ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ 
ಮಂಡ್ಯ

ಎಚ್ಡಿಕೆ ಇನ್ನಾದರೂ ಸಬೂಬು ಹೇಳದಿರಲಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಕೈಗಾರಿಕೆ ಭೂಮಿ ಒದಗಿಸಲು ರಾಜ್ಯಸರ್ಕಾರ ಬದ್ಧ
  • ಜಿಲ್ಲೆಯ ನಿರುದ್ಯೋಗಿ ಯುವಕರ ನೆರವಿಗೆ ಮುಂದಾಗಲಿ
ಮಂಡ್ಯ: ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಅಗತ್ಯ ಭೂಮಿ ನೀಡಲು ಬದ್ಧವೆಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ರಾಜ್ಯ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನಡೆ ಸ್ವಾಗತಾರ್ಹ. ಅಂತೆಯೇ ಇನ್ನಾದರೂ ಎಚ್‌ಡಿಕೆ ಅವರು ಯಾವುದೇ ಸಬೂಬು ಹೇಳದೆ ಕೈಗಾರಿಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಜಿಲ್ಲೆಯ ನಿರುದ್ಯೋಗಿಗಳ ಯುವಕರ ನೆರವಿಗೆ ಮುಂದಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದ್ದಾರೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕಳೆದ ಮೂರು ದಿನದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಉದ್ದೇಶಿತ ಯೋಜನೆ ಜಾರಿ ಮಾಡಲು ನೂರು ಎಕರೆ ಭೂಮಿ ಅಗತ್ಯವಿದೆ ಅದಷ್ಟು ಬೇಗ ಭೂಮಿ ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಅದರಂತೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 500 ಕೋಟಿ ರೂ ವೆಚ್ಚದಲ್ಲಿ ಆಟೋಮೋಟಿವ್ ರಿಸರ್ಚ್ ಆಸೋಸಿಯೇಷನ್ ಆಫ್ ಇಂಡಿಯಾ ಸಂಶೋಧನಾ ಕೇಂದ್ರ ತೆರೆಯಲು 105 ಎಕರೆ ಭೂಮಿ ನೀಡಲು ರಾಜ್ಯ ಸರ್ಕಾರ ಸಿದ್ದವಿದೆ. ಈ ಸಂಬಂಧ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಎಚ್‌ಡಿಕೆ ಅವರ ಪತ್ರ ಕುರಿತಂತೆ ರಾಜ್ಯ ಸರ್ಕಾರ, ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ವಿಳಂಬ ಮಾಡದಂತೆ ಅಗತ್ಯ ಭೂಮಿ ಗುರುತಿಸುವಂತೆ ಸೂಚನೆ ನೀಡಲಾಗಿತ್ತು. ಈ ಸೂಚನೆಯಂತೆ ಜಿಲ್ಲಾಧಿಕಾರಿ ಮಂಡ್ಯ ತಾಲೂಕು ಬಸರಾಳು ಹೋಬಳಿಯ ಮುದ್ದನಘಟ್ಟ ಮತ್ತು ಹೆಗ್ಗಡಹಳ್ಳಿ ಬಳಿ 105 ಎಕರೆ ಸರ್ಕಾರಿ ಭೂಮಿ ಖಾಲಿ ಇರುವುದಾಗಿ ತಿಳಿಸಿದ್ದಾರೆ. ಈ ಭೂಮಿಯು ನಾಗಮಂಗಲ- ಮಂಡ್ಯ ರಾಜ್ಯ ಹೆದ್ದಾರಿಗೆ ಕೇವಲ 500 ಮೀಟರ್ ದೂರದಲ್ಲಿರುವುದಾಗಿ ಮಾಹಿತಿ ನೀಡಿದ್ದಾರೆ.
ರಾಜ್ಯ ಸರ್ಕಾರ ಕೇಂದ್ರದಿಂದ ಕೈಗಾರಿಕೆ ಸ್ಥಾಪಿಸಲು ಅಗತ್ಯ ಭೂಮಿ ನೀಡುತ್ತಿಲ್ಲ. ರಾಜ್ಯದ ಯಾವ ಸಚಿವರು ನನಗೆ ಮನವಿ ಮಾಡಿಲ್ಲವೆಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಆರೋಪಿಸುತ್ತಿದ್ದರು. ಆದರೆ ರಾಜ್ಯ ಸರ್ಕಾರ ಅಧಿಕೃತವಾಗಿ ಪತ್ರ ಬರೆದು ತಾವು ಉದ್ದೇಶಿಸಿರುವ ಕೈಗಾರಿಕೆಗೆ ಅಗತ್ಯ ಭೂಮಿ ನೀಡುವುದಾಗಿ ಭರವಸೆ ನೀಡಿದೆ. ಆದ ಕಾರಣ ಆಟೋಮೋಟಿವ್ ರಿಸರ್ಚ್ ಅಸೋಷಿಯನ್ ಆಫ್ ಇಂಡಿಯಾ, ಕೇಂದ್ರ ಸರ್ಕಾರದ ತಂಡ ಜಂಟಿಯಾಗಿ ರಾಜ್ಯಕ್ಕೆ ಭೇಟಿ ನೀಡಲಿ. ಉದ್ದೇಶಿತ ಜಾಗ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಭೇಟಿ ಮಾಡಿ ಅಗತ್ಯ ನೆರವು ಪಡೆದುಕೊಳ್ಳಲಿ ಎಂದು ತಿಳಿಸಿದ್ದಾರೆ.