ಮಂಡ್ಯದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ ಮಾತನಾಡಿದರು.
- ಗ್ಯಾರಂಟಿ ಯೋಜನೆ ಪ್ರಾಧಿಕಾರದ ಸಭೆ
- ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಆಯೋಜನೆ
- ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ ನೇತೃತ್ವದಲ್ಲಿ ಪರಿಶೀಲನೆ
ಮಂಡ್ಯ: ಎಪ್ಪತೈದು ವರ್ಷ ಮೇಲ್ಪಟ್ಟ ವಯಸ್ಕರ ಹೆಬ್ಬೆಟ್ಟಿನ ಗುರುತನ್ನು ಸ್ಕಾೃನರ್ ತೆಗೆದುಕೊಳ್ಳುತ್ತಿಲ್ಲ. ಪರಿಣಾಮ ಪಡಿತರ ಪಡೆಯುವ ಸಂದರ್ಭದಲ್ಲಿ ವಯೋವೃದ್ಧರು ಪರದಾಡುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಎಪ್ಪತೈದು ವರ್ಷ ಮೇಲ್ಪಟ್ಟ ವಯಸ್ಕರಿಗೆ ಪಡಿತರ ಪಡೆಯಲು ಪರ್ಯಾಯ ವ್ಯವಸ್ಥೆ ಕಲ್ಪಿಸಿ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಯೋಮೆಟ್ರಿಕ್ ತೆಗೆದುಕೊಂಡ ದಿನವೇ ಪಡಿತರ ನೀಡಬೇಕು. ಅಂತೆಯೇ ಪಡಿತರ ವಿತರಣೆ ಬೇಗ ಮಾಡಬೇಕು. ಅನ್ನಸುವಿಧಾ ಯೋಜನೆಯ ಮೂಲಕ 75 ವರ್ಷ ಮೇಲ್ಪಟ್ಟವರಿಗೆ ಈಗಾಗಲೇ ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಕೆಲವರ ಬಳಿ ಮೊಬೈಲ್ ಇಲ್ಲದ ಕಾರಣ ಒಟಿಪಿ ಪಡೆದು ಪಡಿತರ ತಲುಪಿಸಲು ಸಾಧ್ಯವಾಗುತ್ತಿಲ್ಲ. ಪ್ರತಿ ನ್ಯಾಯಬೆಲೆ ಅಂಗಡಿಗಳಲ್ಲಿ ಒಟಿಪಿ ಮತ್ತು ಬಯೋಮೆಟ್ರಿಕ್ ಇಲ್ಲ. ಶೇ.2ರಷ್ಟು ಜನರಿಗೆ ಪಡಿತರವನ್ನು ವಿತರಿಸಲು ಅವಕಾಶವಿದೆ. ಮಾನವೀಯತೆ ದೃಷ್ಟಿಯಿಂದ ವಯಸ್ಕರಿಗೆ ಪಡಿತರವನ್ನು ನೀಡಿ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಐ.ಟಿ, ಜಿ.ಎಸ್.ಟಿ ಪಾವತಿ ಮಾಡುತ್ತಿರುವ ಬಿ.ಪಿ.ಎಲ್ ಕಾರ್ಡ್‌ದಾರರನ್ನು ಎ.ಪಿ.ಎಲ್ ಪರಿವರ್ತಿಸಲಾಗಿದೆ. ಆ ಪಟ್ಟಿಯನ್ನು ಪರಿಶೀಲಿಸಿ ಐ.ಟಿ, ಜಿ.ಎಸ್.ಟಿ ಪಾವತಿಸದ ಅರ್ಹರನ್ನು ಎ.ಪಿ.ಎಲ್ ಪಟ್ಟಿಯಿಂದ ಕೈಬಿಡಿ. ಆರೋಗ್ಯದ ಸಮಸ್ಯೆ ಇರುವ ಅರ್ಹರಿಗೆ ಬಿ.ಪಿ.ಎಲ್ ಕಾರ್ಡ್ ನೀಡಲಾಗುತ್ತದೆ. ಅಂತೆಯೇ ಅವರಿಗೆ ಬಿ.ಪಿ.ಎಲ್ ಕಾರ್ಡ್ ನೀಡಲಾಗುತ್ತದೆ. ಬಿ.ಪಿ.ಎಲ್ ಕಾರ್ಡ್ ನೀಡುವಲ್ಲಿ ವಿಳಂಬ ಮಾಡದೆ 15 ದಿನದೊಳಗಾಗಿ ನೀಡಬೇಕು. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 4,47,166 ಅರ್ಹ ಫಲಾನುಭವಿಗಳು ಇದ್ದಾರೆ. ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 4,64,602 ಅರ್ಹ ಫಲಾನುಭವಿಗಳು ಇದ್ದಾರೆ. ಅವರಿಗೆ ತಲಾ 2,000 ರೂಗಳಂತೆ ಕಳೆದ ಸೆಪ್ಟೆಂಬರ್ ಅಂತ್ಯಕ್ಕೆ ಒಟ್ಟು 2,231 ಕೋಟಿ ರೂ ಪಾವತಿಸಲಾಗಿದೆ. ಅಕ್ಟೋಬರ್ ಮಾಹೆಯ ಹಣವನ್ನು ಬಿಲ್ ಮಾಡಲಾಗಿದ್ದು ಶೀಘ್ರವಾಗಿ ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಲಿದೆ ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಕೆ.ಹನುಮಂತಯ್ಯ ಮಾತನಾಡಿ, ಗೃಹಜ್ಯೋತಿ ಯೋಜನೆಯಡಿ 4,99,156 ಅರ್ಹ ಫಲಾನುಭವಿಗಳಿದ್ದಾರೆ. ಯೋಜನೆ ಪ್ರಾರಂಭವಾದಾಗಿನಿಂದ ಕಳೆದ ಡಿಸೆಂಬರ್‌ವರೆಗೆ ಜಿಲ್ಲೆಯಲ್ಲಿ 511 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಹಳ್ಳಿಗಳಲ್ಲಿ ಬೀದಿ ಬದಿಯ ದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ಬೆಳಗಿನ ಸಮಯದಲ್ಲೂ ದೀಪಗಳು ಉರಿಯುತ್ತಿದೆ. ಬೀದಿ ದೀಪಗಳನ್ನು ಆನ್ ಮತ್ತು ಆಫ್ ಮಾಡಲು ನೀರುಗಂಟಿಗಳಿಗೆ ಜವಾಬ್ದಾರಿ ವಹಿಸಿ ಎಂದು ಹೇಳಿದರು.
ಜಮೀನಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಟಿ.ಸಿ ಮತ್ತು ಕಂಬಗಳನ್ನು ಕಲ್ಪಿಸಲು ತಗಲುವ ವೆಚ್ಚದ ಕುರಿತು ರೈತರಿಗೆ ಮಾಹಿತಿ ನೀಡಿ. ಗುತ್ತಿಗೆದಾರರು ಟಿ.ಸಿ ಮತ್ತು ಕಂಬಗಳನ್ನು ನೀಡಲು ಸರ್ಕಾರ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚಿನ ಹಣದ ಬೇಡಿಕೆ ಇಟ್ಟರೆ ಅಂತಹ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 18.64 ಕೋಟಿಗೂ ಹೆಚ್ಚಿನ ಮಹಿಳೆಯರಿಗೆ ಟಿಕೆಟ್ ವಿತರಿಸಲಾಗಿದೆ. ಇದರಿಂದ ನಿಗಮಕ್ಕೆ 511 ಕೋಟಿ ರೂಗೂ ಅಧಿಕ ಆದಾಯ ಲಭಿಸಿದೆ. ಬೇರೆ ಜಿಲ್ಲೆಯ ಘಟಕದ ಎಕ್ಸ್‌ಪ್ರೆಸ್ ಬಸ್‌ಗಳು ಮಂಡ್ಯದಲ್ಲಿ ನಿಲ್ಲಿಸುತ್ತಿಲ್ಲ. ಇದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಬೇರೆ ಜಿಲ್ಲೆಯ ಘಟಕದ ಬಸ್‌ಗಳು ಮಂಡ್ಯದಲ್ಲಿ ನಿಲ್ಲಿಸುವಂತೆ ನೋಡಿಕೊಳ್ಳಿ. ಮಂಡ್ಯ ಘಕಟದ ಬಸ್‌ಗಳನ್ನು ಮೈಸೂರು - ಮಂಡ್ಯ ಮಾರ್ಗಕ್ಕೆ ಬಿಡಿ. ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಮಂಡ್ಯದಿಂದ ಮೈಸೂರಿಗೆ ತೆರಳುವ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಮಂಡ್ಯ ಘಟಕಕ್ಕೆ ಹೊಸ ಬಸ್‌ಗಳು ಬಂದ ತಕ್ಷಣ ಮಂಡ್ಯ-ಮೈಸೂರು ಬಸ್ ವ್ಯವಸ್ಥೆ ಕಲ್ಪಿಸಿ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ವಹಿಸಿ ಎಂದು ಹೇಳಿದರು.
ಸಭೆಯಲ್ಲಿ ಜಿಪಂ ಯೋಜನಾಧಿಕಾರಿ ಧನುಷ್, ಪ್ರಾಧಿಕಾರದ ಉಪಾಧ್ಯಕ್ಷ ಶಿವಣ್ಣ, ಸದಸ್ಯರಾದ ಬಿ.ಪಿ.ಅಜಯ್‌ಕುಮಾರ್, ಎ.ಬಿ.ಕುಮಾರ, ಕೆ.ರುದ್ರಪ್ಪ, ವೀಣಾ, ಶಂಕರೇಗೌಡ, ಬಸವರಾಜು, ಮಹಮದ್ ಅನ್ಸರ್, ಬಿ.ಎಂ.ರಮೇಶ್, ಪಿ.ಮಾದೇಶ ಇತರರಿದ್ದರು.
ಯುವನಿಧಿಯ ಪ್ರಚಾರ ಮಾಡಿ
ಪ್ರಾಧಿಕಾರದ ಮತ್ತೋರ್ವ ಉಪಾಧ್ಯಕ್ಷ ಎಸ್.ಎಚ್.ರಾಜೇಂದ್ರ ಮಾತನಾಡಿ, ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 6,730 ಫಲಾನುಭವಿಗಳು ನೋಂದಣಿಯಾಗಿದ್ದು, ಕಳೆದ ಸೆಪ್ಟೆಂಬರ್‌ರವರೆಗೆ 18.73 ಕೋಟಿ ರೂ ಅನುದಾನವನ್ನು ಜಿಲ್ಲೆಗೆ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್, ನವೆಂಬರ್ ಮಾಹೆ ಹಣವನ್ನು ಬಿಲ್ ಮಾಡಲಾಗಿದ್ದು, ಶೀಘ್ರವೇ ಪಾವತಿಸಲಾಗುವುದು. ಅಂತೆಯೇ ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ಯುವನಿಧಿ ಯೋಜನೆಯ ಕುರಿತಾಗಿ ಹೆಚ್ಚಿನ ಪ್ರಚಾರ ಕೈಗೊಳ್ಳಿ. ಎಲ್ಲ ಕಾಲೇಜಿನಲ್ಲಿ ಯುವನಿಧಿ ಯೋಜನೆ ಕುರಿತು ಸೂಚನಾ ಫಲಕಗಳನ್ನು ಅಳವಡಿಸಿ ಅರಿವು ಮೂಡಿಸಿ ಎಂದು ಹೇಳಿದರು.