ಸೋಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಮನ್ಮುಲ್ ನಿರ್ದೇಶಕ ಕೆ.ಡಾಲು ರವಿ ಉದ್ಘಾಟಿಸಿದರು. ಎಂ.ಬಿ. ಹರೀಶ್, ಬಿ.ಸಿ.ಮಧು, ಮಹೇಂದ್ರ, ಪ್ರಮೀಳಾ ಇದ್ದರು. 
ಮಂಡ್ಯ

ಹಾಲು ಉತ್ಪಾದನೆ ಹೆಚ್ಚಿಸಿ ಡೇರಿ ಬಲಪಡಿಸಿ

ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಸೋಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಆವರಣದಲ್ಲಿ ಬುಧವಾರ ಆಯೋಜಿಸಲಾಗಿತ್ತು.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಕೆ.ಡಾಲು ರವಿ ಮಾತನಾಡಿ, ಗ್ರಾಮೀಣ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾಗಬೇಕು. ಗುಣಮಟ್ಟದ ಹಾಲು ಉತ್ಪಾದನೆಗೆ ಒತ್ತು ನೀಡುವ ಮೂಲಕ ಒಕ್ಕೂಟಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಪೂರೈಕೆ ಮಾಡಬೇಕು ಎಂದು ಕರೆ ಹೇಳಿದರು.
ನಂದಿನಿ ಪಶು ಆಹಾರ ಮತ್ತು ಒಕ್ಕೂಟದ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಸಲಹೆ ನೀಡಿದ ಅವರು, ಖಾಸಗಿ ಕಂಪನಿಗಳ ಪಶು ಆಹಾರ ಖರೀದಿಸುವ ಬದಲು ಸಹಕಾರ ಸಂಘಗಳ ಮೂಲಕ ದೊರೆಯುವ ಉತ್ಪನ್ನಗಳಿಗೆ ಆದ್ಯತೆ ನೀಡುವಂತೆ ಮನವಿ ಮಾಡಿದರು.
ಸೋಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿಗೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಿಂದ 4.50 ಲಕ್ಷ ರೂ.ಅನುದಾನ ಮಂಜೂರಾಗಿದ್ದು, ಅದರ ಚೆಕ್‌ನ್ನು ಸಂಘದ ಅಧ್ಯಕ್ಷ ಮಹೇಂದ್ರ ಅವರಿಗೆ ಹಸ್ತಾಂತರಿಸಿದರು. ಮುಂದೆಯೂ ಸಂಘದ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಂಘದ 2025-26ನೇ ಸಾಲಿನ ಪ್ರಗತಿ ಹಾಗೂ ಆರ್ಥಿಕ ವರದಿ ಮಂಡಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುನಲ್ಲಿ ಹೆಚ್ಚು ಅಂಕಗಳಿಸಿದ ಇಬ್ಬರು ವಿದ್ಯಾರ್ಥಿಗಳನ್ನು ಹಾಗೂ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ನಾಲ್ವರು ಸದಸ್ಯರಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಇಬ್ಬರು ಅಂಗವಿಕಲರಿಗೆ ಆರ್ಥಿಕ ನೆರವು ನೀಡಲಾಯಿತು.
ಎಂ.ಬಿ. ಹರೀಶ್, ಮಾರ್ಗ ವಿಸ್ತರಣಾಧಿಕಾರಿ ಬಿ.ಸಿ.ಮಧು, ಸಂಘದ ಅಧ್ಯಕ್ಷ ಮಹೇಂದ್ರ, ಉಪಾಧ್ಯಕ್ಷೆ ಪ್ರಮೀಳಾ, ಕಾರ್ಯದರ್ಶಿ ಕುಮಾರ್, ಸಂಘದ ನಿರ್ದೇಶಕರು, ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.