ನಾಗಮಂಗಲ ತಾಲೂಕಿನ ಹಾಲ್ತಿ ಆದಿಚುಂಚನಗಿರಿ ಶಾಖಾಮಠದಲ್ಲಿ ನಿರ್ಮಾಣಗೊಂಡಿರುವ ರಾಜಗೋಪುರ.
- ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾಹಿತಿ
ನಾಗಮಂಗಲ : ತಾಲೂಕಿನ ಹಾಲ್ತಿಯ ಆದಿಚುಂಚನಗಿರಿ ಶಾಖಾಮಠದಲ್ಲಿ ನಿರ್ಮಾಣವಾಗಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದ ಮಹಾದ್ವಾರದ ನೂತನ ರಾಜಗೋಪುರ ಉದ್ಘಾಟನೆ ಹಾಗೂ ಕುಂಭಾಭಿಷೇಕವು ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಫೆ.13 ರಂದು ನೆರವೇರಲಿವೆ ಎಂದು ಆದಿಚುಂಚನಗಿರಿ ಮೈಸೂರು ಹಾಗೂ ಹಾಲ್ತಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ತಿಳಿಸಿದರು.
ಶ್ರೀ ಅಮರಾನಂದನಾಥ ಸ್ವಾಮೀಜಿ ಅವರಿಂದ ಸಣ್ಣ ಗುಡಿಸಿಲಿನಿಂದ ಆರಂಭಗೊಂಡ ಶ್ರೀಮಠ ಇಂದು ಇಷ್ಟು ಅಭಿವೃದ್ಧಿಗೊಂಡಿದೆ. ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕೆಂಬುದು ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಮಹಾದಾಸೆಯಾಗಿತ್ತು. ಗುರುಗಳ ಆಶಯದಂತೆ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಐತಿಹಾಸಿಕ ಮಲ್ಲಿಕಾರ್ಜುನ ಸ್ವಾಮಿ ದೇವಾಲಯವಿರುವ ಈ ಕ್ಷೇತ್ರ ಒಂದು ಪ್ರವಾಸಿತಾಣವಾಗಲಿದೆ. 2 ವರ್ಷಗಳ ಹಿಂದೆ ಸಮುದಾಯ ಭವನ ಹಾಗೂ ಮಲ್ಲಿಕಾರ್ಜುನ ಸ್ವಾಮಿ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ಈಗ ರಾಜಗೋಪುರ ಹಾಗೂ ಹಾಲ್ತಿ ಶಾಖಾ ಮಠದ ನೂತನ ಕಟ್ಟಡ ಉದ್ಘಾಟನೆಗೊಳ್ಳಲು ಸಿದ್ಧವಾಗಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಪುಜಾ ಕೈಕಂರ್ಯಗಳು ಜರುಗಲಿದ್ದು, ಫೆ.13 ರಂದು ಶ್ರೀಗಳು ರಾಜಗೋಪುರ ಉದ್ಘಾಟನೆ ಮಾಡಲಿದ್ದಾರೆ. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಮಾಜಿ ಸಚಿವ ಸಾ.ರಾ.ಮಹೇಶ್, ಮಾಜಿ ಶಾಸಕ ಸುರೇಶ್ ಗೌಡ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
3 ದಿನಗಳ ಕಾಲ ಧಾರ್ಮಿಕ ಪೂಜೆ: ಫೆ.11 ಸಂಜೆ ಹೋಮ ಹವನಾದಿಗಳಿಂದ ಆರಂಭಗೊಳ್ಳಲಿದ್ದು, ಫೆ.12 ರಂದು ಸುತ್ತಲಿನ ಗ್ರಾಮಗಳ 60 ದೇವರುಗಳ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಫೆ.13 ರಂದು ಬೆಳಿಗ್ಗೆ 7 ಗಂಟೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ರಾಜಗೋಪುರ ಉದ್ಘಾಟನೆ ಹಾಗೂ ಕುಂಭಾಭಿಷೇಕ ಹಾಗೂ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ನಡೆಯಲಿದೆ ಎಂದು ತಿಳಿಸಿದರು.
ನಿವೃತ್ತ ಪ್ರಾಂಶುಪಾಲ ಡಾ.ಬಿ.ಕೆ.ಲೋಕೇಶ್ ಇದ್ದರು.