ಮಂಡ್ಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ ಸೈನಿಕ ಅಲೋಕ್‌ಕುಮಾರ ಪಾಂಡೆ ಅವರನ್ನು ಸನ್ಮಾನಿಸಲಾಯಿತು.
- ನಗರದಲ್ಲಿ ಭಾರತೀಯ ಸೇನಾ ದಿನ
- ನಿವೃತ ಸೈನಿಕ ಅಲೋಕ್‌ಕುಮಾರ ಪಾಂಡೆ ಅವರಿಗೆ ಸನ್ಮಾನ
ಮಂಡ್ಯ: ದೇಶಕ್ಕಾಗಿ ಸೇವೆ ಸಲ್ಲಿಸುವ ಸೈನಿಕರು ಹಾಗೂ ಅನ್ನ ಕೊಡುವ ರೈತರೇ ನಿಜವಾದ ಹೀರೋಗಳೇ ಹೊರತು ನಟನೆ ಮಾಡುವ ಚಿತ್ರ ನಾಯಕರಲ್ಲ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.
ನಗರದ ಹೊಸಹಳ್ಳಿ ವೃತ್ತ ಸಮೀಪದ ಪಿ.ಆರ್.ಸಭಾಂಗಣದಲ್ಲಿ ಕೃಷಿಕ ಅಲಯನ್ಸ್ ಸಂಸ್ಥೆ ಅಯೋಜಿಸಿದ್ದ ಭಾರತೀಯ ಸೇನಾ ದಿನ ಹಾಗೂ ಸೈನಿಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಭಾರತ ವಿಶ್ವದಲ್ಲಿಯೇ 4ನೇ ಅತಿ ದೊಡ್ಡ ಸೈನ್ಯಬಲ ಹೊಂದಿರುವ ರಾಷ್ಟ್ರ. ಭಾರತೀಯ ಸೇನೆಯ ಅಸಾಮಾನ್ಯ ಧೈರ್ಯ, ನಿಸ್ವಾರ್ಥ ಸೇವೆಯನ್ನು ಸ್ಮರಿಸುವ ದಿನ ಇದಾಗಿದೆ. ಅವರ ಸೇವೆಯನ್ನು ನಿತ್ಯ ಸ್ಮರಿಸಿ, ಸೈನಿಕರಿಗೆ ಚೈತನ್ಯ ತುಂಬಿ ಗೌರವಿಸಬೇಕಿದೆ ಎಂದು ನುಡಿದರು.
ಸುಮಾರು 12.48 ಲಕ್ಷದಿಂದ 14.5 ಲಕ್ಷ ಸೈನಿಕರಿದ್ದಾರೆ. ಮೀಸಲು ಪಡೆಯಲ್ಲಿ ಸುಮಾರು 9 ಲಕ್ಷದಿಂದ 11.55 ಲಕ್ಷ ಇದ್ದಾರೆ. ಅರೆಸೇನಾ ಪಡೆಯಲ್ಲಿ ಸುಮಾರು 25.27 ಲಕ್ಷ ಜನ ತನ್ನ ಪ್ರಾಣ ಪಣಕ್ಕಿಟ್ಟು ನಮ್ಮ ಪ್ರಾಣ ಕಾಪಾಡುತ್ತಿದ್ದಾರೆ. ಭೂ, ವಾಯು, ಜಲ, ಅಂತರ್ಗಾಮಿ, ತಂತ್ರಜ್ಞಾನ ಹೀಗೆ ಹಲವು ವಿಭಾಗಗಳಲ್ಲಿ ಸೈನಿಕರು ದೇಶ ಕಾಯುತ್ತಿದ್ದಾರೆ. ಅದರಲ್ಲೂ ಹಿಮಾಲಯ ಪ್ರದೇಶದ ಗಡಿಯಲ್ಲಿ ಮೈನಸ್ ಡಿಗ್ರಿ ಚಳಿಯಲ್ಲಿ ನಿಂತು ದೇಶಸೇವೆ ಮಾಡುತ್ತಿರುವ ಎಲ್ಲ ಸೈನಿಕರಿಗೆ ಕೋಟಿ ಕೋಟಿ ಧನ್ಯವಾದ ಹೇಳಿದರೂ ಸಾಲದು ಎಂದು ಹೇಳಿದರು.
ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ 1895 ಏ.1ರಂದು ಭಾರತೀಯ ಸೇನೆಯನ್ನು ಸ್ಥಾಪಿಸಲಾಯಿತು. ಆ ಸಮಯದಲ್ಲಿ ಈ ಸೇನೆಯನ್ನು ಬ್ರಿಟಿಷ್ ಭಾರತೀಯ ಸೇನೆ ಎಂದು ಕರೆಯಲಾಗುತ್ತಿತ್ತು. ಆ ವೇಳೆ ಸೇನಾ ಕಮಾಂಡರ್‌ಗಳು ಬ್ರಿಟಿಷರೇ ಆಗಿದ್ದರು. ಬಳಿಕ ಭಾರತ ಸ್ವಾತಂತ್ರ್ಯ ಪಡೆದ ಎರಡು ವರ್ಷಗಳ ನಂತರ ಅಂದರೆ 1949 ಜ.15ರಲ್ಲಿ ಬ್ರಿಟಿಷ್ ಕಮಾಂಡರ್ ಇನ್ ಚೀಫ್, ಜನರಲ್ ಫ್ರಾನ್ಸಿಸ್ ಬುಚರ್ ಅವರು ಕೆ.ಎಂ.ಕಾರ್ಯಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಮೂಲಕ ಲೆಫ್ಟಿನೆಂಟ್ ಜನರಲ್ ಕೆ.ಎಂ.ಕಾರ್ಯಪ್ಪ ಸ್ವಾತಂತ್ರೃ ಭಾರತದ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡರು. ಈ ವಿಶೇಷ ದಿನದ ನೆನಪು ಹಾಗೂ ಭಾರತೀಯ ಸೇನೆಯ ಸೈನಿಕರ ಗೌರವಾರ್ಥವಾಗಿ ಪ್ರತಿ ವರ್ಷ ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ನಿವೃತ ಸೈನಿಕ ಅಲೋಕ್‌ಕುಮಾರ ಪಾಂಡೆ, ಅಲಯನ್ಸ್ ಜಿಲ್ಲಾ ಪ್ರಾಂತಪಾಲ ಮಾದೇಗೌಡ ಮದ್ದೂರು, ಕೃಷಿಕ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಎ.ಆರ್.ಕುಮಾರ್, ಮಲ್ಲೇಶ್, ಮೋಹನ್‌ಕುಮಾರ್, ಶಿಕ್ಷಕ ಶಶಿಧರ್ ಈಚಗೆರೆ, ಪ್ರೊ.ಡೇವಿಡ್, ರಕ್ಷಿತ್‌ರಾಜ್ ಮಂಗಲ, ಧನಂಜಯ ಮತ್ತಿತರರಿದ್ದರು. ಇದೇ ವೇಳೆ ಕೃಷಿಕ ಅಲಯನ್ಸ್ ಸಂಸ್ಥೆಯಿಂದ ನಿವೃತ್ತ ಸೈನಿಕರನ್ನು ಅಭಿನಂದಿಸಲಾಯಿತು.