ಮದ್ದೂರು ತಾಲೂಕಿನ ಗಡಿ ಗ್ರಾಮವಾದ ಯಡವನಹಳ್ಳಿಯ ರೈತ ಕವಿ ಕ್ರಾಂತಿಸಿಂಹ ಮನೆಯಲ್ಲಿ ಆರಂಭಿಸಿರುವ ಗ್ರಂಥಾಲಯವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಉದ್ಘಾಟಿಸಿದರು. ಸಿ.ಎಂ.ಕ್ರಾಂತಿಸಿಂಹ, ಚಿಕ್ಕಸ್ವಾಮಿ, ಕುಮಾರ್‌ಕೊಪ್ಪ, ಚಂದ್ರಶೇಖರ್, ಚನ್ನಮ್ಮಚನ್ನೇಗೌಡ ಇದ್ದರು. 
ಮಂಡ್ಯ

ಪುಸ್ತಕಗಳಿಂದ ಸಮಾಜದಲ್ಲಿ ಘನತೆ, ಗೌರವ ಲಭ್ಯ

ನಾಗೇಶ ಎಸ್
ಮದ್ದೂರು: ಪ್ರತಿ ಮನೆಯಲ್ಲಿಯೂ ಗ್ರಂಥಾಲಯಗಳು ಇರಲೇಬೇಕು. ಪುಸ್ತಕಗಳು ಬೌದ್ಧಿಕ ಆರೋಗ್ಯ ಕಾಪಾಡುವುದರ ಜತೆಗೆ ಸಮಾಜದಲ್ಲಿ ನಮಗೊಂದು ಘನತೆ ಮತ್ತು ಗೌರವ ತಂದುಕೊಡುತ್ತವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ತಿಳಿಸಿದರು.
ತಾಲೂಕಿನ ಯಡವನಹಳ್ಳಿ ಗ್ರಾಮದಲ್ಲಿ ಭಾನುವಾರ ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಜಾಗೃತಿ ಸಮಿತಿ ಮಂಡ್ಯ ವತಿಯಿಂದ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭದಲ್ಲಿ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಗಡಿ ಗ್ರಾಮವಾದ ಯಡವನಹಳ್ಳಿಯ ರೈತ ಕವಿ ಸಿ.ಎಂ.ಕ್ರಾಂತಿಸಿಂಹ ನಿವಾಸದಲ್ಲಿ ಗ್ರಂಥಾಲಯವನ್ನು ಸ್ಥಾಪಿಸಿ ಗ್ರಾಮಿಣ ಭಾಗದ ಜನರಿಗೆ ಪ್ರೇರಣೆಯಾಗಿದ್ದಾರೆ. ಕರುನಾಡಿನ ಪ್ರತಿ ಮನೆಯಲ್ಲಿಯೂ ಗ್ರಂಥಾಲಯ ಸ್ಥಾಪಿಸಬೇಕೆಂಬುವುದು ನನ್ನ ಆಶಯ ಎಂದರು.
ನಾ ಮೆಚ್ಚಿದ ಪುಸ್ತಕ ಕುರಿತು ಮಾತನಾಡಿದ ಮನ್ಮುಲ್ ಮಾಜಿ ನಿರ್ದೇಶಕ ಡಾ.ಕುಮಾರ್ ಕೊಪ್ಪ, ರೈತ ಕವಿ ಸಿ.ಎಂ.ಕ್ರಾಂತಿಸಿಂಹ ಬರೆದಿರುವ ಅರಿವಿನ ನಡೆ ಕವನ ಸಂಕಲನದಲ್ಲಿ 66 ಕವನಗಳಿವೆ. ಒಂದಕ್ಕಿಂತ ಒಂದು ಉತ್ತಮವಾಗಿವೆ, ಈ ಪುಸ್ತಕ ಸಂಪೂರ್ಣವಾಗಿ ಕನ್ನಡ ಮಯವಾಗಿರುವುದು ಇದರ ಹಿರಿಮೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾನವೀಯ ಮೌಲ್ಯಗಳ ಜತೆಗೆ ಹೋರಾಟ, ಜಾತ್ಯತೀತ, ಜನಪರವಾಗಿವೆ. ಸಾಹಿತ್ಯ, ಸಂಘಟನೆ, ಪತ್ರಿಕೋದ್ಯಮ, ಸಹಕಾರ, ಕೃಷಿ, ಯುವಜನ ಸಂಘಟನೆಯಲ್ಲಿ ಕ್ರೀಯಾಶೀಲವಾಗಿರುವುದರಿಂದ ಜನಮುಖಿ ಕವನಗಳನ್ನ ರಚಿಸಿದ್ದಾರೆ. ಸಾಹಿತಿಗಳು ಯಾವಾಗಲು ಜೀವಪರವಾಗಿರಬೇಕು, ವಿದ್ಯಾರ್ಥಿ-ಯುವಜನರು ತಮ್ಮ ಮನೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಬೇಕೆಂದರು ಸಲಹೆ ನೀಡಿದರು.
ಮಂಡ್ಯದ ವಿಕಸನ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಿರ್ದೇಶಕ ಮಹೇಶ್ ಚಂದ್ರಗುರು ಮನೆಗೊಂದು ಗ್ರಂಥಾಲಯ ಕರಪತ್ರ ಬಿಡುಗಡೆ ಗೊಳಿಸಿದರು, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಸಂಚಾಲಕ ಕಾರಸವಾಡಿ ಮಹಾದೇವ ಅಧ್ಯಕ್ಷತೆ ವಹಿಸಿದರು. ಚನ್ನಮ್ಮಚನ್ನೇಗೌಡ, ಸಾಹಿತಿ ಸಿ.ಎಂ.ಕ್ರಾಂತಿಸಿಂಹ, ಜಾಗೃತಿ ಸಮಿತಿ ಸದಸ್ಯರಾದ ಚಿಕ್ಕಸ್ವಾಮಿ, ಅನಿಲ್ಕುಮಾರ್ ಅಬಲವಾಡಿ, ಚಂದ್ರಶೇಖರ, ಉಮೇಶ್, ಟಿ.ಎಂ.ರಾಜಶೇಖರ್, ಜಿ.ಆರ್. ನವೀನ್ಕುಮಾರ್ ಇದ್ದರು.