ಮಳವಳ್ಳಿ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ನೂತನವಾಗಿ ಅಳವಡಿಸಲಾಗಿರುವ ಅತ್ಯಾಧುನಿಕ ತಂತ್ರಜ್ಞಾನ ಎಕ್ಸರೇ ಯಂತ್ರವನ್ನು ಗುರುವಾರ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಉದ್ಘಾಟನೆ ಮಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಂಜಯ್, ಡಾ.ಸುನೀಲ್, ದೊಡ್ಡಯ್ಯ, ಸಿ.ಪಿ.ರಾಜು ಇದ್ದರು.
ಮಳವಳ್ಳಿ: ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಕೀಲು ಮತ್ತು ಮೂಳೆ ತಜ್ಞರು ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ನಡೆಸಲು ಅತ್ಯಾಧುನಿಕ ತಂತ್ರಜ್ಞಾನದ ಸಿ ಆರ್ಮ್ ಎಕ್ಸ್‌ರೇ ಯಂತ್ರವನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗುರುವಾರ ಉದ್ಘಾಟಿಸಿದರು.
ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿ ವಿಭಾಗದಲ್ಲಿ ಅಳವಡಿಸಲಾಗಿರುವ ಎಕ್ಸರೇ ಯಂತ್ರ ಕ್ಷಮತೆಯ ಬಗ್ಗೆ ಕೀಲು ಹಾಗೂ ಮೂಳೆ ಚಿಕಿತ್ಸಾ ವಿಭಾಗದ ತಜ್ಞ ವೈದ್ಯ ಡಾ.ಸುನಿಲ್ ಯಂತ್ರದ ಬಳಕೆ ಅದರಿಂದ ದೊರೆಯುವ ಪ್ರಯೋಜನಗಳ ಕುರಿತು ವಿವರಿಸಿದರು. ನಂತರ ಶಾಸಕ ಮಾತನಾಡಿ, ಇಂದಿನವರೆಗೂ ಸಿ ಆರ್ಮ್ ಎಕ್ಸ್‌ರೇಗಾಗಿ ಮಂಡ್ಯ, ಮೈಸೂರು ಸೇರಿದಂತೆ ನಗರ ಪ್ರದೇಶಗಳಿಗೆ ಬಡ ರೋಗಿಗಗಳು ಅಲೆಯಬೇಕಾಗಿತ್ತು, ಇದೀಗ ಸುಮಾರು 18 ಲಕ್ಷ ರೂ. ವೆಚ್ಚದಲ್ಲಿ ಈ ಯಂತ್ರವನ್ನು ತಾಲೂಕು ಆಸ್ಪತ್ರೆಗೆ ಒದಗಿಸಲಾಗಿದ್ದು, ತ್ವರಿತ ಹಾಗೂ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಮೂಳೆ ತಜ್ಞ ವೈದ್ಯರಿಗೆ ಅನುಕೂಲವಾಗಲಿದೆ. ನಾಳೆ ಮೊದಲ ರೋಗಿಯೊಬ್ಬರಿಗೆ ಈ ಯಂತ್ರದ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ತಾತ್ಕಾಲಿಕವಾಗಿ ಈ ಯಂತ್ರ ನಿರ್ವಹಿಸುವ ತಂತ್ರಜ್ಞರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ನಂತರ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಶಾಸಕರು, ಆಸ್ಪತ್ರೆಯಲ್ಲಿನ ಚಿಕಿತ್ಸಾ ಸೌಲಭ್ಯ ಕುರಿತು ರೋಗಿಗಳನ್ನು ವಿಚಾರಿಸಿದರು. ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸಂಜಯ್, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ವೀರಭದ್ರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಪಿ.ರಾಜು, ದೊಡ್ಡಯ್ಯ, ಖಜಾಂಚಿ ಬಿ.ಮಹದೇವು, ಕಾಂಗ್ರೆಸ್ ಮುಖಂಡರು ಇದ್ದರು.