮ ಮಾಹಿತಿ ಹಂಚಿಕೊಳ್ಳುವ ಜತೆಗೆ ಗ್ರಾಮದಲ್ಲಿಯೇ ಕಾಮಗಾರಿ ಆಗಬೇಕೆಂದು ಒತ್ತಾಯಿಸಿದರು.