ಮಂಡ್ಯ ನಗರದ ಮನುಗನಹಳ್ಳಿಯಲ್ಲಿ ವಸತಿ ಸಮುಚ್ಚಯಗಳನ್ನು ಹೈಕೋರ್ಟ್ ನ್ಯಾಯಮೂರ್ತಿ ಸುನಿಲ್‌ದತ್ ಯಾದವ್ ಪರಿಶೀಲಿಸಿದರು.
- ಮಂಡ್ಯದಲ್ಲಿ ನ್ಯಾಯಾಲಯ ಸಂಕೀರ್ಣ
- ಜಾಗ ಪರಿಶೀಲಿಸಿದ ನ್ಯಾಯಮೂರ್ತಿ
- ಮದ್ದೂರು ನಗರಕ್ಕೂ ಭೇಟಿ
ಮಂಡ್ಯ: ಮಂಡ್ಯ ನ್ಯಾಯಾಲಯ ಸಂಕೀರ್ಣಕ್ಕೆ ಮಂಜೂರಾಗಿರುವ ಜಾಗ ಮತ್ತು ನ್ಯಾಯಾಧೀಶರ ವಸತಿ ಸಮುಚ್ಚಗಳನ್ನು ಹೈಕೋರ್ಟ್ ನ್ಯಾಯಮೂರ್ತಿ ಸುನಿಲ್‌ದತ್ ಯಾದವ್ ಅವರು ಶನಿವಾರ ಪರಿಶೀಲನೆ ನಡೆಸಿದರು.
ನ್ಯಾಯಾಧೀಶರಿಗೆ ಸಂಬಂಧಪಟ್ಟಂತೆ ನಗರದ ಮನುಗನಹಳ್ಳಿಯಲ್ಲಿ ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡಲಾಗಿದ್ದು, ವಸತಿ ಸಮುಚ್ಚಗಳ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 5 ಕೋಟಿ ರೂ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆ ಜಾಗಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಸುನಿಲ್‌ದತ್ ಯಾದವ್ ಅವರು ಭೇಟಿ ನೀಡಿ ಕಟ್ಟಡದ ವಿನ್ಯಾಸ ಮತ್ತು ಉಳಿಕೆ ಕಾಮಗಾರಿಗಳು ಹಾಗೂ ಪಾರ್ಕಿಂಗ್ ವ್ಯವಸ್ಥೆ ವೀಕ್ಷಿಸಿದರು.
ಜಿಲ್ಲೆಯಲ್ಲಿರುವ ಏಳು ಸಿವಿಲ್ ನ್ಯಾಯಾಲಯ ಸಂಕೀರ್ಣಕ್ಕೆ ಸಂಬಂಧಪಟ್ಟಂತೆ ಕೃಷಿ ಇಲಾಖೆಗೆ ಸೇರಿದ 22.12 ಗುಂಟೆ ಜಾಗವನ್ನು ಈಗಾಗಲೇ ಗುರುತಿಸಲಾಗಿದೆ. ಆ ಜಾಗದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಮಾಡಲು 25 ಕೋಟಿ ರೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ನ್ಯಾಯಮೂರ್ತಿಗೆ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್, ತಹಸೀಲ್ದಾರ್ ವಿಶ್ವನಾಥ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ, ಪ್ರಧಾನ ಕಾರ್ಯದರ್ಶಿ ಸತೀಶ್ ಇತರರಿದ್ದರು.
ಮದ್ದೂರಿನಲೂ ಪರಿಶೀಲನೆ: ನ್ಯಾಯಮೂರ್ತಿ ಸುನಿಲ್‌ದತ್ ಯಾದವ್ ಅವರು ಮದ್ದೂರು ನ್ಯಾಯಾಲಯಕ್ಕೆ ಸಂಬಂಧಪಟ್ಟ ಕಾಮಗಾರಿಗಳ ಪರಿಶೀಲನೆ ನಡೆಸಿದರು. ನಗರದ ಸರ್ವೆ ನಂ. 800/1, 800/3, 801/1 ರೇಷ್ಮೆ ಇಲಾಖೆಯ ವ್ಯಾಪ್ತಿಗೆ ಬರುವ 4.35 ಎಕರೆ ಜಾಗವನ್ನು ಗುರುತಿಸಿ ನ್ಯಾಯಾಲಯ ನಿರ್ಮಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸ್ಥಳವನ್ನು ಹಸ್ತಾಂತರಿಸಲಾಗಿದೆ. ಸದರಿ ಜಾಗದಲ್ಲಿ 21 ಕೋಟಿ ರೂ ವೆಚ್ಚದಲ್ಲಿ ನ್ಯಾಯಾಲಯ ಸಂಕೀರ್ಣ ಮತ್ತು ನ್ಯಾಯಾಧೀಶರ ವಸತಿಗೃಹಗಳ ನಿರ್ಮಾಣ ಕಾಮಗಾರಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.