ಹೆಬ್ಬಣಿ ಸಮೀಪ ವಿದ್ಯುತ್ ಉಪ ಕೇಂದ್ರ ಸ್ಥಾಪನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಸ್ಥಳ ಪರಿಶೀಲನೆ ನಡೆಸಿದರು. ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಡಾ.ಲೋಕೇಶ್ ಇದ್ದರು.
- 400 ಕೆ.ವಿ. ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ
- ಹೆಬ್ಬಣಿ ಗ್ರಾಮ
ಮಳವಳ್ಳಿ: ಜಿಲ್ಲೆಯಲ್ಲಿ ಮೊದಲ ಬಾರಿಗೆ 400 ಕೆ.ವಿ. ಸಾಮರ್ಥ್ಯದ ವಿದ್ಯುತ್ ಉಪಕೇಂದ್ರವನ್ನು ಸ್ಥಾಪಿಸುವ ಉದ್ದೇಶದಿಂದ ತಾಲೂಕಿನ ಹೆಬ್ಬಣಿ ಗ್ರಾಮದ ಬಳಿ ಜಿಲ್ಲಾಧಿಕಾರಿ ಡಾ.ಕುಮಾರ ಬುಧವಾರ ಸ್ಥಳ ಪರಿಶೀಲಿದರು.
ತಾಲೂಕಿನ ಬಿ.ಜಿ.ಪುರ ಹೋಬಳಿಯ ಹೆಬ್ಬಣಿ ಗ್ರಾಮದ ಸರ್ವೇ ನಂ. 122ರಲ್ಲಿ ಇರುವ ಜಾಗವನ್ನು ಸಂಬಂಧಿಸಿದ ತಂತ್ರಜ್ಞ ತಂಡದೊಂದಿಗೆ ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿದರು.
ಜಾಗದ ವಿಸ್ತೀರ್ಣ, ಭೂಸ್ವರೂಪ, 400 ಕೆವಿ ಉಪಕೇಂದ್ರ ಸ್ಥಾಪನೆಗೆ ಅಗತ್ಯವಿರುವ ತಾಂತ್ರಿಕ ಅನುಕೂಲತೆ, ಸಂಪರ್ಕ ರಸ್ತೆ ಸೌಲಭ್ಯ, ಭದ್ರತಾ ವ್ಯವಸ್ಥೆಗಳು ಹಾಗೂ ಭವಿಷ್ಯ ವಿಸ್ತರಣೆಯ ಸಾಧ್ಯತೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಗ್ರವಾಗಿ ಚರ್ಚಿಸಿದರು.
400 ಕೆವಿ ಉಪಕೇಂದ್ರ ಸ್ಥಾಪನೆಯಾದಲ್ಲಿ ಜಿಲ್ಲೆಯ ಎಲ್ಲ ತಾಲೂಕು ಹಾಗೂ ಗ್ರಾಮಗಳಿಗೆ ಗುಣಮಟ್ಟ, ನಿರಂತರ ವಿದ್ಯುತ್ ಪೂರೈಕೆ ಸಾಧ್ಯವಾಗಲಿದ್ದು, ಕೃಷಿ ಚಟುವಟಿಕೆ, ಕೈಗಾರಿಕೆಗಳು, ವಾಣಿಜ್ಯ ಕ್ಷೇತ್ರ ಮತ್ತು ಗೃಹ ಬಳಕೆಗೆ ಅಗತ್ಯವಿರುವ ವಿದ್ಯುತ್ ಅನ್ನು ಪೂರೈಸಬಹುದಾಗಿದೆ. ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಡಾ.ಲೋಕೇಶ್ ಇತರರಿದ್ದರು.