ಪಟ್ಟಣದಲ್ಲಿರುವ ಮನ್ಮುಲ್ ಉಪ ಕಚೇರಿಯಲ್ಲಿ ಮನ್ಮುಲ್ ನಿರ್ದೇಶಕ ಡಾಲು.ರವಿ ಹಾಲು ಉತ್ಪಾದಕರಿಗೆ ಪರಿಹಾರದ ಚೆಕ್ ಮತ್ತು ಹಾಲು ಕರೆಯುವ ಯಂತ್ರಗಳಿಗೆ ಸಬ್ಸಿಡಿ, ಡೇರಿ ಸಿಬ್ಬಂದಿ ನಿವೃತಿ ಹಣದ ಚೆಕ್‌ಅನ್ನು ವಿತರಿಸಿದರು. ಎಂ. ಬಿ ಹರೀಶ್, ಬಿ. ಸಿ. ಮಧು, ಉದಯ್, ನಾಗಪ್ಪ ಇತರರಿದ್ದರು.
- ಮನ್ಮುಲ್ ನಿರ್ದೇಶಕ ಡಾಲು ರವಿ ಮಾಹಿತಿ
ಕೆ.ಆರ್.ಪೇಟೆ: ಗುಣಮಟ್ಟದ ಹಾಲು ಉತ್ಪಾದನೆ ಮಾಡುವುದರ ಮೂಲಕ ಒಕ್ಕೂಟದ ಆದಾಯವನ್ನು ಹೆಚ್ಚಿಸಬೇಕು. ಇದರಿಂದ ರೈತರಿಗೆ ಲಾಭಾಂಶ ಹೆಚ್ಚಾಗಲಿದೆ ಎಂದು ಮನ್ಮುಲ್ ನಿರ್ದೇಶಕ ಡಾಲು.ರವಿ ಹೇಳಿದರು.
ಪಟ್ಟಣದಲ್ಲಿರುವ ಮನ್ಮುಲ್ ಉಪ ಕಚೇರಿಯಲ್ಲಿ ಹಾಲು ಉತ್ಪಾದಕರಿಗೆ ಪರಿಹಾರದ ಚೆಕ್ ವಿತರಣೆ ಮತ್ತು ಹಾಲು ಕರೆಯುವ ಯಂತ್ರಗಳಿಗೆ ಸಬ್ಸಿಡಿ, ಡೇರಿ ಸಿಬ್ಬಂದಿ ನಿವೃತಿ ಹಣದ ಚೆಕ್ ವಿತರಿಸಿ ಮಾತನಾಡಿದರು.
ಹಾಲು ಉತ್ಪಾದಕರು ಕಡ್ಡಾಯವಾಗಿ ರಾಸುಗಳಿಗೆ ವಿಮೆ ಮಾಡಿಸಬೇಕು. ಶೇ.75ರಷ್ಟು ವಿಮೆ ಕಂತನ್ನು ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಭರಿಸಲಿದೆ. ಶೇ.25ರಷ್ಟು ವಿಮೆ ಕಂತನ್ನು ಕಟ್ಟಿ ಬಾಂಡ್ ಪಡೆಯಬೇಕು. ಆಕಸ್ಮಿಕವಾಗಿ ರಾಸುಗಳು ಮರಣ ಹೊಂದಿದರೆ ವಿಮೆ ಪರಿಹಾರ ಹಣದಿಂದ ರೈತರಿಗೆ ಆರ್ಥಿಕವಾಗಿ ಸಹಾಯವಾಗುತ್ತದೆ ಎಂದರು.
ಅಮೃತ ಸಮಾನವಾದ ಹಾಲಿಗೆ ನೀರು, ಉಪ್ಪು, ಸಕ್ಕರೆ ಅಥವಾ ಬೇರೆ ರಾಸಾಯನಿಕ ವಸ್ತುಗಳನ್ನು ಬೆರಸಿ ಹಾಲು ನೀಡಿದರೆ ಸಂಘವು ಅಭಿವೃದ್ಧಿಯಲ್ಲಿ ಕುಂಠಿತವಾಗುತ್ತದೆ. ಹಾಲು ಉತ್ಪಾದಕರಿಗೆ ಆದಾಯ ಪ್ರಮಾಣವು ತಗ್ಗುತ್ತದೆ. ಕೆಲವು ವ್ಯಕ್ತಿಗಳು ಕಲಬೆರಕೆ ಮಾಡಿದ ಹಾಲನ್ನು ಸಂಘಕ್ಕೆ ಸರಬರಾಜು ಮಾಡಿದಾಗ, ಗುಣಮಟ್ಟದ ಹಾಲು ಪೂರೈಸುವ ಉತ್ಪಾದಕರಿಗೆ ನಷ್ಟ ಉಂಟಾಗುತ್ತದೆ ಎಂದು ಹೇಳಿದರು.
ಮನ್ಮುಲ್ ನಿರ್ದೇಶಕ ಎಂ.ಬಿ ಹರೀಶ್, ಮನ್ಮುಲ್ ಮಾರ್ಗ ವಿಸ್ತರಣಾಧಿಕಾರಿಗಳಾದ ಬಿ.ಸಿ ಮಧು, ಉದಯ್, ನಾಗಪ್ಪ ಅಲ್ಲಿಬಾದಿ, ಶಶಿಧರ್, ರಾಘವೇಂದ್ರ, ಸಂಧ್ಯಾ, ಭಾವನಾ, ಪಶು ವೈದ್ಯರು, ಡೇರಿ ಕಾರ್ಯದರ್ಶಿಗಳು ಇತರರಿದ್ದರು.