ಮದ್ದೂರು ನಗರದ ತಾಲೂಕು ಕಚೇರಿಯಲ್ಲಿ 15 ದಿವಸಗಳಿಂದ ಖಾಲಿಯಿರುವ ತಹಸೀಲ್ದಾರ್ ಹುದ್ದೆಗೆ ತಕ್ಷಣ ನಿಯೋಜಿಸಬೇಕೆಂದು ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ವಿ.ಸಿ.ಉಮಾಶಂಕರ್, ಸೊ.ಶಿ.ಪ್ರಕಾಶ್, ಎಂ.ಸಿ.ಲಿಂಗರಾಜು, ಮಹಾಲಿಂಗ, ತಿಪ್ಪೂರು ರಾಜೇಶ್, ವಿಶ್ವಾಸ್ ಇದ್ದರು.  
ಮಂಡ್ಯ

ತಹಸೀಲ್ದಾರ್ ಹುದ್ದೆಗೆ ತಕ್ಷಣ ನಿಯೋಜಿಸಿ

ಪ್ರಮುಖ ಮುಖ್ಯಾಂಶಗಳು

  • ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರಿಂದ ಧರಣೆ
ಮದ್ದೂರು: ನಗರದ ತಾಲೂಕು ಕಚೇರಿಯಲ್ಲಿ 15 ದಿವಸಗಳಿಂದ ಖಾಲಿಯಿರುವ ತಹಸೀಲ್ದಾರ್ ಹುದ್ದೆಗೆ ತಕ್ಷಣ ನಿಯೋಜಿಸಬೇಕೆಂದು ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ವರ್ಗಾವಣೆಗೊಂಡ ತಹಸಿಲ್ದಾರ್ ಅವರ ಜಾಗಕ್ಕೆ ನೂತನ ತಹಸೀಲ್ದಾರರನ್ನು ನಿಯೋಜಿಸದೆ ಇರುವ ಕಾರಣ ಕಚೇರಿಯಲ್ಲಿ ಕೆಲಸ ಕಾರ್ಯಗಳು ಸ್ಥಗಿತಗೊಂಡಿರುವುದು ವಿಷಾದನೀಯ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೂರದ ಗ್ರಾಮಗಳಿಂದ ತಾಲೂಕು ಕಚೇರಿಯಲ್ಲಿನ ಕೆಲಸ ಕಾರ್ಯಗಳಿಗೆ ಬರುವ ರೈತರಿಗೆ ಹಾಗೂ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿದೆ. ಕಚೇರಿಯಲ್ಲಿನ ಎಲ್ಲ ವಿಭಾಗಗಳ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿವೆ. ಈ ಬಗ್ಗೆ ಮೌನ ವಹಿಸಿರುವ ಜಿಲ್ಲಾಧಿಕಾರಿಗಳು ಕೂಡಲೇ ಸರ್ಕಾರಕ್ಕೆ ಮನವಿ ಸಲ್ಲಿಸಿ ಸಾರ್ವಜನಿಕ ಕೆಲಸ ಕಾರ್ಯಗಳು ಹಾಗೂ ಆಡಳಿತಾತ್ಮಕ ವ್ಯವಸ್ಥೆಗೆ ತೊಂದರೆಯಾಗದಂತೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹ ಜ್ಯೋತಿ ಯೋಜನೆಗಳಿಗೆ ಪುನಃ ಅರ್ಜಿ ಸಲ್ಲಿಸಬೇಕೆಂದು ಆದೇಶ ಹೊರಡಿಸಲು ಮುಂದಾಗಿರುವುದು ಖಂಡನಾರ್ಹ ಅಗತ್ಯ ಪರಿಶೀಲನೆ ಬೇಕು ಎಂಬುದಾದರೆ ಗ್ರಾಮ ಲೆಕ್ಕಿಗರು, ರಾಜತ್ವ ನಿರೀಕ್ಷಕರು ಹಾಗೂ ವಿದ್ಯುತ್ ಇಲಾಖೆಯ ಸಿಬ್ಬಂದಿ ನಿಯೋಜಿಸಿ ಅರ್ಹ ಫಲಾನುಭವಿಗಳಿಗೆ ತೊಂದರೆಯಾಗದಂತೆ ಆಯ್ಕೆ ಮಾಡಲು ಮುಂದಾಗಬೇಕು. ಆದ್ದರಿಂದ ತತಕ್ಷಣ ಆದೇಶ ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಜಿಲ್ಲಾ ರೈತ ಸಂಘದ ಪತ್ರಿಕಾ ಕಾರ್ಯದರ್ಶಿ ಸೊ.ಸಿ.ಪ್ರಕಾಶ್ ಮಾತನಾಡಿ, ಬಾಂಗ್ಲಾದೇಶ ಮತ್ತು ನೇಪಾಳದಿಂದ ಬೆಂಗಳೂರು ನಗರ ಹಾಗೂ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದು ಇದು ತುಂಬಾ ಆಘಾತಕಾರಿ ವಿಷಯವಾಗಿದ್ದು, ಸರ್ಕಾರ, ಗುಪ್ತಚರ ಇಲಾಖೆ, ಸ್ಥಳಿಯ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ವಲಸಿಗರ ಮೇಲೆ ತೀವ್ರ ನಿಗಾ ಇಟ್ಟು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದರು.
ಸರ್ಕಾರದ ಜನಪಯೋಗಿ ಯೋಜನೆಗಳನ್ನು ಪ್ರತಿಯೊಂದು ಇಲಾಖೆ ಸಾರ್ವಜನಿಕರಿಗೆ ಮಾಹಿತಿ ಒದಗಿಸಿ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಲಿಂಗರಾಜು, ಜಿಲ್ಲಾ ಉಪಾಧ್ಯಕ್ಷ ಯರಗನಹಳ್ಳಿ ಮಹಾಲಿಂಗ, ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಯುವ ಘಟಕದ ಅಧ್ಯಕ್ಷ ವಿಶ್ವಾಸ್, ಪ್ರಧಾನ ಕಾರ್ಯದರ್ಶಿ ಸೋಂಪುರ ಉಮೇಶ್, ಮುಖಂಡರಾದ ಪಟೇಲ್ ಹರೀಶ್, ಎಸ್.ಎಲ್. ಉಮೇಶ್, ಎಂ.ವೀರಪ್ಪ, ಕಲ್ಯಾಣಿ, ರಾಮಣ್ಣ, ವೀರಭದ್ರಚಾರಿ, ವೀರಪ್ಪ, ವೆಂಕಟೇಗೌಡ, ಸಿದ್ದರಾಮ, ನಂದೀಶ, ಕೃಷ್ಣ ಹಾಗೂ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.