ಮಂಡ್ಯ ತಾಲೂಕು ಗೊರವಾಲೆ ಗ್ರಾಮದಲ್ಲಿ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭವನ್ನು ಪರಿಸರ ಮಿತ್ರ ಜಿ.ಸಿ.ಜಯಶಂಕರ್ ಉದ್ಘಾಟಿಸಿದರು. 
ಮಂಡ್ಯ

ಪುಸ್ತಕ ಪ್ರತಿಯೊಬ್ಬರ ಉತ್ತಮ ಸ್ನೇಹಿತ: ಪರಿಸರ ಮಿತ್ರ ಜಿ.ಸಿ.ಜಯಶಂಕರ್ ಅಭಿಮತ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಗೊರವಾಲೆಯಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ
  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಜಾಗೃತ ಸಮಿತಿಯಿಂದ ಆಯೋಜನೆ
ಮಂಡ್ಯ: ಪುಸ್ತಕ ಪ್ರತಿಯೊಬ್ಬರ ಉತ್ತಮ ಸ್ನೇಹಿತ ಹಾಗೂ ಆಪದ್ಬಾಂಧವ. ಅದರ ಸಹವಾಸದಲ್ಲಿ ನೋವಿಲ್ಲ ಮತ್ತು ಸಂತಸವೇ ಎಲ್ಲ ಎಂದು ಪ್ಲಾಸ್ಟಿಕ್ ವಿರೋಧಿ ಪರಿಸರ ಮಿತ್ರ, ಡಯಟ್ ವಿಶ್ರಾಂತ ಉಪನ್ಯಾಸಕ ಜಿ.ಸಿ.ಜಯಶಂಕರ್ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಜಾಗೃತ ಸಮಿತಿ ವತಿಯಿಂದ ತಾಲೂಕಿನ ಗೊರವಾಲೆ ಗ್ರಾಮದ ಉಪನ್ಯಾಸಕ ಮಧುಸೂದನ್ ನರಸಿಂಹೇಗೌಡ ಅವರ ನಿವಾಸದಲ್ಲಿ ಆಯೋಜಿಸಿದ್ದ ’ಮನೆಗೊಂದು ಗ್ರಂಥಾಲಯ ಅನುಷ್ಠಾನ’ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕ ಓದಿದಷ್ಟು ಸುಖ, ಶಾಂತಿ. ಜ್ಞಾನವನ್ನು ಹಂಚಿದಷ್ಟು ಅಕ್ಷಯವಾಗುತ್ತದೆ. ರೀಲ್ಸ್, ವಾಟ್ಸ್‌ಆ್ಯಪ್, ಚಾಟಿಂಗ್‌ನಲ್ಲಿ ಮುಳುಗಿರುವ ಯುವ ಜನರನ್ನು ಓದಲು ಕರೆ ತರಬೇಕು. ಪುಸ್ತಕದಿಂದ ಜ್ಞಾನ ವೃದ್ಧಿ, ಪ್ಲಾಸ್ಟಿಕ್ ಬಿಟ್ಟು ಬಟ್ಟೆ ಬ್ಯಾಗ್ ಬಳಸುವುದರಿಂದ ಪರಿಸರ ರಕ್ಷಣೆ ಆಗುತ್ತದೆ. ಮನೆಗೊಂದು ಮರ ಊರಿಗೊಂದು ವನ ರೀತಿಯಲ್ಲಿ ಪ್ರತಿಯೊಂದು ಮನೆಯಲ್ಲೂ ಗ್ರಂಥಾಲಯವಿರಬೇಕು. ಮರಗಳಿಂದ ಪರಿಸರ ಉಳಿದರೆ, ಗ್ರಂಥಾಲಯಗಳಿಂದ ಜನರು ಬುದ್ಧಿವಂತರಾಗುತ್ತಾರೆ ಎಂದು ತಿಳಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯ ಗೊರವಾಲೆ ಚಂದ್ರಶೇಖರ್ ಮಾತನಾಡಿ, ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಒಂದಲ್ಲ ಒಂದು ದಿನ ಫಲ ನೀಡುತ್ತದೆ ಎನ್ನುವ ಮಾತಿನ ಹಾಗೆ ಅಕ್ಷರ ಜ್ಞಾನ ಬದುಕು ಕಟ್ಟಿಕೊಡುತ್ತದೆ. ಆ ನಿಟ್ಟಿನಲ್ಲಿ ಮನೆಗೊಂದು ಗ್ರಂಥಾಲಯ ಶ್ಲಾಘನೀಯ ಎಂದು ತಿಳಿಸಿದರು.
ಜಿಲ್ಲಾ ಜಾಗೃತ ಸಮಿತಿ ಸದಸ್ಯೆ ಡಾ.ಕೆಂಪಮ್ಮ ಮಾತನಾಡಿ, ಸುಂದರ ಮನೆ ಬಾಹ್ಯ ವಿಕಾಸಕ್ಕಾದರೆ, ಮನೋವಿಕಾಸಕ್ಕೆ ಪುಸ್ತಕಗಳು ನೆರವಾಗುತ್ತದೆ. ಸರ್ವತೋಮುಖ ವ್ಯಕ್ತಿತ್ವ ರೂಪಿಸಿಕೊಳ್ಳಲು ಪಠ್ಯಪುಸ್ತಕಗಳಿಂದಾಚೆಗಿನ ಓದು ನೆರವಾಗುತ್ತದೆ. ಸಮಾಜ ಅರ್ಥವಾಗಲು, ಒಳ್ಳೆಯದು ಕೆಟ್ಟದ್ದು ತಿಳಿದುಕೊಳ್ಳಲು, ನೆಮ್ಮದಿ ಬೇಕಾದರೆ ಪುಸ್ತಕ ಓದಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಕಾರಸವಾಡಿ ಮಹಾದೇವ ಮಾತನಾಡಿ, ಮೊಬೈಲ್ ಮತ್ತು ಟಿವಿ ಹಾವಳಿ ನಡುವೆ ಮಕ್ಕಳ, ವಯಸ್ಕರ ಮನಸ್ಸು ಬದಲಾಯಿಸಿ ಸರಿ ದಾರಿ ತೋರಿಸುವ ಶಕ್ತಿ ಪುಸ್ತಕಗಳಿಗಿವೆ. ಮನೆಗೊಂದು ಗ್ರಂಥಾಲಯ ಸ್ವಾವಲಂಬನೆಯ ವೇದಿಕೆ ಎಂದರೆ ತಪ್ಪಾಗಲಾರದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಮಕೃಷ್ಣ, ಮುಖಂಡ ಜಿ.ಬಿ. ಜಯರಾಮು, ಜಿಲ್ಲಾ ಜಾಗೃತ ಸಮಿತಿ ಸದಸ್ಯರಾದ ಚಂದ್ರಶೇಖರ ದ.ಕೋ.ಹಳ್ಳಿ, ಎಂ.ಮಂಚಶೆಟ್ಟಿ, ಉಮೇಶ ದಡಮಹಳ್ಳಿ, ಸದ್ದಾಂ ತಗ್ಗಹಳ್ಳಿ ಉಪಸ್ಥಿತರಿದ್ದರು. ಇದೇ ವೇಳೆ ಮನೆಗೊಂದು ಗ್ರಂಥಾಲಯ ಅನುಷ್ಠಾನ ಮಾಡಿದ ಮಧುಸೂದನ್ ನರಸಿಂಹೇಗೌಡ ಹಾಗೂ ಅವರ ಪಾಲಕರನ್ನು ಜಾಗೃತ ಸಮಿತಿ ವತಿಯಿಂದ ಸನ್ಮಾನಿಸಿ ಅಭಿನಂದನಾ ಪತ್ರ ನೀಡಲಾಯಿತು.